ಬೆಂಗಳೂರು(ಫೆ.04): ಏಷ್ಯಾದ ಅತಿದೊಡ್ಡ ವೈಮಾನಿಕ ಪ್ರದರ್ಶನ ಆಯೋಜನೆಗೆ ಕಳೆದ 25 ವರ್ಷಗಳಿಂದ ನೆಲೆ ಒದಗಿಸಿರುವ ಕರ್ನಾಟಕದ ನೆಲದ ಭಾಷೆಗೇ ‘ಏರೋ ಇಂಡಿಯಾ-2021’ರಲ್ಲಿ ನೆಲೆ ಇಲ್ಲದಂತಾಗಿದೆ. ಈ ಬಾರಿಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ತ್ರಿಭಾಷಾ ಸೂತ್ರವನ್ನು ಸ್ಪಷ್ಟವಾಗಿ ಉಲ್ಲಂಘಿಸುವ ಮೂಲಕ ರಕ್ಷಣಾ ಇಲಾಖೆ ಹಾಗೂ ಎಚ್‌ಎಎಲ್‌ ಕನ್ನಡ ಭಾಷೆಗೆ ಅಪಚಾರ ಎಸಗಿವೆæ.

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ವಿಶ್ವದ ಮೊದಲ ಹೈಬ್ರಿಡ್‌ ವೈಮಾನಿಕ ಪ್ರದರ್ಶನದಲ್ಲಿ ಕನ್ನಡ ಸಂಪೂರ್ಣ ಕಣ್ಮರೆಯಾಗಿದೆ. ಕೇವಲ ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ರಾರಾಜಿಸುತ್ತಿವೆ. ವೇದಿಕೆ ಕಾರ್ಯಕ್ರಮ, ಪ್ರದರ್ಶನ ಮಳಿಗೆಗಳು, ವರ್ಚುವಲ್‌ ಕಾರ್ಯಕ್ರಮ, ಕೊನೆಗೆ ಮಾರ್ಗಸೂಚಿ ಫಲಕಗಳಲ್ಲೂ ಇಂಗ್ಲಿಷ್‌ ಹಾಗೂ ಹಿಂದಿ ಮಾತ್ರ ಇವೆ.

13ನೇ ಬಾರಿಗೆ ನಡೆಯುತ್ತಿರುವ ಏರೋ ಇಂಡಿಯಾ ಪ್ರದರ್ಶನದಲ್ಲಿ ಇದೇ ಪ್ರಥಮ ಬಾರಿಗೆ ಕನ್ನಡವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಈ ಹಿಂದಿನ ಏರೋ ಇಂಡಿಯಾ ಪ್ರದರ್ಶನಗಳಲ್ಲಿ ಕನ್ನಡ, ಇಂಗ್ಲಿಷ್‌ ಹಾಗೂ ಹಿಂದಿಯ ನಾಮಫಲಕಗಳು ಇರುತ್ತಿದ್ದವು. ಆದರೆ, ಈ ಬಾರಿ ಪ್ರದರ್ಶನದಲ್ಲಿ ಸಂಪೂರ್ಣವಾಗಿ ಕನ್ನಡ ಮಾಯವಾಗಿದೆ. ಇದು ಕನ್ನಡಿಗರನ್ನು ಕೆರಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಜ.16ರಂದು ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ನಡೆದಿದ್ದ ಸಿಆರ್‌ಪಿಎಫ್‌ ಕಾರ್ಯಕ್ರಮದಲ್ಲಿ ಕನ್ನಡವನ್ನು ಸಂಪೂರ್ಣ ಕಡೆಗಣಿಸಲಾಗಿತ್ತು. ತ್ರಿಭಾಷಾ ಸೂತ್ರದ ಅನ್ವಯ ಕರ್ನಾಟಕದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಇಂಗ್ಲಿಷ್‌, ಹಿಂದಿ ಹಾಗೂ ಕನ್ನಡ ಮೂರೂ ಬಳಸಬೇಕು. ಆದರೆ, ಕನ್ನಡವನ್ನು ನಿರ್ಲಕ್ಷಿಸಿದ್ದ ಬಗ್ಗೆ ಇತ್ತೀಚೆಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಇಲಾಖೆ, ‘ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕರ್ನಾಟಕದಲ್ಲೂ ಕನ್ನಡ ಬಳಸಬೇಕಿಲ್ಲ. ತ್ರಿಭಾಷಾ ಸೂತ್ರವನ್ನು ರಾಜ್ಯಗಳು ಪಾಲಿಸಿದರೆ ಸಾಕು’ ಎಂಬ ಉತ್ತರ ನೀಡಿತ್ತು. ಈ ಘಟನೆ ನಂತರ ಇದೀಗ ಏರೋ ಇಂಡಿಯಾದಲ್ಲೂ ಕನ್ನಡವನ್ನು ನಿರ್ಲಕ್ಷ್ಯ ಮಾಡಲಾಗಿದೆ.

ಕನ್ನಡ ನೆಲದಲ್ಲೇ ಅಪಚಾರ

ಇತ್ತೀಚೆಗೆ ಭದ್ರಾವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಣಿಸಲಾಗಿತ್ತು. ಈ ಕಹಿ ನೆನಪು ಮರೆಯುವ ಮೊದಲೇ ಕನ್ನಡ ನೆಲದಲ್ಲೇ ಕನ್ನಡಕ್ಕೆ ಅಪಚಾರ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಏರ್‌ ಶೋದಲ್ಲಿ ಇಂಗ್ಲಿಷ್‌ ಮತ್ತು ಹಿಂದಿ ಭಾಷೆಯ ಫಲಕ ಮಾತ್ರ ರಾರಾಜಿಸುತ್ತಿದೆ. ತ್ರಿಭಾಷಾ ಸೂತ್ರ ಮರೆಯಲಾಗಿದೆ. ಇದು ಅತ್ಯಂತ ನೋವಿನ ಸಂಗತಿ.

- ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