ಬೆಂಗಳೂರು [ಅ.14]:  ರಾಜ್ಯದಲ್ಲಿ ನೀರಿನ ಸಂರಕ್ಷಣೆ, ನೀರಿನ ಮಿತ ಬಳಕೆ ಹಾಗೂ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಸುವ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ ಭಾನುವಾರ ಇಸ್ರೇಲ್ ದೇಶದ ಪ್ರತಿನಿಧಿಗಳ ಜತೆ ಚರ್ಚಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿಯಾದ ಇಸ್ರೇಲ್‌ನ ವೈಟಲ್ ಕ್ಯಾಪಿಟಲ್ ಎನ್ವಿರಾನ್ಮೆಂಟ್ ಸಂಸ್ಥೆಯ ಸಂಸ್ಥಾಪಕ ಈಟನ್ ಸ್ಟಿಬ್ಬೆ ನೇತೃತ್ವದ ಪ್ರತಿನಿಧಿಗಳು ಹಾಗೂ ಬಂಡವಾಳ ಹೂಡಿಕೆದಾರರ ನಿಯೋಗದೊಂದಿಗೆ ನೀರಿನ ಸಂರಕ್ಷಣೆ ಹಾಗೂ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಕೆ, ಬಂಡವಾಳ ಹೂಡಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಯಡಿಯೂರಪ್ಪ ಸಮಾಲೋಚನೆ ನಡೆಸಿದರು.

ಇಸ್ರೇಲ್ ಲಭ್ಯ ಅಲ್ಪ ನೀರನ್ನೇ ವೈಜ್ಞಾನಿಕವಾಗಿ ಮಿತ ಬಳಕೆ ಮಾಡಿಕೊಂಡು ಆಹಾರೋತ್ಪಾದನೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ರಾಜ್ಯದಲ್ಲಿ ನೆರೆ ಹಾಗೂ ಬರದಿಂದ ತತ್ತರಿಸಿರುವ ರೈತರಿಗೆ ಇಸ್ರೇಲ್ ತಂತ್ರಜ್ಞಾನ ಅಳವಡಿಕೆಯಿಂದ ಸಹಾಯ ವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ತಂತ್ರ ಜ್ಞಾನದ ಬಳಕೆ ಹಾಗೂ ಅದರ ಸಾಧಕ-ಭಾದಕ ಕುರಿತು ಚರ್ಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣವಿದೆ. ಸ್ಥಳೀಯ ಮಾನವ ಸಂಪ ನ್ಮೂಲ, ತಂತ್ರಜ್ಞಾನ ಸೇರಿದಂತೆ ಮೂಲ ಸೌಕರ್ಯ ಲಭ್ಯವಿದೆ. ಅಲ್ಲದೆ, ಸರ್ಕಾರ ಕೂಡ ಹೂಡಿಕೆ ದಾರರಿಗೆ ಪೂರಕವಾಗಿ ಹಲವು ಕ್ರಮ ಕೈಗೊಂಡಿದೆ ಎಂದು ಮಾಹಿತಿ ನೀಡಿದ ಯಡಿಯೂರಪ್ಪ ಅವರು, ರಾಜ್ಯದಲ್ಲಿ ಬಂಡವಾಳ ಹೂಡಿಕೆಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನೀಡುವು ದಾಗಿ ಇಸ್ರೇಲ್‌ನ 
ಉದ್ಯಮಿಗಳಿಗೆ ಭರವಸೆ ನೀಡಿದರು. 

ಇಸ್ರೇಲ್ ನಿಯೋಗದಲ್ಲಿ ವೈಟಲ್ ಕ್ಯಾಪಿಟಲ್ ಎನ್ವಿರಾನ್ಮೆಂಟ್ ಸಂಸ್ಥೆಯ ಪಾಲುದಾರ ರಾದ ಅಮಿತ್ ಸ್ಟಿಬ್ಬೆ, ಅಲಂಫ್ ಎಗ್ನಸ್, ವ್ಯವಸ್ಥಾಪಕ ನಿರ್ದೇಶಕ ವಿದ್ಯಾ ವತ್ಸಲ್ ಇದ್ದರು.