ಯಾವ ಐಟಿ ಕಂಪನಿಯೂ ಬೆಂಗಳೂರು ಬಿಡಲ್ಲ: ಸಿಎಂ ಬೊಮ್ಮಾಯಿ
- ಐಟಿ ಕಂಪನಿಗಳು ಬೆಂಗಳೂರು ಬಿಡೋದು ಸುಲಭವಿಲ್ಲ: ಸಿಎಂ
- -ಹಿಂದೆ ಕೆಲ ಕಂಪನಿಗಳು ಹೋಗಿ ವಾಪಸ್ ಬಂದಿವೆ
- ಈಗ ಬಿಡುತ್ತೇವೆ ಎನ್ನುವರು ಬಿಟ್ಟು ಹೊಗೋದಿಲ್ಲ
ವಿಧಾನಸಭೆ (ಸೆ.20) : ಬೆಂಗಳೂರಿನಿಂದ ಐಟಿ-ಬಿಟಿ ವಲಯವನ್ನು ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಹಿಂದೆಯೂ ಕೆಲವು ಕಂಪನಿಗಳು ಒಡಿಶಾ, ಹೈದರಾಬಾದ್‌ಗೆ ಹೋಗಿ ಇಲ್ಲಿಗೆ ವಾಪಸು ಬಂದವು. ಹೀಗಾಗಿ ಹೋಗುತ್ತೇವೆ ಎಂದು ಹೇಳುತ್ತಿರುವ ಐಟಿ ಕಂಪನಿಗಳೂ ಸಹ ಬೆಂಗಳೂರು ಬಿಟ್ಟು ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಮಗೆ ಬಿಬಿಎಂಪಿ ಬೇಡ, ಪ್ರತ್ಯೇಕ ಪಾಲಿಕೆ ಕೊಡಿ: ಸರ್ಕಾರಕ್ಕೆ ಐಟಿ ಕಂಪನಿಗಳ ಪತ್ರ
ವಿಧಾನಸಭೆಯಲ್ಲಿ ಸೋಮವಾರ ಮಳೆ ಹಾನಿ ಕುರಿತ ಚರ್ಚೆಗೆ ಉತ್ತರ ನೀಡಿ ಮಾತನಾಡಿದ ಅವರು, ಮಳೆಯಿಂದ ಆದ ಸಮಸ್ಯೆಗಳಿಂದಾಗಿ ಬೆಂಗಳೂರು ಬಿಡುವ ಎಚ್ಚರಿಕೆ ನೀಡಿದ್ದ ಐಟಿ (ಮಾಹಿತಿ ತಂತ್ರಜ್ಞಾನ) ಕಂಪನಿಗಳಿಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಐಟಿ-ಬಿಟಿ ವಲಯ ಬೆಳೆಯಲು ಪೂರಕ ವಾತಾವರಣ, ಶಿಕ್ಷಣ, ತಾಂತ್ರಿಕ ಮಾನವ ಸಂಪನ್ಮೂಲ ಶಕ್ತಿ, ಸಂಸ್ಕೃತಿ, ಇಲ್ಲಿನ ಜನರು ಸೇರಿದಂತೆ ಎಲ್ಲವೂ ಮುಖ್ಯ. ಬೆಂಗಳೂರಿನ ತಾಂತ್ರಿಕ ಮಾನವ ಸಂಪನ್ಮೂಲ ಏಕಾಏಕಿ ಉದ್ಭವಿಸಿದ್ದಲ್ಲ. ರಾಜರ ಕಾಲದಿಂದಲೂ ಕರ್ನಾಟಕ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಕೈಗಾರಿಕೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿಸಲ್ಪಟ್ಟಿದ್ದವು. 