ರೊವಾಂಡಾ ದೇಶದಲ್ಲಿ ಇಂಡಿಯನ್ ಕ್ರೀಡಾ ಶಾಲೆ ಆರಂಭ: ಸಚಿವ ಸತೀಶ್ ಜಾರಕಿಹೊಳಿ
ಪೂರ್ವ ಆಫ್ರಿಕಾದ ರೊವಾಂಡಾ ದೇಶದಲ್ಲಿ ಇಂಡಿಯನ್ ಕ್ರೀಡಾ ಶಾಲೆ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಅಗತ್ಯವಿರುವ ಜಾಗ ಸಹ ಗುರುತಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
ಬೆಳಗಾವಿ (ಸೆ.09): ಪೂರ್ವ ಆಫ್ರಿಕಾದ ರೊವಾಂಡಾ ದೇಶದಲ್ಲಿ ಇಂಡಿಯನ್ ಕ್ರೀಡಾ ಶಾಲೆ ಆರಂಭಿಸಲು ಉದ್ದೇಶಿಸಿದ್ದು, ಇದಕ್ಕಾಗಿ ಅಗತ್ಯವಿರುವ ಜಾಗ ಸಹ ಗುರುತಿಸಲಾಗಿದೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ನಗರದ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ಜರುಗಿದ ಸ್ಥಳೀಯ ಉದ್ಯಮಿಗಳು ಹಾಗೂ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಮಾತನಾಡಿದ ಅವರು, ಆ ದೇಶದಲ್ಲಿ ಉದ್ದಿಮೆಗಳ ಸ್ಥಾಪನೆಗೆ ಸಾಕಷ್ಟು ಅವಕಾಶಗಳಿವೆ. ಆಫ್ರಿಕಾ ಇತ್ತೀಚೆಗೆ ಕೆಲವು ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಸಾಧಿಸಿದೆ.ಈ ಭಾಗದ ಉದ್ಯಮಿಗಳು ಸಿಂಗಾಪುರ ಕಡೆ ಪ್ರವಾಸ ಹೋದಾಗ ರೊವಾಂಡಾ ದೇಶಕ್ಕೆ ತಪ್ಪದೇ ಭೇಟಿ ನೀಡಬೇಕು ಎಂದ ಅವರು, ಉದ್ಯಮಿಗಳಿಗೆ ರೊವಾಂಡಾ ದೇಶದಲ್ಲಿ ಹೂಡಿಕೆಗೆ ಲಭ್ಯವಿರುವ ಅವಕಾಶಗಳ ಕುರಿತು ಅರಿತುಕೊಳ್ಳಲು ಉದ್ಯಮಿಗಳ ಜತೆಗಿನ ಸಂವಾದ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಹೂಡಿಕೆಗೆ ಮುಕ್ತ ಸ್ವಾಗತ ಎಂದ ಜಾಕ್ವೆಲಿನ್ ಮುಕಂಜಿರಾ: ಪೂರ್ವ ಆಫ್ರಿಕಾದ ರೊವಾಂಡಾ ದೇಶದ ರಾಯಭಾರಿ ಜಾಕ್ವೆಲಿನ್ ಮುಕಂಜಿರಾ ಮಾತನಾಡಿ, ರೊವಾಂಡಾ ದೇಶದಲ್ಲಿ ಕೃಷಿ, ಆರೋಗ್ಯ, ಶಿಕ್ಷಣ, ಗಣಿಗಾರಿಕೆ, ಇಂಧನ ಹಾಗೂ ಮೂಲಸೌಕರ್ಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ. ಕೈಗಾರಿಕೋದ್ಯಮಿಗಳು, ಬಂಡವಾಳ ಹೂಡಿಕೆದಾರರಿಗೆ ಅನುಕೂಲವಾಗುವಂತಹ ಉದ್ಯಮಸ್ನೇಹಿ ವಾತಾವರಣ ಇದ್ದು, ಇಲ್ಲಿನ ಹೂಡಿಕೆದಾರರಿಗೆ ಮುಕ್ತ ಸ್ವಾಗತವಿದೆ ಎಂದು ಆಹ್ವಾನಿಸಿದರು.
ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆಯಿಂದ ಅನ್ಯಾಯ: ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಆಫ್ರಿಕಾದಲ್ಲಿ ರೊವಾಂಡಾ ದೇಶ ಇ-ಕಾಮರ್ಸ್, ಇ-ಸರ್ವೀಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕ್ಷಿಪ್ರ ಪ್ರಗತಿ ಸಾಧಿಸುತ್ತಿದೆ. ದೇಶದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ, ವ್ಯಾಪಾರ-ವಹಿವಾಟು ನಡೆಸಲು ಅನುಕೂಲವಾಗುವಂತೆ ವ್ಯಾಪಾರ ಸ್ನೇಹಿ ವಾತಾವರಣ ಹೊಂದಿದೆ. ಬಂಡವಾಳ ಹೂಡಿಕೆಗೆ ಅನುಕೂಲವಾಗುವಂತಹ ತೆರಿಗೆ ಪದ್ಧತಿ ಜಾರಿಯಲ್ಲಿದೆ. ಪಾರದರ್ಶಕ ಹಾಗೂ ಉದ್ಯೋಗ ಸ್ನೇಹಿ ವಾತಾವರಣ ಜತೆಗೆ ಆಫ್ರಿಕಾದಲ್ಲೇ ಅತ್ಯಂತ ಸುರಕ್ಷಿತ ದೇಶವಾಗಿದೆ. ಆಫ್ರಿಕಾದಲ್ಲಿಯೇ ಆರ್ಥಿಕ ಬೆಳವಣಿಗೆಯಲ್ಲಿ 11 ವರ್ಷಗಳಿಂದ ಮುಂಚೂಣಿಯಲ್ಲಿದೆ ಎಂದು ಹೇಳಿದರು.
ಉದ್ಯಮ ಸ್ಥಾಪನೆಗೆ 6 ಗಂಟೆ ಸಾಕು: ರೊವಾಂಡಾ ದೇಶದಲ್ಲಿ ಒಂದು ಉದ್ಯಮ ಆರಂಭಿಸಲು ಕೇವಲ 6 ಗಂಟೆ ಸಾಕು. ಒನ್ ಸ್ಟಾಪ್ ಸೆಂಟರ್ ಮಾದರಿಯಲ್ಲಿ 200 ಬಗೆಯ ಅನುಮತಿಗಳನ್ನು ಸರ್ಕಾರ ಉಚಿತವಾಗಿ ನೀಡಲಿದೆ. ಇಂಟರ್ನೆಟ್ ಸೌಲಭ್ಯ, ವಿದ್ಯುತ್ ಸಂಪರ್ಕ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಲಭ್ಯವಿವೆ. ದೇಶದ ಸಂವಿಧಾನ ಮಹಿಳಾ ಸಬಲೀಕರಣ ಹಾಗೂ ಲಿಂಗ ಸಮಾನತೆಗೆ ಆದ್ಯತೆ ನೀಡಿರುವುದರಿಂದ ಶೇ.50ಕ್ಕೂ ಅಧಿಕ ಮಹಿಳೆಯರು ಸಂಸದರಾಗಿದ್ದಾರೆ. ಮೂಲಸೌಕರ್ಯ, ರಿಯಲ್ ಎಸ್ಟೇಟ್, ಕೃಷಿ, ಎನರ್ಜಿ, ಟೂರಿಸಂ, ಆರೋಗ್ಯ, ಗಣಿಗಾರಿಕೆ, ಶಿಕ್ಷಣ, ಕೃಷಿ, ಶಿಕ್ಷಣ, ಭದ್ರತೆ, ಇಂಧನ, ಸಂಶೋಧನಾ ಮತ್ತಿತರ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ವಿಫುಲ ಅವಕಾಶಗಳಿವೆ.
