5 ತಿಂಗಳ ಬಳಿಕ ಕೆ.ಆರ್.ಮಾರುಕಟ್ಟೆ ಓಪನ್: ಮೊದಲ ದಿನವೇ ಮಾರ್ಕೆಟ್ ಭಣ ಭಣ
5 ತಿಂಗಳ ಬಳಿಕ ಪುನಾರಂಭಗೊಂಡ ಕೆ.ಆರ್.ಮಾರುಕಟ್ಟೆ, ಕಲಾಸಿಪಾಳ್ಯ ಮಾರುಕಟ್ಟೆಗಳತ್ತ ಹೆಜ್ಜೆ ಹಾಕದ ಗ್ರಾಹಕರು, ವರ್ತಕರು| ಕೊರೋನಾ ಭೀತಿ, ಮಂಗಳವಾರವೆಂದು ಮಳಿಗೆ ತೆರೆಯದ ಬಹುತೇಕ ವರ್ತಕರು|
ಅರ್ಧಕ್ಕರ್ಧ ಮಳಿಗೆಗಳು ಮಾತ್ರ ಓಪನ್|
ಬೆಂಗಳೂರು(ಸೆ.02): ಕಳೆದ ಐದಾರು ತಿಂಗಳಿನಿಂದ ಮುಚ್ಚಲಾಗಿದ್ದ ಕೆ.ಆರ್.ಮಾರುಕಟ್ಟೆ ಮತ್ತು ಕಲಾಸಿಪಾಳ್ಯ ಮಾರುಕಟ್ಟೆಗಳಲ್ಲಿ ಮಂಗಳವಾರದಿಂದ ಮತ್ತೇ ವ್ಯಾಪಾರ ಶುರುವಾಗಿದೆ. ಆದರೆ, ಮೊದಲ ದಿನವೇ ವರ್ತಕರು, ಗ್ರಾಹಕರಿಂದ ನೀರಸ ಪ್ರತಿಕ್ರಿಯೆ ಕಂಡುಬಂತು.
ಸೋಮವಾರ ರಾತ್ರಿಯಿಂದಲೇ ನಗರದ ಸುತ್ತಮುತ್ತಲ ಭಾಗಗಳಿಂದ ರೈತರು ತಾವು ಬೆಳೆಗಳನ್ನು ಹೊತ್ತು ಮಾರುಕಟ್ಟೆಗೆ ಆಗಮಿಸುತ್ತಿದ್ದರು. ಆದರೆ, ಕೊರೋನಾ ಸೋಂಕಿನ ಭೀತಿ ಹಾಗೂ ಹಲವರು ಮಂಗಳವಾರ ಎಂಬ ಕಾರಣಕ್ಕೆ ವರ್ತಕರು ಮಳಿಗೆ ತೆರೆದಿರಲಿಲ್ಲ. ಜತೆಗೆ ಬೀದಿ ಬದಿ ವ್ಯಾಪಾರಿಗಳಿಗೆ ವ್ಯಾಪಾರಕ್ಕೆ ಅವಕಾಶ ಕಲ್ಪಿಸದ ಕಾರಣ ಮಾರುಕಟ್ಟೆಕಳೆಗುಂದಿತ್ತು. ಕೆಲವರು ಸಣ್ಣ ಪುಟ್ಟ ವ್ಯಾಪಾರಿಗಳು ಗ್ರಾಹಕರ ನಿರೀಕ್ಷೆಯಲ್ಲಿ ಮಾರುಕಟ್ಟೆಯ ಹೊರಾಂಗಣದಲ್ಲೇ ಕುಳಿತಿದ್ದರು. ತಿಂಗಳ ಬಳಿಕ ಮತ್ತೆ ಮತ್ತೆ ವ್ಯಾಪಾರ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಕೆಲ ಸಣ್ಣ ಪುಟ್ಟ ವ್ಯಾಪಾರಿಗಳು ತಮ್ಮ ನಂಬಿಕೆಯತ್ತ ಮಾರುಕಟ್ಟೆದ್ವಾರದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಕೋಳಿ ಬಲಿ ಕೊಟ್ಟರು.
ಇಂದಿನಿಂದ ಕೆಆರ್ ಮಾರ್ಕೆಟ್, ಕಲಾಸಿಪಾಳ್ಯ ರೀ ಓಪನ್
ವರ್ತಕರಿಂದಲ್ಲೂ ನಿರಾಸಕ್ತಿ
ಸಗಟು ಮಾರುಕಟ್ಟೆ ಕಲಾಸಿಪಾಳ್ಯದಲ್ಲಿ ಸುಮಾರು 400 ಸಗಟು ತರಕಾರಿ ಮಳಿಗೆಗಳಿವೆ. ಈ ಪೈಕಿ ಮಂಗಳವಾರ 250-300 ಮಳಿಗೆಗಳನ್ನು ಮಾತ್ರ ತೆರೆಯಲಾಗಿತ್ತು. ಪ್ರತಿನಿತ್ಯ 200 ಗಾಡಿಯಷ್ಟುಬರುವ ಕಡೆಯಲ್ಲಿ ಮಂಗಳವಾರ ಕೇವಲ 50 ಗಾಡಿ ಮಾತ್ರ ತರಕಾರಿ ಪೂರೈಕೆಯಾಗಿದೆ. ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಚುರುಕುಗೊಂಡು ಸಹಜ ಸ್ಥಿತಿಗೆ ಬರಲು ಇನ್ನೂ ಒಂದು ವಾರ ಬೇಕಾಗುತ್ತದೆ ಎಂದು ಕಲಾಸಿಪಾಳ್ಯ ತರಕಾರಿ-ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ. ಗೋಪಿ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ಶುಭ ದಿನವಲ್ಲ!
