Asianet Suvarna News Asianet Suvarna News

ರಾಮುಲು ಜತೆ ಜಾರಕಿಹೊಳಿ ಬ್ರದರ್ಸ್‌: ಫೋಟೋ ವೈರಲ್‌

ರಾಮುಲು ಜತೆ ಜಾರಕಿಹೊಳಿ ಬ್ರದರ್ಸ್‌: ಫೋಟೋ ವೈರಲ್‌| ‘ಆಪರೇಷನ್‌ ಕಮಲ’ ಅನುಮಾನ ಸೃಷ್ಟಿಸಿದ ಚಿತ್ರ

jarkiholi brothers with bjp leader sriramulu photo gets viral
Author
Belagavi, First Published Dec 22, 2018, 7:52 AM IST

ಬೆಳಗಾವಿ[ಡಿ.22]: ಕಾಂಗ್ರೆಸ್‌ನ ಕೆಲ ಮುಖಂಡರಿಂದ ಮುನಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಬಿಜೆಪಿ ಶಾಸಕ ಶ್ರೀರಾಮುಲು ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಫೋಟೋ, ವಿಡಿಯೋವೊಂದು ಈಗ ವೈರಲ್‌ ಆಗಿದ್ದು, ಚರ್ಚೆಗೆ ಕಾರಣವಾಗಿದೆ. ಸಚಿವ ಸಂಪುಟ ವಿಸ್ತರಣೆಗೆ ದೆಹಲಿಯಲ್ಲಿ ಸಭೆ ನಡೆಯುತ್ತಿರುವ ಸಮಯದಲ್ಲೇ ಈ ವಿಡಿಯೋ ಬಿಡುಗಡೆಯಾಗಿದ್ದರಿಂದ ರಾಜ್ಯದಲ್ಲಿ ಮತ್ತೆ ಆಪರೇಷನ್‌ ಕಮಲ ನಡೆಯುತ್ತಾ ಎಂಬ ಅನುಮಾನ ಹುಟ್ಟಿಕೊಂಡಿದೆ. ಆದರೆ, ಶ್ರೀರಾಮುಲು ಮಾತ್ರ ಇದು ವಾಲ್ಮೀಕಿ ಜನಾಂಗದ ಸಂಘಟನೆ ಕುರಿತ ಸಭೆಯಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ವಾಲ್ಮೀಕಿ ಸಮುದಾಯದ ಶ್ರೀ ಮತ್ತು ಮುಖಂಡರ ನೇತೃತ್ವದಲ್ಲಿ ಬೆಳಗಾವಿ ನಗರದ ಖಾಸಗಿ ಹೋಟೆಲ್‌ನಲ್ಲಿ ಡಿ.18ರಂದು ವಾಲ್ಮೀಕಿ ಜಾತ್ರಾ ಮಹೋತ್ಸವ ಹಾಗೂ ವಾಲ್ಮೀಕಿ ಸಮುದಾಯ ಸಂಘಟನೆ ಸಭೆಯಲ್ಲಿ ಬಿಜೆಪಿ ಮುಖಂಡ ಶ್ರೀರಾಮುಲು, ಕಾಂಗ್ರೆಸ್‌ನ ಜಾರಕಿಹೊಳಿ ಸಹೋದರರು, ಬಿಜೆಪಿ ಶಾಸಕ ಶಿವನಗೌಡ ನಾಯಕ ಅವರು ಪಾಲ್ಗೊಂಡಿದ್ದರು. ಆ ಪೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್‌ ಆಗಿದೆ.

ಸಭೆಯಲ್ಲಿ ವಾಲ್ಮೀಕಿ ಸಮುದಾಯದ ಬೆಳವಣಿಗೆ, ಅಭಿವೃದ್ಧಿಗೆ ಕೈಗೊಳ್ಳಬೇಕಾದ ಯೋಜನೆಗಳ ರೂಪುರೇಷೆ ಬಗ್ಗೆ ಚರ್ಚಿಸಲಾಯಿತು ಎನ್ನಲಾಗಿದೆ. ಸಭೆಯ ಸಾನ್ನಿಧ್ಯವನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ವಹಿಸಿದ್ದರು. ಈ ಕುರಿತು ಸ್ಪಷ್ಟನೆ ನೀಡಿರುವ ಶ್ರೀರಾಮುಲು, ‘ಇದೊಂದು ಸಮುದಾಯ ಅಭಿವೃದ್ಧಿ ಕುರಿತು ನಡೆಸಲಾದ ಸಭೆ. ಇದರಲ್ಲಿ ರಾಜಕೀಯದ ಮಾತುಕತೆ ನಡೆದಿಲ್ಲ. ಇದರಲ್ಲಿ ನಾನು ಮಾತ್ರವಲ್ಲ ವಾಲ್ಮೀಕಿ ಸಮುದಾಯದವರೇ ಆದ ಜಾರಕಿಹೊಳಿ ಸಹೋದರರಾದ ರಮೇಶ ಮತ್ತು ಸತೀಶ ಜಾರಕಿಹೊಳಿ, ಶಿವನಗೌಡ ನಾಯಕ, ಪ್ರತಾಪಗೌಡ ಸೇರಿ ಸಮುದಾಯದ ಅನೇಕ ಹಿರಿಯರು ಪಾಲ್ಗೊಂಡಿದ್ದರು’ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಡಿ.22ರಂದೇ ಸಂಪುಟ ವಿಸ್ತರಣೆ ನಡೆಯಲಿದ್ದು, ಅದರ ಬೆನ್ನಲ್ಲೇ ಈ ಸಭೆ ನಡೆದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಈ ಬೆಳವಣಿಗೆಗಳು ಆಪರೇಷನ್‌ ಕಮಲಕ್ಕೆ ಮತ್ತೊಮ್ಮೆ ಬಿಜೆಪಿ ಕೈಹಾಕಿದೆಯಾ? ಶ್ರೀರಾಮುಲು ನೇತೃತ್ವದಲ್ಲಿ ಇದಕ್ಕೆ ವರಿಷ್ಠರು ಮತ್ತೊಮ್ಮೆ ಮುನ್ನುಡಿ ಬರೆಯುತ್ತಿದ್ದಾರಾ ಎಂಬ ಸುದ್ದಿ ಹರಿದಾಡುತ್ತಿದೆ.

Follow Us:
Download App:
  • android
  • ios