ಬೆಂಗಳೂರು(ಸೆ.14): ಹೈಕೋರ್ಟ್‌ ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ಷೇಪಿಸಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಕಾರ್ಯದರ್ಶಿ ಹಾಗೂ ನ್ಯಾಯಾಂಗ ರಿಜಿಸ್ಟ್ರಾರ್‌ ಅವರಿಗೆ ಕಟುವಾದ ಪದಗಳ ಬಳಸಿ ಇ-ಮೇಲ್‌ ಕಳುಹಿಸಿ ವಕೀಲ ಜಗದೀಶ್‌ ಶಾಸ್ತ್ರಿ ಅವರನ್ನು ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತು.

ವಕೀಲ ಜಗದೀಶ್‌ ಶಾಸ್ತ್ರಿಯವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ, ನೀವು ಕಳಿಸುವ ಇ-ಮೇಲನ್ನು ಕೋರ್ಟ್‌ ಅಥಾರಿಟಿ ಸರಿಯಾಗಿ ಪರಿಶೀಲಿಸುವುದಿಲ್ಲ ಹಾಗೂ ಸೂಕ್ತವಾಗಿ ಸ್ಪಂದಿಸುವುದಿಲ್ಲ ಎಂದು ದೂರುವುದರ ಜೊತೆಗೆ ಆಕ್ಷೇಪಾರ್ಹ ಮತ್ತು ಕಟು ಪದಗಳನ್ನು ಬಳಕೆ ಮಾಡಿದ್ದೀರಿ. ಹೈಕೋರ್ಟ್‌ ಅಥಾರಿಟಿ ಅಂದರೆ ಮುಖ್ಯ ನ್ಯಾಯಮೂರ್ತಿಯೇ ಆಗಿರುತ್ತಾರೆ. ನೀವು ನೇರವಾಗಿ ಮುಖ್ಯ ನ್ಯಾಯಮೂರ್ತಿ ವಿರುದ್ಧ ಕಟು ಪದ ಬಳಸುತ್ತಿದ್ದೀರಿ ಎಂದು ಗರಂ ಆದರು. ಇದರಿಂದ ಸ್ವಲ್ಪ ಗಲಿಬಿಲಿಗೆ ಒಳಗಾದ ಜಗದೀಶ್‌, ತನ್ನ ವರ್ತನೆಗೆ ಕ್ಷಮೆ ಕೋರುತ್ತೇನೆ. ನ್ಯಾಯಾಲಯ ನನ್ನ ಕ್ಷಮಿಸಬೇಕು ಎಂದು ಪರಿಪರಿಯಾಗಿ ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯನ್ಯಾಯಮೂರ್ತಿಗಳು, ನಿಮ್ಮ ಹೆಸರು ಶಾಸ್ತ್ರಿ. ನಿಮ್ಮ ನಡತೆ ಹಾಗೂ ಜ್ಞಾನವು ಶಾಸ್ತ್ರಿಯಂತೆ ಘನತೆಯಿಂದ ಕೂಡಿರಬೇಕು. ನೀವು ಏನೆಂದು ಇ-ಮೇಲ್‌ ಮಾಡಿದ್ದೀರಿ ಎಂಬುದನ್ನು ಬಹಿರಂಗವಾಗಿ ಓದಬೇಕಾ ಎಂದು ಪ್ರಶ್ನಿಸಿದರು.

