ಮುಂದಿನ 25 ವರ್ಷ ಗುರಿಯಾಗಿಸಿಕೊಂಡು ದೂರದೃಷ್ಟಿ, 100 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ: ಸಿಎಂ 

ಬೆಂಗಳೂರು(ಆ.25): ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದು, ನೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ ಹೊಸದಾಗಿ ನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ ಮಾಡಲಾಗುವುದು. ಶೀಘ್ರದಲ್ಲೇ 9 ಜಿಲ್ಲೆಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬುಧವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಆಯೋಜಿಸಿದ್ದ ‘ರಾಷ್ಟ್ರೀಯ ವೈದ್ಯರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಂದಿನ 25 ವರ್ಷಗಳನ್ನು ಗುರಿಯಾಗಿಸಿಕೊಂಡು ಆರೋಗ್ಯ ಇಲಾಖೆ ಸಿದ್ಧಪಡಿಸಿದ ‘ವಿಷನ್‌ ಡಾಕ್ಯುಮೆಂಟ್‌’ ಬಿಡುಗಡೆ ಮಾಡಿ ಅವರು ಮಾತನಾಡಿದರು. ಇಂತಹ ವಿಷನ್‌ ಡಾಕ್ಯುಮೆಂಟ್‌ ಬೇರೆ ಯಾವ ರಾಜ್ಯದಲ್ಲೂ ಇಲ್ಲ. ಹೀಗಾಗಿ ಇದು ದೇಶದಲ್ಲೇ ಮೊದಲು ಎಂದು ಸರ್ಕಾರ ತಿಳಿಸಿದೆ.

ಕೋವಿಡ್‌ ವೇಳೆ ಸುಲಿಗೆ ಮಾಡಿದ ಖಾಸಗಿ ಆಸ್ಪತ್ರೆಗಳಿಗೆ ನೋಟಿಸ್‌: ಸಚಿವ ಸುಧಾಕರ್

ಹಳ್ಳಿಹಳ್ಳಿಗಳಲ್ಲೂ ಹೃದಯ ತಪಾಸಣೆ:

60 ವರ್ಷ ಮೇಲ್ಪಟ್ಟವರಿಗೆ ಉಚಿತ ನೇತ್ರ ಪರೀಕ್ಷೆಯ ಜೊತೆಗೆ ಬಡವರಿಗೆ ಕನ್ನಡಕವನ್ನು ಸರ್ಕಾರದಿಂದ ನೀಡಲಾಗುವುದು. ಹೃದಯ ಸಂಬಂಧಿ ಸಮಸ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕರ ಜೊತೆ ಚರ್ಚಿಸಿದ್ದು, ಗ್ರಾಮ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ತಪಾಸಣೆ ಶಿಬಿರ ಆಯೋಜಿಸಲು ತೀರ್ಮಾನಿಸಿದ್ದೇವೆ ಎಂದು ಮುಖ್ಯಮಂತ್ರಿ ಹೇಳಿದರು.

ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ ಅವರನ್ನು ಗುಣಮುಖರನ್ನಾಗಿಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ ರೋಗಿಗೆ ಇದು ಅತ್ಯಂತ ಮಹತ್ವದ ಘಟನೆ. ಆದ್ದರಿಂದ ವೈದ್ಯರು ಪ್ರತಿದಿನ ತಮ್ಮ ಕಾರ್ಯನಿರ್ವಹಣೆ ಬಳಿಕ ಆತ್ಮಾವಲೋಕನ ಮಾಡಿಕೊಂಡರೆ ಕೆಲಸದ ಸಾರ್ಥಕತೆಯ ಅರಿವು ಆಗುತ್ತದೆ ಎಂದು ಹೇಳಿದರು.

