ರಾಜ್ಯದ ಹಿತಕ್ಕಾಗಿ ಅಲ್ಲ, ವೈಯಕ್ತಿಕ ಲಾಭಕ್ಕೆ ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ: ಎನ್‌ಎಸ್ ಬೋಸರಾಜು ವ್ಯಂಗ್ಯ
ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲದ ಜೆಡಿಎಸ್ ವೈಯಕ್ತಿಕ ಲಾಭಕ್ಕಾಗಿ ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಸಣ್ಣ ನೀರಾವರಿ, ತಂತ್ರಜ್ನಾನ ಮತ್ತು ವಿಜ್ನಾನ ಖಾತೆ ಸಚಿವ ಎನ್‌ಎಸ್ ಬೋಸರಾಜು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಸೆ.25): ಯಾವುದೇ ಸೈದ್ಧಾಂತಿಕ ಹಿನ್ನೆಲೆ ಇಲ್ಲದ ಜೆಡಿಎಸ್ ವೈಯಕ್ತಿಕ ಲಾಭಕ್ಕಾಗಿ ಯಾರೊಂದಿಗೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಎಂದು ಸಣ್ಣ ನೀರಾವರಿ, ತಂತ್ರಜ್ನಾನ ಮತ್ತು ವಿಜ್ನಾನ ಖಾತೆ ಸಚಿವ ಎನ್‌ಎಸ್ ಬೋಸರಾಜು ಜೆಡಿಎಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬುವಿನಲ್ಲಿ ನಡೆದ ಜನತಾ ದರ್ಶನ(Janata darshana) ಕಾರ್ಯಕ್ರಮದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿ(JDS BJP Alliance) ಮಾಡಿಕೊಳ್ಳುತ್ತಿರುವುದು ರಾಜ್ಯದ ಜನತೆಯ ಅಭಿವೃದ್ಧಿಗಾಗಿ ಅಲ್ಲ. ಅದನ್ನು ಮಾನ್ಯ ಮಾಜಿ ಪ್ರಧಾನಿಯವರಾದ ಎಚ್.ಡಿ. ದೇವೇಗೌಡ(HD Devegowda) ಅವರೇ ಹೇಳಿದ್ದಾರೆ. ನಾವು ಪಕ್ಷದ ಉಳಿವಿಗಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಿದ್ದೇವೆ ಎಂದಿದ್ದಾರೆ. ಅಂದರೆ ಅವರ ವೈಯಕ್ತಿಕ ಲಾಭಕ್ಕಾಗಿ ಅವರು ಈ ರೀತಿ ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದ್ದಾರೆ.
ಯಾರ ಹುದ್ದೆಯನ್ನು ಸಿಎಂ ತಪ್ಪಿಸಿಲ್ಲ ಹರಿಪ್ರಸಾದ್ ಅಸಮಾಧಾನ ಸರಿಯಲ್ಲ : ಬೋಸರಾಜು
ವಿಧಾನಸಭಾ ಚುನಾವಣೆಯ ಸಂದರ್ಭ ನಮ್ಮ ಟಾರ್ಗೆಟ್ 120 ಎಂದು ಹೇಳುತ್ತಿದ್ದರು. ಆದರೆ ಜನರು ಅವರಿಗೆ ಕೊಟ್ಟಿದ್ದು 19 ಸೀಟುಗಳು ಮಾತ್ರ. ಅಂದರೆ ಸೈದ್ಧಾಂತಿಕ ಹಿನ್ನೆಲೆ ಇದ್ದು ಜನರ ನಂಬಿಕೆ ಉಳಿಸಿಕೊಂಡಿದ್ದರೆ ಅವರಿಗೆ ಈ ಸ್ಥಿತಿ ಬರುತ್ತಿರಲಿಲ್ಲ. ಇನ್ನು ಮುಂದಿನ ಲೋಕಸಭಾ ಚುನಾವಣೆ(Loksabha election)ಯ ವೇಳೆ ಇವರ ಸ್ಥಿತಿ ಇನ್ನೂ ಏನಾಗುತ್ತದೆ ಎನ್ನುವುದು ಗೊತ್ತಾಗಲಿದೆ ಎಂದರು.
