ಬೆಂಗಳೂರು(ಏ.22): ಲಾಕ್‌ಡೌನ್‌ ವೇಳೆ ಕಾನೂನು ಮತ್ತು ಸುವ್ಯವಸ್ಥೆ ನಿಭಾಯಿಸುವ ನಡುವೆಯೇ ಇನ್‌ಸ್ಪೆಕ್ಟರ್‌ವೊಬ್ಬರು, ಸ್ವತಃ ಪ್ರತಿ ದಿನ 250 ಮಂದಿಗೆ ಠಾಣೆಯಲ್ಲೇ ಸ್ವಾದಿಷ್ಟವಾದ ಆಹಾರ ತಯಾರಿಸಿ ಹಸಿವು ನೀಗಿಸುವ ಕಾಯಕ ಮಾಡುತ್ತಿದ್ದಾರೆ.

ಜಾಲಹಳ್ಳಿ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಬಿ.ಎಸ್‌.ಯಶವಂತ್‌ ಅವರೇ ಬಾಣಸಿಗರಾಗಿದ್ದು, ಬಗೆ ಬಗೆಯ ಉಪಾಹಾರ ಹಾಗೂ ಊಟ ತಯಾರಿಸುತ್ತಿದ್ದಾರೆ. ಕೊರೋನಾ ಸೋಂಕು ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿರುವ ಪೊಲೀಸರು, ಬಿಬಿಎಂಪಿ, ಆರೋಗ್ಯ ಇಲಾಖೆ ಸಿಬ್ಬಂದಿ ಮಾತ್ರವಲ್ಲದೆ ಜಾಲಹಳ್ಳಿ ಸುತ್ತಮುತ್ತಲಿನ ಬಡ ಬಗ್ಗರು ಇನ್‌ಸ್ಪೆಕ್ಟರ್‌ ಕೈ ರುಚಿ ಸವಿಯುತ್ತಿದ್ದಾರೆ. ಇನ್‌ಸ್ಪೆಕ್ಟರ್‌ ಯಶವಂತ್‌ ಅವರ ಕೆಲಸಕ್ಕೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ಸೇರಿದಂತೆ ಹಿರಿಯ ಅಧಿಕಾರಿಗಳು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಯಶವಂತ್‌ ಅವರು, ನನಗೆ ಬಾಲ್ಯದಿಂದಲೂ ಅಡುಗೆ ಮಾಡುವುದು ಹವ್ಯಾಸ. ಲಾಕ್‌ಡೌನ್‌ ವೇಳೆ ಸಿಬ್ಬಂದಿ ಹಾಗೂ ಸಂಕಷ್ಟದಲ್ಲಿರುವ ಆಹಾರ ವಿತರಣೆಗೆ ಯೋಜಿಸಲಾಯಿತು. ಆಗ ನಾನೇ ಅಡುಗೆ ಉಸ್ತುವಾರಿ ವಹಿಸಿಕೊಂಡೆ. ಬೆಳಗ್ಗೆ 8.30ಕ್ಕೆ ಉಪಾಹಾರ ಸಿದ್ಧಪಡಿಸುತ್ತೇನೆ. ಮಧ್ಯಾಹ್ನ 1.30ಕ್ಕೆ ಮುದ್ದೆ ಊಟ. ದಿನವೂ ವಿಧವಿಧ ಸಾರು ಇರುತ್ತದೆ. ರಾತ್ರಿ ಉಪಾಹಾರ ತಯಾರಿಸಲಾಗುತ್ತದೆ ಎಂದು ಹೇಳಿದರು.

ಬೆಳಗ್ಗೆ ಮತ್ತು ಮಧ್ಯಾಹ್ನ 100 ಮಂದಿ ಸೇವಿಸುತ್ತಾರೆ. ರಾತ್ರಿ 50ರಿಂದ 70 ಜನ ಆಗುತ್ತಾರೆ. ಹಸಿದು ಬಂದ ಯಾರಿಗೂ ವಾಪಸ್‌ ಕಳುಹಿಸುವುದಿಲ್ಲ. ಮೂರು ಹೊತ್ತು ದಾಸೋಹ ಸೇವೆ ಮಾಡಲಾಗುತ್ತಿದೆ ಎಂದು ಇನ್‌ಸ್ಪೆಕ್ಟರ್‌ ತಿಳಿಸಿದರು.

ಅಡುಗೆ ತಯಾರಿಕೆ ಬಗ್ಗೆ ಜಾಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್‌ ಯಶವಂತ್‌ ಅವರಿಗೆ ಫ್ಯಾಷನ್‌ ಇದೆ. ಲಾಕ್‌ಡೌನ್‌ ವೇಳೆ ಠಾಣೆಯಲ್ಲಿ ತಾವೇ ಉತ್ಕೃಷ್ಟಮತ್ತು ರುಚಿಯಾದ ಆಹಾರವನ್ನು ತಯಾರಿಸುತ್ತಿದ್ದಾರೆ. ಬಹಳ ಒಳ್ಳೆಯ ಕೆಲಸವಾಗಿದ್ದು, ತುಂಬಾ ಶ್ರಮವಹಿಸಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

-ಶಶಿಕುಮಾರ್‌, ಡಿಸಿಪಿ, ಉತ್ತರ ವಿಭಾಗ