ಹಾಸನ, (ಸೆ.27): ನಾಳೆ (ಸೋಮವಾರ) ಹೋಟೆಲ್ ಓಪನ್ ಮಾಡಿದರೆ, ಊಟ ತಿಂದು ಬಿಲ್ ಕೊಡಬೇಡಿ ಎಂದು ಹೋರಾಟಗಾರರಿಗೆ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಭೂಸುಧಾರಣೆ ಮಸೂದೆ ವಿರೋಧಿಸಿ ರೈತರು ಸೆ.28ರಂದು ಬಂದ್‌ಗೆ ಕರೆ ಕೊಟ್ಟಿದ್ದಾರೆ. ಆದ್ರೆ, ಇದಕ್ಕೆ ಹೋಟೆಲ್ ಸಂಘ ಬೆಂಬಲ ಇಲ್ಲ ಎಂದು ಹೇಳಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ಅವರು ನಾಳೆ ಊಟ ತಿಂದು ಬಿಲ್ ಕೊಡಬೇಡಿ ಎಂದಿದ್ದಾರೆ.

ಕರ್ನಾಟಕ ಬಂದ್ : ಈ 3 ಜಿಲ್ಲೆಗಳಲ್ಲಿ ಇಲ್ಲ

ಇಂದು (ಭಾನುವಾರ) ಹಾಸನದಲ್ಲಿ ಮಾತನಾಡಿದ ಅವರು, ಸುಮಾರು 3 ಸಾವಿರ ಕನ್ನಡಪರ ಸಂಘಟನೆಗಳು ಮತ್ತು ರೈತರು ಒಂದಾಗಿ ಬಂದ್‍ಗೆ ಬೆಂಬಲವನ್ನು ಕೊಟ್ಟಿದೆ. ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ.ರಾ. ಗೋವಿಂದ್, ಶಿವರಾಮೇಗೌಡ, ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಕೆ.ಆರ್ ಕುಮಾರ್, ಮಂಜುನಾಥ್ ದೇವ್, ಗಿರೀಶ್ ಗೌಡ ಸೇರಿದಂತೆ ಅನೇಕ ಸಂಘಟನೆಗಳು ಬಂದ್‍ಗೆ ಕೈಜೋಡಿಸಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಅಧಿಕಾರಕ್ಕೆ ಬಂದಿದ್ದು ರೈತರ ಹೆಸರಿನಲ್ಲಿ ಹೊರತು ಬಿಜೆಪಿ ಹೆಸರಿನಲ್ಲಿಯಲ್ಲ. ಹಸಿರು ಶಾಲು ಹಾಕಿಕೊಂಡು ಕೈಬೀಸುತ್ತಿದ್ದವರು ಈಗ ರೈತರನ್ನು ತುಳಿಯಲು ಹೊರಟಿದ್ದಾರೆ. ರೈತರುಗಳೆಲ್ಲಾ ಇವರ ಗುಲಾಮರಲ್ಲ ಎಂದು ಕಿಡಿಕಾರಿದರು. 

ರೈತರನ್ನು ಕೊಲ್ಲುವ ಎರಡು ಮಸೂದೆಗಳನ್ನು ಯಡಿಯೂರಪ್ಪನವರ ಸರ್ಕಾರವು ಹಿಂಪಡೆಯಲೇಬೇಕು. ರೈತರ ಜಮೀನನ್ನು ದೊಡ್ಡ ದೊಡ್ಡ ಕಾರ್ಖಾನೆ ಮಾಲೀಕರು, ಶ್ರೀಮಂತರು ಸೇರಿದಂತೆ ಯಾರು ಬೇಕಾದರೂ ಕೊಂಡುಕೊಳ್ಳಬಹುದಾದ ಮಸೂದೆ ರೈತರ ಮರಣ ಶಾಸನವಾಗಿದೆ. ಭೂ ಶಾಸನ ಜಾರಿಗೆ ತರಬಾರದಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.