ಬೆಂಗಳೂರು: ಆಪರೇಷನ್ ಕಮಲದ ಯಾವುದೇ ಭೀತಿ ಇಲ್ಲ ಎಂದು ನಿರಾಳವಾಗಿರುವ ಜೆಡಿಎಸ್‌ಗೂ ಬಂಡಾಯದ ಬಿಸಿ ತಟ್ಟಿದ್ದು, ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ನಾರಾಯಣ ಗೌಡ ಅಧಿವೇಶನದ ಮೊದಲ ದಿನ ಗೈರಾಗಿರುವ ಮೂಲಕ ಶಾಕ್ ನೀಡಿದ್ದಾರೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಧೋರಣೆಯ ಬಗ್ಗೆ ಅಸಮಾಧಾನಗೊಂಡಿರುವ ನಾರಾಯಣಗೌಡ, ಅನಾರೋಗ್ಯದ ನೆಪ ನೀಡಿ ಸದನಕ್ಕೆ ಗೈರಾಗಿದ್ದರು ಎಂಬ ಮಾತುಗಳು ಕೇಳಿಬಂದಿವೆ. 

ಅನಾರೋಗ್ಯದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ಮುಂಬೈಗೆ ತೆರಳಿದ್ದಾರೆ. ಅವರು ಚಿಕಿತ್ಸೆ ಪಡೆದುಕೊಂಡು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆ. ಆಪರೇಷನ್ ಕಮಲಕ್ಕೊಳಗಾಗುವ ಆತಂಕ ಇಲ್ಲ. ಜೆಡಿಎಸ್‌ನಲ್ಲಿಯೇ ಅವರು ಇರಲಿದ್ದಾರೆ ಎಂದು ಜೆಡಿಎಸ್‌ನ ಪ್ರಮುಖರು ಸಮಜಾಯಿಷಿ ನೀಡಿದ್ದಾರೆ. 

ಈ ನಡುವೆ ಸ್ವತಃ ನಾರಾಯಣಗೌಡ ವಾಟ್ಸ್‌ಆಪ್ ಸಂದೇಶದ ಮೂಲಕ ಸುದ್ದಿ ರವಾನಿಸಿ, ಅನಾರೋಗ್ಯದ ಹಿನ್ನೆಲೆಯಲ್ಲಿ ಸದನಕ್ಕೆ ಹಾಜರಾಗುತ್ತಿಲ್ಲ ಎಂದಿದ್ದಾರೆ.