ರಾಜ್ಯಾದ್ಯಂತ 500 ‘ನಮ್ಮ ಕ್ಲಿನಿಕ್‌’:

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಸುಧಾಕರ್‌ ಮಾತನಾಡಿ, ರಾಜ್ಯಾದ್ಯಂತ 500 ‘ನಮ್ಮ ಕ್ಲಿನಿಕ್‌’ಗಳನ್ನು ಆರಂಭಿಸಲಾಗುವುದು. ಮುಂದಿನ ಎರಡು ತಿಂಗಳಿನಲ್ಲಿ ಬೆಂಗಳೂರಿನಲ್ಲಿ 243 ‘ನಮ್ಮ ಕ್ಲಿನಿಕ್‌’ ಆರಂಭವಾಗಲಿವೆ. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸುವ ಸಂಬಂಧ ಒಂದು ತಿಂಗಳೊಳಗೆ ಶಂಕು ಸ್ಥಾಪನೆ ಮಾಡಲಾಗುವುದು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಲ್ಲಿ ಐತಿಹಾಸಿಕ ಹಾಗೂ ಕ್ರಾಂತಿಕಾರಕವಾದ ಏಕರೂಪದ ಕೇಡರ್‌ ವ್ಯವಸ್ಥೆ ಜಾರಿಗೊಳಿಸುತ್ತಿದ್ದೇವೆ ಎಂದು ಹೇಳಿದರು.

ಕೋವಿಡ್‌ನ ಸವಾಲನ್ನು ವೈದ್ಯಕೀಯ ಸಿಬ್ಬಂದಿಯ ಸಹಕಾರದಿಂದ ಸಮರ್ಥವಾಗಿ ಎದುರಿಸಿದ್ದೇವೆ. ಎರಡನೇ ಡೋಸ್‌ ಕೂಡ ಶೇ.100 ಸಾಧನೆ ಆಗಿದೆ. ಮೂರನೇ ಡೋಸ್‌ ಶೇ.20ರಷ್ಟಾಗಿದ್ದು, ವೈದ್ಯರು ಶೇ.100ರ ಸಾಧನೆ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಗ್ರಾಮೀಣರಿಗೆ ಉತ್ತಮ ಆರೋಗ್ಯ ನೀಡುವ ಗುರಿ: ಸಚಿವ ಸುಧಾಕರ್‌

ಈ ಸಂದರ್ಭದಲ್ಲಿ ಉತ್ತಮ ಸೇವೆ ಮಾಡಿದ ವೈದ್ಯರು, ಅಧಿಕಾರಿಗಳು, ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿಷನ್‌ ಡಾಕ್ಯುಮೆಂಟ್‌ ಸದಸ್ಯರನ್ನು ಅಭಿನಂದಿಸಲಾಯಿತು. ಕಂದಾಯ ಸಚಿವ ಆರ್‌.ಅಶೋಕ್‌, ಶಾಸಕರಾದ ರಿಜ್ವಾನ್‌ ಅರ್ಷದ್‌, ರಾಜ್‌ಕುಮಾರ್‌ ತೇಲ್ಕೂರ್‌, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲಕುಮಾರ್‌, ಇಲಾಖೆಯ ಆಯುಕ್ತ ರಂದೀಪ್‌, ರಾಷ್ಟ್ರೀಯ ಆರೋಗ್ಯ ಮಿಷನ್‌ನ ನಿರ್ದೇಶಕಿ ಡಾ.ಅರುಂಧತಿ ಚಂದ್ರಶೇಖರ್‌ ಉಪಸ್ಥಿತರಿದ್ದರು.

ಏನಿದು ವಿಷನ್‌?

- ರಾಜ್ಯದ ಆರೋಗ್ಯ ಕ್ಷೇತ್ರದ ಸಮಸ್ಯೆ, ಪರಿಹಾರ ಕುರಿತ ದಾಖಲೆ
- ಮುಂದಿನ 25 ವರ್ಷಗಳಲ್ಲಿ ಎದುರಾಗಬಹುದಾದ ಸಮಸ್ಯೆ ಪಟ್ಟಿ
- ಅಂತಹ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ದಾಖಲೆ ಇದು
- ಇಂತಹ ದಾಖಲೆ ಕರ್ನಾಟಕ ಬಿಟ್ಟು ಬೇರಾವ ರಾಜ್ಯದಲ್ಲೂ ಇಲ್ಲ