ಬೆಂಗಳೂರು (ಸೆ.11): ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಪಕ್ಷಕ್ಕೇ ಸವಾಲೊಡ್ಡಿದ್ದು, ಶಾಸಕ ಸತೀಶ್ ಜಾರಕಿಹೊಳಿ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಹಾಗೂ ತಾವು ಸೂಚಿಸಿದ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಷರತ್ತು ವಿಧಿಸಿದ್ದಾರೆ.

ಅಲ್ಲದೆ, ಒಂದು ತಿಂಗಳಲ್ಲಿ ತಮ್ಮ ಬೇಡಿಕೆ ಈಡೇರಿಸದಿದ್ದರೆ ಪಕ್ಷ ತ್ಯಜಿಸುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಚುನಾವಣೆ ವೇಳೆಯಲ್ಲಿಯೇ ತಮಗೆ ಅವಮಾನ ಉಂಟಾದರೆ ಉಗ್ರವಾದ ತೀರ್ಮಾನಕೈಗೊಳ್ಳುವುದಾಗಿ ಎಚ್ಚರಿಸಿದ್ದ ಜಾರಕಿಹೊಳಿ ಸಹೋದರರು, ಇದೀಗ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಮತ್ತೊಂದು ಸಚಿವ ಸ್ಥಾನ ತಮಗೆ ನೀಡಬೇಕು. ಇಲ್ಲದಿದ್ದರೆ ಪಕ್ಷವನ್ನು ತ್ಯಜಿಸುವುದಾಗಿ ಸಂದೇಶ ರವಾನಿಸಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಸತೀಶ್ ಜಾರಕಿಹೊಳಿ ಅವರಿಗೆ ಕಳೆದ ಮೂರು ವರ್ಷದಿಂದ ಪಕ್ಷದಲ್ಲಿ ಆಗಿರುವ ಅನ್ಯಾಯ ಹಾಗೂ ಬೆಳಗಾವಿ ರಾಜಕಾರಣದಲ್ಲಿ ಉಂಟಾಗಿರುವ ಅಸಮಾಧಾನದಿಂದಾಗಿ ಸಿಡಿದೆದಿದ್ದಿರುವ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಸತೀಶ್ ಜಾರಕಿಹೊಳಿ ಅವರಿಂದ ಕಳೆದ ಸರ್ಕಾರದ ಅವಧಿಯಲ್ಲಿ ಸಚಿವ ಸ್ಥಾನ ನೂತನ ಸರ್ಕಾರದಲ್ಲೂ ಸಚಿವ ಸ್ಥಾನ ನೀಡಿಲ್ಲ. ಜತೆಗೆ ಕೆಪಿಸಿಸಿಯಲ್ಲೂ ಉನ್ನತ ಹುದ್ದೆ ನೀಡಿಲ್ಲ. ಹೀಗಾಗಿ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಪಕ್ಷಕ್ಕೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಮುಂದಿನ 5-10 ವರ್ಷದಲ್ಲಿ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದ ರಮೇಶ್ ಜಾರಕಿಹೊಳಿ ಅವರೇ ಸತೀಶ್ ಜಾರಕಿಹೊಳಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡಿಸಲು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಜಾರಕಿಹೊಳಿ ಬ್ರದರ್ಸ್ ರಾಜಕೀಯದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಳೆದ ವಾರದಿಂದ ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರ ಸಂಪರ್ಕ ದಲ್ಲಿದ್ದಾರೆ. ಬಿಜೆಪಿ ಸಂಸದ ಶ್ರೀರಾಮುಲು ಎರಡು ಬಾರಿ ರಮೇಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದ್ದರು.