1960ರ ದಶಕದಲ್ಲಿ ಕೇಂದ್ರ ಸಾರ್ವಜನಿಕ ಸಂಸ್ಥೆಗಳು ಬೆಂಗಳೂರಿನಲ್ಲಿ ಶುರುವಾದವು. ಬಳಿಕ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು ಬಂದು, ತಂತ್ರಜ್ಞಾನ ಅಳವಡಿಕೆಯಾಗಿ ತಾಂತ್ರಿಕ ಮಾನವ ಸಂಪನ್ಮೂಲ ಶಕ್ತಿಯಾಗಿ ಬೆಳೆಯಿತು. ಹೀಗಾಗಿ ಐಟಿ-ಬಿಟಿ ಕಂಪನಿಗಳು ಬೆಂಗಳೂರನ್ನು ಅಷ್ಟುಸುಲಭವಾಗಿ ಅಲ್ಲಗಳೆಯಲಾಗದು ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿಗೆ ಐಟಿ-ಬಿಟಿ ವಲಯ ಉತ್ತಮ ಹೆಸರು ತಂದಿವೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಅವರ ಕೊಡುಗೆಯನ್ನು ಅಲ್ಲಗಳೆಯಲಾಗುವುದಿಲ್ಲ. ಆದರೆ ದಾಖಲೆ ಮಳೆಗೆ ಉಂಟಾದ ಸಮಸ್ಯೆಯನ್ನು ದೊಡ್ಡದಾಗಿ ತೋರಿಸಿ ಬೆಂಗಳೂರು ಬಿಡುವ ಮಾತನಾಡುವುದು ಸರಿಯಲ್ಲ. ಅಷ್ಟುಸುಲಭವಾಗಿ ಬೆಂಗಳೂರು ಬಿಟ್ಟು ಯಾರೂ ಹೋಗಲು ಸಾಧ್ಯವಿಲ್ಲ ಎಂದರು.
ಐಟಿ ಕಂಪನಿಗಳು ಮಾಡಿರುವ ಒತ್ತುವರಿ ತೆರವುಗೊಳಿಸಿ; ಎನ್.ಆರ್. ರಮೇಶ್ ಸವಾಲು
ಐಟಿ ಕಂಪನಿಗಳ ಒತ್ತುವರಿ ತೆರವು: ಐಟಿ ಕಂಪನಿಯ ಒಬ್ಬರು ಮಳೆ ಹಾನಿ ಬಗ್ಗೆ ತುಂಬಾ ಮಾತನಾಡಿದ್ದರು. ಕೊನೆಗೆ ಪರಿಶೀಲಿಸಿದರೆ ಅವರ ಕಂಪನಿಯೇ ರಾಜಕಾಲುವೆ ಒತ್ತುವರಿ ಮಾಡಿತ್ತು. ಅದು ಕಂಪನಿಯ ತಪ್ಪಲ್ಲ. ಟೆಕ್‌ಪಾರ್ಕ್ಗಳು ಅಕ್ರಮವಾಗಿ ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿವೆ. ಆದರೆ, ರಾಜ್ಯ ಸರ್ಕಾರವು ರಾಜಕಾಲುವೆ ಅಕ್ರಮ ಒತ್ತುವರಿ ತೆರವಿಗೆ ಬದ್ಧವಾಗಿದ್ದು ನಿರ್ದಾಕ್ಷಿಣ್ಯವಾಗಿ ತೆರವು ಕಾರ್ಯ ನಡೆಸಲಿದೆ. ಐಟಿ ಕಂಪನಿಗಳ ಕಾರ್ಯನಿರ್ವಹಣೆಗೆ ಸಮಸ್ಯೆಯಾಗದಂತೆ ಅವರೊಂದಿಗೆ ಚರ್ಚಿಸಿಯೇ ರಾಜಕಾಲುವೆ ಒತ್ತುವರಿ ತೆರವುಗೊಳಿಸಲಾಗುವುದು. ಒತ್ತುವರಿ ತೆರವಿನ ವಿಚಾರದಲ್ಲಿ ಎರಡನೇ ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.