ನವದೆಹಲಿ (ನ.10):  ಬಿಜೆಪಿಯ ಯೋಗೇಶ್‌ ಗೌಡ ಅವರ ಹತ್ಯೆಗೂ ಮುನ್ನ ಹಾಗೂ ಹತ್ಯೆಯ ನಂತರ ಕಾಂಗ್ರೆಸ್‌ನ ಮಾಜಿ ಸಚಿವ ವಿನಯ್‌ ಕುಲಕರ್ಣಿ ಮುಂದೆ ತನಿಖೆಯ ಸಮಯದಲ್ಲಿ ತನಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಬೇಕಂತಲೇ ಎರಡು ಬಾರಿ ದೆಹಲಿಗೆ ಹೋಗಿ ಬಂದಿದ್ದರು ಎಂದು ಕೇಂದ್ರ ಅಪರಾಧ ತನಿಖಾ ದಳ (ಸಿಬಿಐ) ಆರೋಪಿಸಿದೆ.

ಪ್ರಕರಣದಲ್ಲಿ ಇತ್ತೀಚೆಗಷ್ಟೇ ಬಂಧಿತರಾಗಿರುವ ವಿನಯ್‌ ಕುಲಕರ್ಣಿ ವಿರುದ್ಧ ವಿಶೇಷ ಕೋರ್ಟ್‌ನಲ್ಲಿ ಈ ಆರೋಪ ಮಾಡಿರುವ ಸಿಬಿಐ, 2016ರ ಜೂನ್‌ 15ರಂದು ಧಾರವಾಡದ ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೇಶ್‌ ಗೌಡ ಅವರ ಹತ್ಯೆಯಾಗಿತ್ತು. ಹತ್ಯೆಗೂ ಮುನ್ನ ಜೂನ್‌ 12ರಂದು ವಿನಯ್‌ ಕುಲಕರ್ಣಿ ದೆಹಲಿಗೆ ವಿಮಾನದಲ್ಲಿ ತೆರಳಿ ಮರುದಿನ ವಾಪಸಾಗಿದ್ದರು. ಹತ್ಯೆಯ ನಂತರ ಜೂನ್‌ 16ರಂದು ಮತ್ತೆ ದೆಹಲಿಗೆ ತೆರಳಿ ಜೂ.18ರಂದು ಮರಳಿದ್ದರು. ಹತ್ಯೆಯ ಸಮಯದಲ್ಲಿ ತಾನು ಊರಿನಲ್ಲಿರಲಿಲ್ಲ ಎಂದು ಮುಂದೆ ತನಿಖೆಯ ಸಮಯದಲ್ಲಿ ಸಾಬೀತಪಡಿಸಬೇಕಾಗಿ ಬಂದರೆ ಇದರಿಂದ ಅನುಕೂಲವಾಗುತ್ತದೆಯೆಂದು ಹೀಗೆ ಮಾಡಿದ್ದರು ಎಂದು ಸಿಬಿಐ ಹೇಳಿದೆ.

'ವಿನಯ್ ಕುಲಕರ್ಣಿ ಬಂಧನ' ಗೃಹ ಸಚಿವ ಬೊಮ್ಮಾಯಿ ಹೇಳಿದ್ದಿಷ್ಟು! ..

ಯೋಗೇಶ್‌ ಗೌಡ ಅವರಿಗೆ 2016ರಲ್ಲಿ ಮಂತ್ರಿಯಾಗಿದ್ದ ವಿನಯ್‌ ಕುಲಕರ್ಣಿ ಜಿಲ್ಲಾ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಬೇಡ ಎಂದಿದ್ದರು. ಆದರೂ ಅವರು ಸ್ಪರ್ಧಿಸಿದ್ದರು. ನಂತರ ಅನೇಕ ಬಾರಿ ಅವರಿಬ್ಬರ ನಡುವೆ ಬಹಿರಂಗವಾಗಿ ಜಗಳ ನಡೆದಿತ್ತು. 2016ರ ಏ.22ರಂದು ನಡೆದ ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿತ್ತು. ಇದು ಮುಂದೆ ಯೋಗೇಶ್‌ ಗೌಡ ಅವರ ಹತ್ಯೆಗೆ ಸಂಚು ರೂಪಿಸಲು ಕಾರಣವಾಯಿತು ಎಂದು ಸಿಬಿಐ ಆರೋಪಿಸಿದೆ.

ಸಂಚಿನ ಭಾಗವಾಗಿ ವಿನಯ್‌ ಕುಲಕರ್ಣಿ ಅವರು ಪ್ರಕರಣದ ಆರೋಪಿಗಳಾದ ಬಸವರಾಜ್‌ ಮುತ್ತಗಿ ಮತ್ತು ನಾಗೇಂದ್ರ ತೋಡ್ಕರ್‌ ಎಂಬುವರ ನಡುವೆ ರಿಯಲ್‌ ಎಸ್ಟೇಟ್‌ ಜಗಳವೊಂದನ್ನು ಪರಿಹರಿಸಿದ್ದರು. ಅದಾಗಿ ಒಂದು ತಿಂಗಳಿಗೂ ಮೊದಲೇ ಹತ್ಯೆ ನಡೆದಿದೆ. ಸ್ಥಳೀಯ ಪೊಲೀಸರು ತಮ್ಮ ಆರೋಪಪಟ್ಟಿಯಲ್ಲಿ ಈ ವ್ಯವಹಾರವೇ ಕೊಲೆಗೆ ಕಾರಣ ಎಂದಿದ್ದಾರೆ. ಆದರೆ, ನಮ್ಮ ತನಿಖೆಯ ವೇಳೆ ಇವರು ರಿಯಲ್‌ ಎಸ್ಟೇಟ್‌ ವೈಷಮ್ಯವೇ ಇರಲಿಲ್ಲ ಎಂದಿದ್ದಾರೆ ಎಂದು ಸಿಬಿಐ ಹೇಳಿದೆ.

ಹಂತಕರು ಬೆಂಗಳೂರಿನಿಂದ ಧಾರವಾಡಕ್ಕೆ ಹೋಗಿದ್ದರು. ಅವರು ಬೆಂಗಳೂರಿನಲ್ಲಿ ವಿನಯ್‌ ಕುಲಕರ್ಣಿಗೆ ಹತ್ತಿರದವರ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದರು. ಅಲ್ಲಿ ಸ್ವತಃ ವಿನಯ್‌ ಕುಲಕರ್ಣಿ ಆರೋಪಿಗಳನ್ನು ಹತ್ಯೆಯ ಮರುದಿನ ಭೇಟಿಯಾಗಿದ್ದರು ಎಂದೂ ಸಿಬಿಐ ಆರೋಪಿಸಿದೆ.