ಕಳೆದ 5 ತಿಂಗಳಿನಿಂದ ನಷ್ಟಕ್ಕೆ ಒಳಗಾಗಿರುವ ವರ್ತಕರು, ರೈತರಿಗೆ ಮಾರುಕಟ್ಟೆತೆರೆದು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಮಂಗಳವಾರ ಎಂಬ ಕಾರಣಕ್ಕೆ ಮೊದಲ ದಿನವೇ ಹಲವರು ವ್ಯಾಪಾರ ಆರಂಭಿಸಿಲ್ಲ. ಬುಧವಾರದ ನಂತರ ಅವರವರ ಅನುಕೂಲ ಮತ್ತು ನಂಬಿಕೆ ಮೇರೆಗೆ ಮಳಿಗೆಗಳನ್ನು ತೆರೆಯಲು ಉದ್ದೇಶಿಸಿದ್ದಾರೆ ಎಂದು ವರ್ತಕರು ಮಾಹಿತಿ ನೀಡಿದರು.
ಹೂವಿನ ವ್ಯಾಪಾರವೂ ಇಲ್ಲ!
ಕೆ.ಆರ್.ಮಾರುಕಟ್ಟೆಯಲ್ಲಿ ಹೂವಿನ ವ್ಯಾಪಾರ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಹಲವು ತಿಂಗಳಿನಿಂದ ಮಾರುಕಟ್ಟೆಬಂದ್ ಆಗಿದ್ದರಿಂದ ಆಯಾ ಪ್ರದೇಶವಾರು ಹೂವಿನ ವ್ಯಾಪಾರ ನಡೆಯುತ್ತಿದೆ. ಮಂಗಳವಾರ ಮುಂಜಾನೆ ಕೆಲವರು ರಸ್ತೆ ಬದಿಯಲ್ಲಿ ವ್ಯಾಪಾರ ನಡೆಸಿದರು. 2-3 ಹೂವಿನ ಮಳಿಗೆಗಳು ಮಾತ್ರ ತೆರೆದಿದ್ದವು. ಹೂವಿನ ವ್ಯಾಪಾರ ಆಯಾ ಪ್ರದೇಶವಾರು ನಡೆಯುತ್ತಿದೆ. ಕಲಾಸಿಪಾಳ್ಯ, ಮಾವಳ್ಳಿ, ದಾಸರಹಳ್ಳಿ, ಶಾಂತಿನಗರ, ಕಾಮಾಕ್ಷಿಪಾಳ್ಯ ಸೇರಿದಂತೆ ವಿವಿಧೆಡೆ ವ್ಯಾಪಾರ ನಡೆಸುತ್ತಿದ್ದಾರೆ. ನಾಳೆಯಿಂದ ಶೇ.20ರಷ್ಟುವರ್ತಕರು ಮಾತ್ರ ಶುರು ಮಾಡಬಹುದು. ಈ ಹಿಂದಿನಂತೆ ವ್ಯಾಪಾರ ನಡೆಯಲಿಲ್ಲ ಎಂದು ಹೂವಿನ ವ್ಯಾಪಾರಿಗಳಾದ ಮಂಜುನಾಥ್ ಹಾಗೂ ದಿವಾಕರ್ ಹೇಳಿದರು.
ಪಾಲಿಕೆ ನಿರ್ಧಾರಕ್ಕೆ ಖಂಡನೆ
ನಗರ ಕೇಂದ್ರಿತ ಈ ಮಾರುಕಟ್ಟೆಗಳನ್ನು ಸೆ.30ರ ವರೆಗೆ ಮಾತ್ರ ತಾತ್ಕಾಲಿಕವಾಗಿ ಆರಂಭಿಸಲಾಗಿದೆ ಎಂಬ ಬಿಬಿಎಂಪಿ ಹೇಳಿಕೆಯನ್ನು ವ್ಯಾಪಾರಿಗಳು, ರೈತರು ಖಂಡಿಸಿದ್ದಾರೆ. ಈಗಾಗಲೇ ವ್ಯಾಪಾರವಿಲ್ಲದೆ ನಷ್ಟಅನುಭವಿಸಿದ್ದೇವೆ. ಇದರ ಮಧ್ಯೆ ಸಾಲ ಮಾಡಿ ಬಂಡವಾಳ ಹೂಡಿ ವ್ಯಾಪಾರ ಆರಂಭಿಸಿದ್ದೇವೆ. ಈಗ ಇದನ್ನು ತಾತ್ಕಾಲಿಕ ಎಂದರೆ ವ್ಯಾಪಾರಿಗಳು ಇನ್ನಷ್ಟು ಸಾಲದ ಸುಳಿಗೆ ಒಳಗಾಗಬೇಕಾಗುತ್ತದೆ. ಸರ್ಕಾರ ಹಾಗೂ ಬಿಬಿಎಂಪಿ ಪೂರ್ಣ ಪ್ರಮಾಣದಲ್ಲಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಬೇಕು ಎಂದು ಎಂದು ಗೋಪಿ ಆಗ್ರಹಿಸಿದ್ದಾರೆ.