ಬೆಂಗಳೂರು :  ರಾಜಕೀಯ ಸೇಡಿನ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆ್ಯಂಬಿಡೆಂಟ್‌ ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ರಾಜ್ಯ ಅಪರಾಧ ತನಿಖಾ ದಳಕ್ಕೆ (ಸಿಐಡಿ) ವಹಿಸಲು ರಾಜ್ಯ ಸರ್ಕಾರವು ಚಿಂತನೆ ನಡೆಸಿದೆ.

ಆ್ಯಂಬಿಡೆಂಟ್‌ ಕಂಪನಿ ವಿರುದ್ಧ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ತನಿಖೆ ಮೇಲೆ ಪ್ರಭಾವ ಬೀರಲು ಆ ಕಂಪನಿ ಮಾಲೀಕರ ಜತೆ ಬಳ್ಳಾರಿ ಗಣಿ ಧಣಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಡೀಲ್‌ ಕುದುರಿಸಿದ್ದರು ಎಂಬ ಆರೋಪ ಬಂದಿತ್ತು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ರೆಡ್ಡಿ, ಬುಧವಾರ ಜಾಮೀನು ಪಡೆದು ಜೈಲಿನಿಂದ ಹೊರಬಂದ ಬಳಿಕ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿಸಿಬಿ ವಿರುದ್ಧ ಕಿಡಿಕಾರಿದ್ದರು. ನನ್ನ ವಿರುದ್ಧ ಸಿಸಿಬಿ ಮುಂದಿಟ್ಟು ಮುಖ್ಯಮಂತ್ರಿಗಳು ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ಇನ್ನೊಂದೆಡೆ ಪ್ರಕರಣದ ತನಿಖಾ ತಂಡದಿಂದ ಹೆಚ್ಚುವರಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌, ಡಿಸಿಪಿ ಎಸ್‌.ಗಿರೀಶ್‌ ಹಾಗೂ ಎಸಿಪಿ ವೆಂಕಟೇಶ್‌ ಪ್ರಸನ್ನ ಅವರ ಬದಲಾವಣೆಗೆ ಒತ್ತಾಯಿಸಿ ಜನಾರ್ದನ ರೆಡ್ಡಿ ಹೈಕೋರ್ಟ್‌ ಮೊರೆ ಹೋಗಿದ್ದು, ಈ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ವಹಿಸುವ ಕುರಿತು ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿಗಳು ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಹಿಂದೆ ಸಿಐಡಿ ತನಿಖೆಗೆ ತಡೆ:  ಸಾಮಾನ್ಯವಾಗಿ ರಾಜ್ಯದಲ್ಲಿ ಯಾವುದೇ ಠಾಣೆಯಲ್ಲಿ .10 ಕೋಟಿಗೂ ಅಧಿಕ ಮೊತ್ತದ ವಂಚನೆ ಕೃತ್ಯಗಳು ದಾಖಲಾದರೆ ಅವುಗಳ ತನಿಖೆಯನ್ನು ಸಿಐಡಿಯ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಡಿಜಿಪಿ ವರ್ಗಾಯಿಸುತ್ತಿದ್ದರು. ಅದೇ ರೀತಿ ಈ ಹಿಂದೆಯೇ ಆ್ಯಂಬಿಡೆಂಟ್‌ ಕಂಪನಿ ವಿರುದ್ಧದ 600 ಕೋಟಿಗೂ ಅಧಿಕ ಮೊತ್ತದ ಮೋಸದ ಪ್ರಕರಣವನ್ನು ಸಿಐಡಿಗೆ ವಹಿಸುವ ಕುರಿತು ಗೃಹ ಇಲಾಖೆಯಲ್ಲಿ ಚಚೆÜರ್‍ ನಡೆದಿತ್ತು. ಆದರೆ ಕೆಲವು ಅಧಿಕಾರಿಗಳ ಪ್ರಭಾವದಿಂದ ಆ ಪ್ರಕರಣದ ಸಿಐಡಿ ವರ್ಗಾವಣೆಗೆ ಕೊನೆ ಹಂತದಲ್ಲಿ ತಡೆ ಬಿದ್ದಿತ್ತು ಎಂದು ಮೂಲಗಳು ಹೇಳಿವೆ.