ಸಮರ್ಪಕ ಚಿಕಿತ್ಸೆ ಸಿಗದೆ ಕೊರೋನಾ ಸೋಂಕಿತರ ಸಾವು: ತನಿಖೆಗೆ ಆದೇಶ

ನೀವು ಮುಖ್ಯ ನ್ಯಾಯಮೂರ್ತಿ ವಿರುದ್ಧ ದೂರು ನೀಡಬೇಕಾದರೆ ಅಥವಾ ನಿಂದಿಸ ಬೇಕಾದರೆ ನೇರವಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ದೂರು ಬರೆಯಿರಿ. ನೀವು ಅದೇನು ನಿಂದನೆ ಮಾಡಲು ಬಯಸುತ್ತೀರೋ ಅದನ್ನು ಈಗ ಮಾಡಿ. ಅದನ್ನು ಬಿಟ್ಟು ನನ್ನ ಸಿಬ್ಬಂದಿಗೆ ನಿಂದನೆ ಮಾಡಿದರೆ ಸಹಿಸೋಕೆ ಆಗುವುದಿಲ್ಲ. ನನ್ನ ಸಿಬ್ಬಂದಿಗೆ ನಿಂದಿಸಿದ ಕಾರಣಕ್ಕೆ ಇಲ್ಲಿಯವರೆಗೂ ಈ ಪ್ರಕರಣವನ್ನು ತರಲಾಗಿದೆ. ಕೋರ್ಟ್‌ ಸಿಬ್ಬಂದಿ ಎಂತಹ ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು ನಿಮಗೆ ತಿಳಿಯುವುದಿಲ್ಲ ಎಂದು ಚಾಟಿ ಬೀಸಿದರು. ಇದರಿಂದ ಮತ್ತಷ್ಟು ಮುಜುಗರಕ್ಕೆ ಒಳಗಾದ ಜಗದೀಶ್‌ ಶಾಸ್ತ್ರೀ ಮತ್ತೊಮ್ಮೆ ಕ್ಷಮೆ ಕೋರಿದರು. ಹೀಗಾಗಿ, ಆ ವಿಚಾರವನ್ನು ಮುಖ್ಯ ನ್ಯಾಯಮೂರ್ತಿಗಳು ಅಲ್ಲಿಗೆ ಕೈಬಿಟ್ಟರು.

ನ್ಯಾಯಾಲಯದ ಬಗ್ಗೆ ಗೌರವವಿದೆ: ನಾವದಗಿ

ಈ ವಿಚಾರವನ್ನು ಸರ್ಕಾರಿ ವಕೀಲರ ಮೂಲಕ ತಿಳಿದುಕೊಂಡ ರಾಜ್ಯ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಹಾಜರಾಗಿ, ಕರ್ನಾಟಕದ ವಕೀಲರು ಮುಖ್ಯ ನ್ಯಾಯಮೂರ್ತಿ ಹಾಗೂ ಹೈಕೋರ್ಟ್‌ ಬಗ್ಗೆ ತುಂಬಾ ಗೌರವ ಇಟ್ಟುಕೊಂಡಿದ್ದಾರೆ. ಈ ಘಟನೆ ನಡೆದಿರುವುದಕ್ಕೆ ವಕೀಲರ ಸಮುದಾಯದ ಪರವಾಗಿ ನಾನು ಕೋರ್ಟ್‌ಗೆ ಕ್ಷಮೆ ಯಾಚಿಸುತ್ತೇನೆ ಎಂದರು.

ಅದಕ್ಕೆ ಮುಖ್ಯನ್ಯಾಯಮೂರ್ತಿಗಳು ‘ಕ್ಷಮೆ ಕೋರುವ ಅಗತ್ಯವಿಲ್ಲ, ನ್ಯಾಯಾಲಯ ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಕೆಲಸ ಮಾಡುತ್ತಿದೆ ಎಂಬುದನ್ನು ಜಗದೀಶ್‌ ಶಾಸ್ತ್ರೀ ಮೂಲಕ ಎಲ್ಲಾ ವಕೀಲರಿಗೆ ಮನವರಿಕೆಯಾಗಲಿ ಎಂಬ ಕಾರಣಕ್ಕೆ ಪ್ರಕರಣವನ್ನು ಇಲ್ಲಿವರೆಗೂ ತರಲಾಯಿತು’ ಎಂದು ವಿಚಾರವನ್ನು ಮುಕ್ತಾಯಗೊಳಿಸಿದರು.