ಬಳ್ಳಾರಿ :  ಹೊಸಪೇಟೆ ಶಾಸಕ ಆನಂದ ಸಿಂಗ್‌ ಮೇಲೆ ಬೆಂಗಳೂರಿನ ಈಗಲ್ಟನ್‌ ರೆಸಾರ್ಟ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿರುವ ಕಂಪ್ಲಿ ಶಾಸಕ ಗಣೇಶ್‌ ತಮ್ಮ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆಯೇ ತಲೆ ಮರೆಸಿಕೊಂಡು ಮೈಸೂರಿನ ಆಪ್ತರೊಬ್ಬರ ಮನೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದಕ್ಕೆ ರಾಜ್ಯ ಸರ್ಕಾರದ ಪ್ರಭಾವಿ ರಾಜಕೀಯ ನಾಯಕರ ನೆರವು ಸಿಕ್ಕಿದ್ದು, ಬಂಧನದಿಂದ ತಪ್ಪಿಸಿಕೊಳ್ಳಲು ಶಾಸಕ ಗಣೇಶ್‌ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. 

ಘಟನೆ ಬಳಿಕ ತಮ್ಮ ಕುಟುಂಬ ಸದಸ್ಯರ ಜೊತೆ ಬೇರೊಂದು ಮೊಬೈಲ್‌ ಸಂಖ್ಯೆಯಲ್ಲಿ ನಿರಂತರವಾಗಿ ಸಂಪರ್ಕದಲ್ಲಿರುವ ಗಣೇಶ್‌, ‘ನನಗೆ ಏನೂ ಸಮಸ್ಯೆಯಾಗುವುದಿಲ್ಲ. ಜಾಮೀನು ಸಿಗಲಿದ್ದು ಧೈರ್ಯವಾಗಿರಿ’ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.