ಕಾಮನ್ ವೆಲ್ತ್ ಸದಸ್ಯ ರಾಷ್ಟ್ರಗಳ ಜನರಿಗೆ ವೀಸಾ ಸುಲಭವಾಗಿ ನೀಡುತ್ತಿದೆ. ವೀಸಾ ಆನ್ ಅರೈವಲ್ ವ್ಯವಸ್ಥೆ ಕಲ್ಪಿಸಿದೆ. ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ಇದರ ಪ್ರಯೋಜನ ಪಡೆದುಕೊಂಡು ಭಾರತ-ರೊವಾಂಡಾ ನಡುವಿನ ವ್ಯಾಪಾರ ಸಂಬಂಧವನ್ನು ಮತ್ತಷ್ಟು ಬಲಪಡಿಸಬೇಕು ಎಂದ ಅವರು, ರೊವಾಂಡಾದಲ್ಲಿ ಉದ್ದಿಮೆ ಸ್ಥಾಪಿಸಲು ಮುಂದಾಗಿರುವ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮಾತನಾಡಿ, ಭಾರತ-ರೊವಾಂಡಾ ದೇಶಗಳ ಮಧ್ಯೆ ವ್ಯವಹಾರಿಕ ಸಂಬಂಧ ಗಟ್ಟಿಗೊಳ್ಳಲಿದೆ ಎಂದು ಆಶಿಸಿದ ಅವರು, ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯು ವಾಣಿಜ್ಯ, ಕೈಗಾರಿಕೋದ್ಯಮ ಕ್ಷೇತ್ರದಲ್ಲಿ ಅಗಾಧ ಸಾಧನೆಗೈದಿರುತ್ತವೆ. ರೊವಾಂಡಾ ದೇಶದಲ್ಲಿ ಲಭ್ಯವಿರುವ ಅವಕಾಶ ಬಳಸಿಕೊಂಡು ಬಂಡವಾಳ ಹೂಡಿಕೆಗೆ ಸಿದ್ಧರಿದ್ದಾರೆ ಎಂದರು.
ಆರಂಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಅವರು, ಬೆಳಗಾವಿ ಜಿಲ್ಲೆಯಲ್ಲಿ ಕೈಗಾರಿಕೆ, ಶಿಕ್ಷಣ, ಆರೋಗ್ಯ, ಆಟೋಮೊಬೈಲ್, ಸಕ್ಕರೆ ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯ ಕುರಿತು ವಿವರಿಸಿದ ಅವರು, ಇಲ್ಲಿನ ಕೈಗಾರಿಕೋದ್ಯಮಿಗಳು ರೊವಾಂಡಾದಲ್ಲಿ ಬಂಡವಾಳ ಹೂಡಿಕೆ ಹಾಗೂ ವಿವಿಧ ಬಗೆಯ ಉದ್ಯಮ ಆರಂಭಿಸಲು ಉತ್ಸುಕರಾಗಿದ್ದಾರೆ ಎಂದು ತಿಳಿಸಿದರು. ಶಾಸಕ ಆಸಿಫ್(ರಾಜು) ಸೇಠ್, ನಗರ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಪಂ ಸಿಇಒ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮತ್ತಿತರರು ಇದ್ದರು. ಬೆಳಗಾವಿ ಜಿಲ್ಲೆಯ ಕೈಗಾರಿಕೋದ್ಯಮಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಿಜೆಪಿಯವರು ಪಶ್ಚಾತಾಪ ಪಡುತ್ತಿದ್ದು, ನಾವೆಲ್ಲ ಸಿಎಂ ಸಿದ್ದರಾಮಯ್ಯ ಜೊತೆ ಇದ್ದೇವೆ: ಸಚಿವ ಎಂ.ಬಿ.ಪಾಟೀಲ್
ರೊವಾಂಡಾ ಭಾರತದಿಂದ ಸ್ಟೀಲ್, ಔಷಧ ಸಾಮಗ್ರಿ ಮತ್ತಿತರ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಗೆ ಕಾಫಿ ಮತ್ತಿತರ ವಸ್ತುಗಳನ್ನು ರಫ್ತು ಮಾಡುತ್ತಿದೆ. ಭಾರತ-ರೊವಾಂಡಾ ನಡುವಿನ ದ್ವಿಪಕ್ಷೀಯ ಸಂಬಂಧ ಇದೇ ರೀತಿ ಸದೃಢವಾಗಿ ಮುಂದುವರಿಯಬೇಕಿದೆ. ಎರಡೂ ದೇಶಗಳ ಸಂಬಂಧ ಮಹತ್ವದ್ದಾಗಿದೆ.
-ಜಾಕ್ವೆಲಿನ್ ಮುಕಂಜಿರಾ ರೊವಾಂಡಾ ದೇಶದ ರಾಯಭಾರಿ