ಕೇಂದ್ರ ಸಚಿವ ವಿ. ಸೋಮಣ್ಣ ಅವರ ಪ್ರಕಾರ, ನಿಧಾನಗತಿಯ ಕಾಮಗಾರಿ ಮತ್ತು ದಾಖಲೆಗಳ ಕೊರತೆಯಿಂದಾಗಿ ಜಲ್ ಜೀವನ್ ಮಿಷನ್ ಅಡಿಯಲ್ಲಿ ಕರ್ನಾಟಕ ಸರ್ಕಾರವು ₹16,863.86 ಕೋಟಿ ಅನುದಾನವನ್ನು ಕಳೆದುಕೊಂಡಿದೆ. ಇದು ಕೇಂದ್ರದ ತಾರತಮ್ಯವಲ್ಲ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರು (ಮೇ.1): ನಿಧಾನಗತಿಯ ಕಾಮಗಾರಿಗಳು ಹಾಗೂ ಸಕಾಲಕ್ಕೆ ಸಲ್ಲಿಸಬೇಕಿದ್ದ ದಾಖಲೆಗಳ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಜಲ್ ಜೀವನ್ ಮಿಷನ್ ಅಡಿಯಲ್ಲಿ ₹16,863.86 ಕೋಟಿಗಳಷ್ಟು ಅನುದಾನ ಪಡೆಯುವಲ್ಲಿ ವಿಫಲವಾಗಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ 2019 ರಿಂದ 2024 ರವರೆಗಿನ 5 ವರ್ಷಗಳು ಈ ಯೋಜನೆಯ ಕಾರ್ಯಾವಧಿಯಾಗಿತ್ತು. ಈ ಅವಧಿಯಲ್ಲಿ ಭಾರತ ಸರ್ಕಾರವು ಕರ್ನಾಟಕ ರಾಜ್ಯಕ್ಕೆ 28,623.89 ಕೋಟಿ ರು. ಅನುದಾನ ಹಂಚಿಕೆ ಮಾಡಿತ್ತು. ಆದರೆ, ನಿಧಾನಗತಿಯ ಕಾಮಗಾರಿಗಳು ಹಾಗೂ ಸಕಾಲಕ್ಕೆ ಭಾರತ ಸರ್ಕಾರಕ್ಕೆ ಸಲ್ಲಿಸಬೇಕಿದ್ದ ದಾಖಲೆಯ ಕೊರತೆಯಿಂದಾಗಿ ರಾಜ್ಯ ಸರ್ಕಾರವು ಕೇವಲ ₹11,152.16 ಕೋಟಿ ಅನುದಾನವನ್ನು ಮಾತ್ರ ಬಳಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಒಟ್ಟು 66,344 ಯೋಜನೆಗಳ ಪೈಕಿ ಭೌತಿಕವಾಗಿ ಕೇವಲ 24,888 ಯೋಜನೆಗಳು ಪ್ರಗತಿಯಲ್ಲಿದ್ದು, ಸಾಧನೆ ಶೇ.35.50 ರಷ್ಟಿದೆ. ಆರ್ಥಿಕವಾಗಿ ಕೇವಲ 9,325 ಯೋಜನೆ ಮುಗಿದಿದ್ದು, ಸಾಧನೆ 14.05ರಷ್ಟಿದೆ. ಜಲ್ ಜೀವನ್ ಮಿಷನ್‌ ಪ್ರಗತಿಯಲ್ಲಿ ದೇಶದಲ್ಲಿ 22ನೇ ಸ್ಥಾನ ಕರ್ನಾಟಕದ್ದಾಗಿದೆ. 2019ರಲ್ಲಿ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿದ್ದ ನೀರಿನ ಸಂಪರ್ಕ ಶೇ. 24.2. ಪ್ರಸ್ತುತ ಇದು ಶೇ.86.93. ಗಮನಾರ್ಹ ಸಾಧನೆ ಕಂಡಿದೆ. ಜಲ್ ಜೀವನ್ ಮಿಷನ್ ಯೋಜನೆಯಡಿ ನೀಡಲಾದ ನೂತನ ಸಂಪರ್ಕ 63.5 ಲಕ್ಷ. ನೂತನ ಸಂಪರ್ಕ ಕಲ್ಪಿಸುವಲ್ಲಿ ಸಾಧನೆ ಗಮನಾರ್ಹವಾಗಿದ್ದರೂ, ಹರ್ ಘರ್ ಜಲ್ ಸರ್ಟಿಫಿಕೇಷನ್ ಅತೀ ಕಡಿಮೆ ಇದೆ. 26,591 ಹಳ್ಳಿಗಳ ಪೈಕಿ ಕೇವಲ 6989 ಹಳ್ಳಿಗಳು ಮಾತ್ರ ಹರ್ ಘರ್ ಜಲ್ ಸರ್ಟಿಫಿಕೇಷನ್ ಪಡೆದಿದೆ. ಕರ್ನಾಟಕದ ಯಾವುದೇ ಜಿಲ್ಲೆ ಪೂರ್ಣ ಹರ್ ಘರ್ ಜಲ್ ಸರ್ಟಿಫಿಕೇಶನ್ ಮಾನ್ಯತೆ ಪಡೆದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ವೈಫಲ್ಯ ತೋರಿಸುತ್ತದೆ:

