ಧಾರವಾಡ, (ಡಿ.26): ಲಿಂಗಾಯತ ಒಳಪಂಗಡಗಳನ್ನ ಒಬಿಸಿಗೆ, ಪಂಚಮಸಾಲಿಯನ್ನ 2ಎಗೆ ಸೇರಿಸಲೇಬೇಕು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದ್ದಾರೆ.

ಧಾರವಾಡದಲ್ಲಿ ಇಂದು (ಶನಿವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಕೃಷಿ ಆಧಾರಿತ ಮತ್ತು ಆರ್ಥಿಕವಾಗಿ ಪಂಚಮಸಾಲಿ ಹಿಂದುಳಿದೆ. ಆದ್ದರಿಂದಲೇ ಪಂಚಮಸಾಲಿಗೆ 2ಎ ಮೀಸಲಾತಿ ನೀಡುವಂತೆ ಹಲವು ಬಾರಿ ಸಿಎಂಗೆ ಮನವಿ ಮಾಡಿದ್ದೇವೆ. ಆದ್ರೆ ಅವರಿಂದ ಯಾವುದೇ ಪ್ರತಿಕ್ರಿಯೆ ದೊರತಿಲ್ಲ, ಇನ್ನು ಮುಂದೆ ನಾವು ಈ ರೀತಿ ಇರಲ್ಲ ಎಂದು ಖಡಕ್ ಆಗಿ ಹೇಳಿದರು.

ಬಿಎಸ್‌ವೈ ಸರ್ಕಾರಕ್ಕೆ ಮತ್ತೊಮ್ಮೆ ಖಡಕ್‌ ಎಚ್ಚರಿಕೆ ಕೊಟ್ಟ ಸ್ವಾಮೀಜಿ

ನಾವು ಪ್ರತಿಭಟನೆಯ ಹಾದಿ ಹಿಡಿಯಲಿದ್ದೇವೆ. ಅದೇ ಕಾರಣದಿಂದ ಜನವರಿ 14 ರಿಂದ ಕೂಡಲಸಂಗಮದಿಂದ ಬೆಂಗಳೂರಿಗೆ ನಡೆದುಹೋಗುತ್ತಿದ್ದೇವೆ. ಅಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧಾರ ಮಾಡಿದ್ದೇವೆ. ಬಡ ಲಿಂಗಾಯತ ಸಮುದಾಯಗಳನ್ನ ಸಹ ಒಬಿಸಿಗೆ ಸೇರಿಸಬೇಕು ಎಂದು ಶ್ರೀಗಳು ಆಗ್ರಹಿಸಿದರು.

ಸಿಎಂ ಲಿಂಗಾಯತರ ಋಣದಲ್ಲಿದ್ದಾರೆ. ಹೀಗಾಗಿ ಆ ಋಣವನ್ನ ಅವರು ತೀರಿಸಬೇಕು. ಶೇ70 ರಷ್ಟು ನಮ್ಮ ಸಮುದಾಯವೇ ಸಿಎಂ ಬೆನ್ನಿಗೆ ನಿಂತಿದೆ. ಈ ಸಂಬಂಧ RSSನ ಹಿರಿಯರಿಗೂ ನಮ್ಮ ಮನವಿ ಇದೆ. ಕೇಂದ್ರ ಸರ್ಕಾರಕ್ಕೆ ಆರ್‌ಎಸ್‌ಎಸ್ ಹಿರಿಯರು ಸಹ ಮನವಿ ಮಾಡ್ಬೇಕು. ಮಹಾರಾಷ್ಟ್ರದಲ್ಲಿ ಹೇಗೆ ಅವರಿಗೆ ಮೀಸಲಾತಿಗೆ ಅವಕಾಶ ನೀಡಿದ್ದಾರೋ, ಅದೇ ರೀತಿ ನಮ್ಮ ಸಮುದಾಯಕ್ಕೂ ಸಹ ಮೀಸಲಾತಿ ಸಿಗಲು ಆರ್‌ಎಸ್‌ಎಸ್‌ ಸ್ಪಂದಿಸಬೇಕು ಎಂದು ಸ್ವಾಮೀಜಿ ಹೇಳಿದರು.

ಬೃಹತ್​ ಪಂಚಮಸಾಲಿ  ಮೂಲಕ ಅಂದೇ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ. ಸಿಎಂ ಮನವಿ ಹಿನ್ನೆಲೆ ಆಕ್ಟೊಬರ್ 27 ರಂದು ಮಾಡಿದ್ದ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟಿದ್ದೆವು. ಒಂದು ತಿಂಗಳ ಗಡುವನ್ನ ಸಿಎಂಗೆ ನೀಡಿದ್ದೆವು. ಆದರೆ ಸಿಎಂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಆರಂಭಿಸುತ್ತಿರುವ ಪ್ರತಿಭಟನೆಯಲ್ಲಿ ನಮ್ಮ ಎಲ್ಲ ಜನಪ್ರತಿನಿಧಿಗಳು ಭಾಗಿಯಾಗಬೇಕು ಎಂದು ಮನವಿ ಮಾಡಿದರು.