ಜನರು ಇವರ ಮೇಲೆ ವಿಶ್ವಾಸ ಇಡುವಂತೆ ನಡೆದುಕೊಂಡಿದ್ದರೆ ಅವರ ಪಕ್ಷ ಉಳಿಯುತಿತ್ತು. ಆದರೆ ಅವರು ಸೈದ್ಧಾಂತಿಕ ಹಿನ್ನೆಲೆ ಬಿಟ್ಟು, ವೈಯಕ್ತಿಕ ಅನುಕೂಲಕ್ಕಾಗಿ ಈ ರೀತಿ ಹೊಂದಾಣಿಕೆ ಮಾಡಿಕೊಂಡರೆ ಇದೇ ಪರಿಸ್ಥಿತಿ ಆಗಲಿದೆ ಎಂದು ಲೇವಡಿ ಮಾಡಿದರು. ಇನ್ನು ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಎಷ್ಟೋ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಸೂಚಿಸುವುದಕ್ಕೆ ಜನತಾ ದರ್ಶನ ಸಾಕ್ಷಿಯಾಯಿತು. ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ರಾಜ್ಯದಲ್ಲಿ ಏಕಕಾಲಕ್ಕೆ ನಡೆದ ಜನತಾ ದರ್ಶನದ ಭಾಗವಾಗಿ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಸಮೀಪದ ಚೆರಿಯಪರಂಬುನಲ್ಲಿ ಜನತಾ ದರ್ಶನ ನಡೆಯಿತು.
ಕೊಡಗು ಉಸ್ತುವಾರಿ, ಸಣ್ಣ ನೀರಾವರಿ, ತಂತ್ರಜ್ನಾನ ಮತ್ತು ವಿಜ್ನಾನ ಖಾತೆ ಎನ್‌ಎಸ್ ಬೋಸರಾಜು ಅವರ ನೇತೃತ್ವದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸ್ಥಳದಲ್ಲಿಯೇ ಇದ್ದ ಸಚಿವ ಬೋಸರಾಜು, ಮಡಿಕೇರಿ ಶಾಸಕ ಮಂತರಗೌಡ ಮತ್ತು ವಿರಾಜಪೇಟೆ ಶಾಸಕ ಎ.ಎಸ್ ಪೊನ್ನಣ್ಣ ಜನರಿಂದ ಅಹವಾಲು ಸ್ವೀಕರಿಸಿದರು. ಅಲ್ಲದೆ ಸ್ಥಳದಲ್ಲಿಯೇ ಬಗೆಹರಿಸಬಹುದಾದ ಕೆಲವು ಸಮಸ್ಯೆಗಳಿಗೆ ಅಲ್ಲಿಯೇ ಇದ್ದ ಕೊಡಗು ಜಿಲ್ಲೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಕರೆದು ಪರಿಹಾರ ಸೂಚಿಸಿದರು.
ಬಿಜೆಪಿ ಕಾರ್ಯಕರ್ತರು ನನ್ನ ಮತ್ತು ಮಗಳ ಮೇಲೆ ಅಟ್ಯಾಕ್ ಮಾಡಿದ್ದಾರೆ: ಮೈತ್ರಿಗೆ ಶಾಸಕಿ ಕರೆಮ್ಮ ವಿರೋಧ
ಇನ್ನು ಕೆಲವು ಅಧಿಕಾರಿಗಳಿಗೆ ಕೂಡಲೇ ಸಮಸ್ಯೆಗಳನ್ನು ಬಗೆಹರಿಸುವಂತೆ ಸಚಿವರು, ಶಾಸಕರು ಸೂಚನೆ ನೀಡಿದರು. ಅಲ್ಲದೆ ಸಂಧ್ಯಾ ಸುರಕ್ಷಾ, ವಿಧವಾ ವೇತನ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸ್ಥಳದಲ್ಲಿಯೇ ಆದೇಶಪತ್ರ ನೀಡಿದರು. ಬಳಿಕ ಮಾತನಾಡಿದ ಸಚಿವಎನ್‌ಎಸ್ ಬೋಸರಾಜು ಇಡೀ ದೇಶದಲ್ಲಿಯೇ ಇದೇ ಮೊದಲ ಬಾರಿಗೆ ಈ ರೀತಿ ಏಕ ಕಾಲಕ್ಕೆ ಜನತಾ ದರ್ಶನ ಏರ್ಪಡಿಸಿ ಜನರ ಸಮಸ್ಯೆಗಳನ್ನು ಅಲಿಸಿರುವುದು ವಿಶೇಷ. ಸ್ಥಳದಲ್ಲಿಯೇ ಸಾಕಷ್ಟು ಪರಿಹಾರ ಒದಗಿಸುವ ಜೊತೆಗೆ ಆದೇಶ ಪತ್ರಗಳನ್ನು ನೀಡಲಾಗಿದೆ. ಇದರಿಂದ ಜನರ ಸಮಸ್ಯೆಯನ್ನು ನೇರವಾಗಿ ಆಲಿಸಿ ಬಗೆಹರಿಸುವುದಕ್ಕೆ ಅನುಕೂಲವಾಗಿದೆ ಎಂದರು.