ಬೆಂಗಳೂರು(ಮಾ.07): ‘ಪ್ರವರ್ಗ 2ಎ’ ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ 14 ದಿನಗಳಿಂದ ಧರಣಿ ನಡೆಸುತ್ತಿದ್ದರೂ ಒಬ್ಬ ಸಚಿವರೂ ಕೂಡ ಸ್ಥಳಕ್ಕೆ ಬಂದು ಸಣ್ಣ ಭರವಸೆಯನ್ನೂ ನೀಡಿಲ್ಲ. ಜವಾಬ್ದಾರಿಯುತ ಯಾವುದೇ ಸರ್ಕಾರ ಈ ಪರಿ ನಿರ್ಲಕ್ಷ್ಯ ತೋರುವುದಿಲ್ಲ ಎಂದು ಕೂಡಲಸಂಗಮದ ಪಂಚಮಸಾಲಿ ಮಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೀಸಲಾತಿಗಾಗಿ ಕೂಡಲ ಸಂಗಮದಿಂದ ಬೆಂಗಳೂರಿಗೆ ಜ.14ರಿಂದ 20ರವರೆಗೆ 708 ಕಿ.ಮೀ. ಪಾದಯಾತ್ರೆ ನಡೆಸಿದ್ದಾಯಿತು. ಬಳಿಕ ಬೃಹತ್‌ ಸಮಾವೇಶ ನಡೆಸಿ ಹಕ್ಕೊತ್ತಾಯ ಮಂಡಿಸಿದ್ದಾಯಿತು. ನಂತರ ಧರಣಿ ಸತ್ಯಾಗ್ರಹ ಆರಂಭಿಸಿ 14 ದಿನಗಳು ಕಳೆದಿವೆ. ಸಾಮಾಜಿಕವಾಗಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗಿದ್ದರೆ ಮೀಸಲಾತಿ ಕಲ್ಪಿಸಿ ಸರಿಪಡಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಸಮುದಾಯವೇ ಹೋರಾಟ ನಡೆಸಿದರೂ ಸರ್ಕಾರ ಸ್ಪಂದಿಸದಿರುವುದು ವಿಷಾದಕರ. ಪಂಚಮಸಾಲಿಗಳಿಗೆ ತಾಳ್ಮೆ ಹೆಚ್ಚು. ಸರ್ಕಾರ ಎಷ್ಟುದಿನಗಳಿಗೆ ನಮ್ಮ ಬೇಡಿಕೆಗೆ ಸ್ಪಂದಿಸುವುದೋ ಕಾದು ನೋಡೋಣ. ಆದರೆ, ತಾಳ್ಮೆಯ ಕಟ್ಟೆಒಡೆಯುವ ಮೊದಲು ಸರ್ಕಾರ ಎಚ್ಚೆತ್ತುಕೊಂಡರೆ ಒಳ್ಳೆಯದು ಎಂದರು.

ಪಂಚಮಸಾಲಿ ಫೈಟ್‌: ಮಾಡು ಇಲ್ಲವೇ ಮಡಿ ಹೋರಾಟಕ್ಕೆ ತೀರ್ಮಾನ

ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ. ಸೋಮವಾರದಿಂದ ಸದನದಲ್ಲೂ ಪಂಚಮಸಾಲಿ ಸಮುದಾಯದ ಶಾಸಕರು ಮೀಸಲಾತಿ ಪರ ದನಿ ಎತ್ತಲು ಪತ್ರ ಬರೆಯಲಾಗಿದೆ. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಈ ಸಂಬಂಧ ಸಂಪೂರ್ಣ ಬೆಂಬಲ ನೀಡಲು ಕೋರಿದ್ದೇವೆ. ನಮ್ಮ ಎಲ್ಲ ಶಾಸಕರೂ ಸಹಕಾರ ನೀಡುತ್ತಾರೆಂಬ ವಿಶ್ವಾಸವಿದೆ ಎಂದರು.

ಧರಣಿಯಲ್ಲಿ ಅ.ಭಾ.ಲಿಂ. ಪಂಚಮಸಾಲಿ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್‌, ಶಾಸಕರಾದ ಅರವಿಂದ ಬೆಲ್ಲದ, ಸಿದ್ದು ಸವದಿ ಸೇರಿದಂತೆ ಸಮುದಾಯದ ವಿವಿಧ ಜಿಲ್ಲಾ ಮುಖಂಡರು ಭಾಗವಹಿಸಿದ್ದಾರೆ.