ಬೆಂಗಳೂರು[ಜ.22]: ಸಿದ್ದಗಂಗಾ ಶ್ರೀಗಳು ನಿಧನರಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನಗಳ ಶೋಕಾಚರಣೆ ಹಾಗೂ ಮಂಗಳವಾರ ಸರ್ಕಾರಿ ರಜೆ ಘೋಷಿಸಿದ್ದರೂ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರ ಯಥಾಪ್ರಕಾರ ನಡೆಯಲಿದೆ.

ಶ್ರೀ ಲಿಂಗೈಕ್ಯ : ಜ.22 ರಂದು ರಾಜ್ಯಾದ್ಯಂತ ಸರ್ಕಾರಿ ರಜೆ

ಬೆಳಗ್ಗೆ 10.30ಕ್ಕೆ ಸಂವಿಧಾನ ಕುರಿತ ಸಂವಾದ ಕಾರ್ಯಾಗಾರ ಆಯೋಜಿಸಿದ್ದು, ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಕಾರ್ಯಾಗಾರಕ್ಕೆ ಚಾಲನೆ ನೀಡಲಿದ್ದಾರೆ. ಸಂಜೆ ೪ ಗಂಟೆಗೆ ‘ಬಿಗ್ ಬ್ರದರ್ಸ್ ವರ್ಸಸ್ ಮೈ ಫ್ರೀಡಮ್’ ವಿಷಯ ಕುರಿತ ಚರ್ಚೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್, ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ನಾಯಕ ಕನ್ಹಯ್ಯ ಕುಮಾರ್ ಪಾಲ್ಗೊಳ್ಳಲಿದ್ದಾರೆ. ಸಂಜೆ ೫ ಗಂಟೆಗೆ ‘ದೃಢ ನಿರ್ಧಾರ: ಸಾಂವಿಧಾನಿಕ ಭರವಸೆಗಳು ಮತ್ತು ಅನುಕೂಲಸಿಂಧು ರಾಜಕೀಯ’ ಕುರಿತ ಚರ್ಚೆಯಲ್ಲಿ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ

ಗಮನಿಸಿ: ಜ. 22 ರಂದು ಬ್ಯಾಂಕ್‌ಗಳಿಗೆ ತೆರಳುವ ಮುನ್ನ ಈ ಸುದ್ದಿ ಓದಿ

ಈ ಕುರಿತು ಮಾತನಾಡಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ, ಇದು ಸಂವಿಧಾನ ಕುರಿತ ಕಾರ್ಯಾಗಾರವಾಗಿದೆ. ಹಮೀದ್ ಅನ್ಸಾರಿ ಸೇರಿದಂತೆ ಹಲವು ರಾಷ್ಟ್ರಮಟ್ಟದ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಸರ್ಕಾರಿ ಆದೇಶದಲ್ಲಿ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಬಾರದು ಎಂದು ಹೇಳಿರುವುದರಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ಸರ್ಕಾರದ ವತಿಯಿಂದ ಯಾರೊಬ್ಬರೂ ಪಾಲ್ಗೊಳ್ಳುತ್ತಿಲ್ಲ ಎಂದು ಸ್ಪಷ್ಟನೆ ನೀಡಿದರು.