ಬೆಂಗಳೂರು (ಅ.06):  ದೇಶದ ಹಲವೆಡೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಸೇರಿದ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದ ಸಿಬಿಐ, 74 ಕೋಟಿ ರು. ಅಕ್ರಮ ಆಸ್ತಿಗಳಿಕೆ ಆರೋಪದಡಿ ಶಿವಕುಮಾರ್‌ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ಒಂದೂವರೆ ವರ್ಷದ ಹಿಂದೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು, ಡಿ.ಕೆ.ಶಿವಕುಮಾರ್‌ ವಿರುದ್ಧ ಜನಪ್ರತಿನಿಧಿಯಾಗಿ ಕಾನೂನು ಬಾಹಿರವಾಗಿ ಅಕ್ರಮ ಆಸ್ತಿಗಳಿಕೆ ಮಾಡಿರುವುದು ಪತ್ತೆ ಹಚ್ಚಿತ್ತು. ಪ್ರಕರಣದಲ್ಲಿ ಶಿವಕುಮಾರ್‌ ಅವರನ್ನು ಬಂಧಿಸಿತ್ತು. ಅಕ್ರಮ ಆಸ್ತಿ ಸಂಬಂಧ ಇಡಿ ಅಧಿಕಾರಿಗಳು ಕೊಟ್ಟವರದಿ ಮೇರೆಗೆ ತನಿಖೆ ನಡೆಸಿ ಇದೀಗ ಎಫ್‌ಐಆರ್‌ ದಾಖಲಿಸಿದೆ.

ಸಿಬಿಐ ಪರಿಶೀಲನೆ ಅಂತ್ಯ: ಸಂಸದ ಡಿಕೆ ಸುರೇಶ್ ಫಸ್ಟ್ ರಿಯಾಕ್ಷನ್...

- 2013ರಿಂದ 2018ರ ಅವಧಿಯಲ್ಲಿ ಶಿವಕುಮಾರ್‌ ಸಚಿವರಾಗಿದ್ದರು. ಸಚಿವರಾಗುವ ಮುನ್ನ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಚರಾಸ್ತಿ ಮತ್ತು ಸ್ಥಿರಾಸ್ತಿಯ ಒಟ್ಟು  33.92 ಕೋಟಿ ಆಗಿತ್ತು. 2018ರ ವೇಳೆಗೆ ಚರಾಸ್ತಿ ಮತ್ತು ಸ್ಥಿರಾಸ್ತಿಯ ಒಟ್ಟು ಆಸ್ತಿ  128.60 ಕೋಟಿಗೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 162.53 ಕೋಟಿ ಆಗಿದೆ.

- ಈ ಅವಧಿಯಲ್ಲಿ ಶಿವಕುಮಾರ್‌ ಕುಟುಂಬ ಸದಸ್ಯರ ಖರ್ಚುಗಳು 113.12 ಕೋಟಿ ರು. ಎಂದು ತಿಳಿಸಲಾಗಿದೆ. ಅಂದರೆ, ಈ ಅವಧಿಯಲ್ಲಿ ಶಿವಕುಮಾರ್‌ ಅವರು ತಮ್ಮ ಹೆಸರಲ್ಲಿ ಮತ್ತು ಕುಟುಂಬದ ಸದಸ್ಯರ ಹೆಸರಿನಲ್ಲಿ ಒಟ್ಟು ಗಳಿಕೆಗಿಂತ 74.83 ಕೋಟಿ ರು. ಮೊತ್ತದ ಆಸ್ತಿಗಳಿಕೆ ಮಾಡಿರುವುದು ಬೆಳಕಿಗೆ ಬಂದಿದೆ. ಒಟ್ಟು ಐದು ವರ್ಷದಲ್ಲಿ ಶೇ.44.93ರಷ್ಟುಆದಾಯ ಏರಿಕೆಯಾಗಿದೆ.

ಬಿಜೆಪಿ ಷಡ್ಯಂತ್ರವನ್ನು ಎದುರಿಸುವ ಶಕ್ತಿ ನಮಗಿದೆ: ಡಿಕೆ ಸುರೇಶ್

ಇಷ್ಟುಮೊತ್ತದ ಆಸ್ತಿ ಡಿ.ಕೆ.ಶಿವಕುಮಾರ್‌ ಅವರು ಸಚಿವರಾಗಿದ್ದ ವೇಳೆಯೇ ಹೆಚ್ಚಳವಾಗಿದೆ. ಅಲ್ಲದೆ, ಡಿ.ಕೆ ಶಿವಕುಮಾರ್‌, ಆಪ್ತ ಆಂಜನೇಯ ಹನುಮಂತಯ್ಯ ಮತ್ತು ಸಂಬಂಧಿಕರಾದ ಶಶಿಕುಮಾರ್‌ ಶಿವಣ್ಣ ಅವರ ವಿರುದ್ಧ 2020ರ ಮಾ.12ರಂದು ಪ್ರಾಥಮಿಕ ತನಿಖೆ ಆರಂಭಿಸಿದಾಗ ತನಿಖೆ ವೇಳೆ ಡಿ.ಕೆ ಶಿವಕುಮಾರ್‌ ಮತ್ತು ಕುಟುಂಬ ಸದಸ್ಯರು 2013ರ ಏ.1ರಿಂದ 2018ರ ಏ.30ರ ನಡುವೆ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

ಇನ್ನು ಅಕ್ರಮ ಆಸ್ತಿಗಳಿಕೆ ಕುರಿತು ಪ್ರಶ್ನಿಸಿದಾಗ, ಸಮರ್ಥವಾದ ಉತ್ತರಗಳನ್ನು ಆರೋಪಿತರು ನೀಡಿಲ್ಲ. ಹೀಗಾಗಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆ ಕಲಂ 13(2) ಜೊತೆಗೆ13(1)(ಇ) ಅಡಿ ಡಿ.ಕೆ ಶಿವಕುಮಾರ್‌ ಶಿಕ್ಷಾರ್ಹರು ಎಂದು ಸಿಬಿಐ ದಾಖಲಿಸಿಕೊಂಡಿರುವ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.