Asianet Suvarna News Asianet Suvarna News

ರಾಜಾಜಿನಗರ ESI ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರ ಸಾವು, ತನಿಖೆಗೆ ಆದೇಶ: ಸುಧಾಕರ್‌

421 ಕೊರೋನಾ ರೋಗಿಗಳಲ್ಲಿ 52 ಸಾವು|  ತನಿಖೆಗೆ ಆದೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌| ಕೊರೋನಾ ದೃಢಪಟ್ಟ ಕ್ಯಾನ್ಸರ್‌ ಹಾಗೂ ಇತರೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಆಸ್ಪತ್ರೆಗೆ ದಾಖಲು|

K Sudhakar Order to investigate about Corona Patients Death at Rajajinagara ESI Hospital
Author
Bengaluru, First Published Aug 9, 2020, 10:41 AM IST

ಬೆಂಗಳೂರು(ಆ.09):  ರಾಜಾಜಿನಗರದ ಇಎಸ್‌ಐ ಆಸ್ಪತ್ರೆಯಲ್ಲಿ ಇದುವರೆಗೆ ದಾಖಲಾಗಿರುವ ಕೋವಿಡ್‌ ಸೋಂಕಿತರ ಪೈಕಿ ಶೇ.12.8ರಷ್ಟು ಮಂದಿ ಸಾವನ್ನಪ್ಪಿದ್ದು, ಈ ರೀತಿ ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವೇನು ಎಂಬುದನ್ನು ಪರಿಶೀಲಿಸಲು ಪ್ರತ್ಯೇಕ ಸಮಿತಿ ರಚಿಸುವಂತೆ ವೈದ್ಯಾಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಸೂಚಿಸಿದ್ದಾರೆ.

ಶನಿವಾರ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವೈದ್ಯಕೀಯ ಸೌಲಭ್ಯಗಳ ಪರಿಶೀಲನೆ ನಡೆಸಿದ ಸಚಿವರು, ಈವರೆಗೆ ಎಷ್ಟು ಜನ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಎಷ್ಟು ಜನ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಪಡೆದರು.

ಈ ವೇಳೆ, ಆಸ್ಪತ್ರೆಯ ಆಡಳಿತ ವಿಭಾಗದ ಅಧಿಕಾರಿಗಳು ಈವರೆಗೆ 421 ಕೊರೋನಾ ರೋಗಿಗಳು ದಾಖಲಾಗಿದ್ದು, ಇದರಲ್ಲಿ 54 ರೋಗಿಗಳು (ಶೇ.12.8) ಮೃತಪಟ್ಟಿದ್ದಾರೆ. ಕೊರೋನಾ ದೃಢಪಟ್ಟ ಕ್ಯಾನ್ಸರ್‌ ಹಾಗೂ ಇತರೆ ಪೂರ್ವ ಕಾಯಿಲೆಗಳಿಂದ ಬಳಲುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಅಂತಹವರಿಗೆ ಚಿಕಿತ್ಸೆ ಫಲಿಸುವ ಪ್ರಮಾಣ ಕಡಿಮೆ ಇದೆ. ಪ್ರತಿಯೊಂದು ಸಾವಿನ ಆಡಿಟ್‌ ವರದಿ ರೂಪಿಸಲು ಆದೇಶಿಸಲಾಗಿದೆ. ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಕೊರೋನಾ ಸೋಂಕಿತರಿಗೆ ಉಚಿತ ಚಿಕಿತ್ಸೆ: ಹಾವೇರಿ ವೈದ್ಯರ ಕಾರ್ಯಕ್ಕೆ ಸಚಿವ ಸುಧಾಕರ್‌ ಶ್ಲಾಘನೆ

ಇದಕ್ಕೆ ಸಚಿವರು ಪ್ರತಿಕ್ರಿಯಿಸಿ, ಸಮಿತಿಯೊಂದನ್ನು ರಚಿಸಿ ಸಾವಿನ ಪ್ರಮಾಣ ಹೆಚ್ಚಳಕ್ಕೆ ನಿಖರ ಕಾರಣ ಪರಿಶೀಲಿಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ವೀಡಿಯೋ ಕಾಲ್‌ ಮೂಲಕ ಆಸ್ಪತ್ರೆಯ ಕೊರೋನಾ ರೋಗಿಗಳೊಂದಿಗೆ ಸಚಿವರು ಮಾತುಕತೆ ನಡೆಸಿ ಕ್ಷೇಮ ವಿಚಾರಿಸಿದರು.

ಬಳಿಕ ಮಾತನಾಡಿದ ಅವರು, ಇಎಸ್‌ಐ ಆಸ್ಪತ್ರೆಯಲ್ಲಿ ಒಟ್ಟು 494 ಹಾಸಿಗೆಗಳಿದ್ದು, ಸುಮಾರು 150 ಹಾಸಿಗೆಗಳನ್ನು ಕೊರೋನಾ ರೋಗಿಗಳಿಗೆ ಮೀಸಲಿಡಲಾಗಿದೆ. 10 ರೋಗಿಗಳು ಐಸಿಯುನಲ್ಲಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದರು. ಅಲ್ಲದೆ, ಈ ಆಸ್ಪತ್ರೆಯಲ್ಲಿ ಇದುವರೆಗೂ ಕೊರೋನಾ ಸೋಂಕಿತರಾಗಿದ್ದ 42 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಆಸ್ಪತ್ರೆಯಲ್ಲಿ ಆರ್‌ಟಿಪಿಸಿಆರ್‌ ಲ್ಯಾಬ್‌ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭಿಸಲಿದೆ ಎಂದರು.

ಈ ಬಗ್ಗೆ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌ ಅವರು, ಕೊರೋನಾ ಪಿಡುಗು ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೆಗೆದುಕೊಂಡ ನಿಲುವುಗಳನ್ನು ದೇಶದ ಶೇ.91 ರಷ್ಟು ಜನರು ಒಪ್ಪಿದ್ದಾರೆ ಎಂದು ಸಮೀಕ್ಷೆಯೊಂದರಲ್ಲಿ ತಿಳಿದು ಬಂದಿದೆ. ಇದು ತಪ್ಪು ಎನ್ನುವವರು ಈ ಪ್ರಮಾಣದ ಜನರ ಭಾವನೆಗಳಿಗೆ ವಿರುದ್ಧರಾದಂತೆ ಎಂದು ತಿಳಿಸಿದ್ದಾರೆ.
 

Follow Us:
Download App:
  • android
  • ios