ಎಲ್ಲಕ್ಕಿಂತ ಮುಖ್ಯವಾಗಿ ರಾಜ್ಯ ಪ್ರಸ್ತಾಪಿಸಿದ 66,344 ಯೋಜನೆಗಳ ಪೈಕಿ ₹1,716.60 ಕೋಟಿ ವೆಚ್ಚದ 26 ಯೋಜನೆಗಳಿಗೆ 2024ರ ಮಾರ್ಚ್‌ವರೆಗೆ ವರ್ಕ್ ಆರ್ಡರ್ ಸಹ ನೀಡದಿರುವುದು ರಾಜ್ಯ ಸರ್ಕಾರದ ವಿಫಲತೆಯನ್ನು ಎತ್ತಿ ತೋರುತ್ತದೆ. ಭಾರತ ಸರ್ಕಾರಕ್ಕೆ ಯೋಜನೆ ಅನುಷ್ಠಾನದ ಬಗ್ಗೆ ಬಂದ ಹಲವಾರು ದೂರುಗಳ ವಿಚಾರಣೆಗಾಗಿ ಕೇಂದ್ರದಿಂದ ತಂಡ ರಚಿಸಿದ್ದು ಅನುಷ್ಠಾನದ ಪೂರ್ಣ ಅಧ್ಯಯನ ನಡೆಸಿದೆ ಎಂದಿದ್ದಾರೆ.

ಈ ಅಧ್ಯಯನದ ಪ್ರಕಾರ, ಯೋಜನಾ ವೆಚ್ಚದ ಅನವಶ್ಯಕವೃದ್ಧಿ ವಿನ್ಯಾಸ ಅಥವಾ ತಾಂತ್ರಿಕ ಬದಲಾವಣೆಗಳು, ಕಾನೂನಾತ್ಮಕ ಅನುಮತಿಗಳಿಂದಾದ ವಿಳಂಬ, ಕಾರ್ಯಾಚರಣೆ ಮತ್ತು ನಿರ್ವಹಣಾ ವೆಚ್ಚವನ್ನು ಯೋಜನಾ ವೆಚ್ಚದಲ್ಲಿ ಸೇರಿಸಿರುವುದು, ಯೋಜನೆಗೆ ಬೇಕಾದ ಭೂಸ್ವಾಧೀನ ವೆಚ್ಚವನ್ನೂ ಯೋಜನಾ ವೆಚ್ಚದಲ್ಲಿ ಸೇರಿಸಿರುವುದು, ರೆಟ್ರೋಫಿಟ್ಟಿಂಗ್ ಯೋಜನೆಗಳ ಸಂಖ್ಯೆ ಹಾಗೂ ವೆಚ್ಚಗಳಲ್ಲಿನ ವ್ಯತ್ಯಾಸಗಳು ಇತ್ಯಾದಿ ಅಂಶಗಳು ಕಂಡು ಬಂದ ಪ್ರಮುಖ ನ್ಯೂನತೆಗಳು ಎಂದು ಸಚಿವ ಸೋಮಣ್ಣ ವಿವರಿಸಿದ್ದಾರೆ.

ಕರ್ನಾಟಕಕ್ಕಷ್ಟೇ ಅಲ್ಲ:

ಈ ಎಲ್ಲಾ ಕಾರಣಗಳಿಂದಾಗಿ ಯೋಜನೆ ಮುಗಿದ 2024ರ ಮಾರ್ಚ್‌ನಿಂದ 2026ರ ಮಾರ್ಚ್‌ವರೆಗೆ ಕೇವಲ ಕರ್ನಾಟಕವಲ್ಲದೆ, ಉತ್ತರಪ್ರದೇಶ ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶದಂಥ ಯಾವುದೇ ರಾಜ್ಯಕ್ಕೂ ಹಣ ಬಿಡುಗಡೆಯಾಗಿಲ್ಲ. ಕೇವಲ ಕರ್ನಾಟಕ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರ ರಾಜ್ಯದ ಬಗ್ಗೆ ತಾರತಮ್ಮ ಹೊಂದಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆ ಸತ್ಯಕ್ಕೆ ದೂರವಾದುದು ಎಂದು ಅವರು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿದ್ದಾರೆ.