ಮಲ್ಲಿಕಾರ್ಜುನ ಹೊಸಮನಿ

ಬಾಗಲಕೋಟೆ(ಜ.12): ಈತ ದೇಶ ಕಾಯೋ ಕನ್ನಡ ನಾಡಿನ ಹೆಮ್ಮೆಯ ಯೋಧ. ಈತನಿಗೆ ದೇಶ ಕಾಯುವ ಕೆಲಸ ಒಂದೆಡೆಯಾದರೆ, ಮತ್ತೊಂದೆಡೆ ತನ್ನೂರಿನ ಹೊಲಗದ್ದೆ ಕುರಿತು ಚಿಂತಿಸುವ ಕೆಲಸ. 

ಹೀಗಾಗಿ ನಿತ್ಯವೂ ತನ್ನ ದೇಶ ಕಾಯುವ ಸೇವೆಯ ಮಧ್ಯೆಯೇ ತನ್ನ ಹೊಲದ ಮಾಹಿತಿ ಪಡೆಯುತ್ತಾ, ರಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಾ ಅದ್ಭುತ ಬೆಳೆ ಬೆಳೆದು ಮಾದರಿ ರೈತನಾಗಿ ಹೊರಹೊಮ್ಮಿದ್ದಾರೆ. 

ಹೀಗೆ ದೇಶ ಕಾಯುವ ಸೇವೆಯ ಮಧ್ಯೆಯೇ ತನ್ನೂರಿನ ಹೊಲದಲ್ಲಿ ಕೆಲಸ ಮಾಡುವುದರಲ್ಲಿ ಬ್ಯೂಸಿಯಾಗಿರೋ ಇವರ ಹೆಸರು ಲಕ್ಷ್ಮಣ ಪೂಜಾರ. ಮೂಲತ: ಬಾಗಲಕೋಟೆ ಜಿಲ್ಲೆಯ ಚಿಕ್ಕೂರ ಗ್ರಾಮದವರು. 

ಕಳೆದ 22 ವರ್ಷಗಳಿಂದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಲಕ್ಷ್ಮಣ, ಇದೀಗ ದೆಹಲಿಯಲ್ಲಿ ಕತರ್ತವ್ಯ ನಿರತರಾಗಿದ್ದಾರೆ. ಈ ಮಧ್ಯೆ ಲಕ್ಷ್ಮಣ ಅವರಿಗೆ ದೇಶ ಸೇವೆ ಜೊತೆ ಕೃಷಿಕನಾಗಿಯೂ ಸಾಧನೆ ಮಾಡಬೇಕೆಂಬ ಹಂಬಲ. ಹೀಗಾಗಿ ತಮ್ಮ ಒಡೆತನದ ಹೊಲದಲ್ಲಿ ಬೆಳೆದಿದ್ದ ಕಬ್ಬಿನ ಬೆಳೆ ಬದಲಾಗಿ ತಮ್ಮ ಸ್ನೇಹಿತರ ಮಾರ್ಗದರ್ಶನದಂತೆ ಈ ಬಾರಿ ಬಾಳೆಯ ಬೆಳೆಯನ್ನ ಬೆಳೆದಿದ್ದಾರೆ.

"

4 ಎಕರೆ ಪ್ರದೇಶದಲ್ಲಿ ಬಾಳೆ ಬಹಳಷ್ಟು ಹುಲುಸಾಗಿ ಬೆಳೆದಿದ್ದು ಇತರ ರೈತರಿಗೆ ಮಾದರಿಯಾಗುವಂತಾಗಿದೆ. ದೇಶ ಕಾಯೋದು ನನ್ನ ಕೆಲಸವಾದರೂ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಛಲ ನನ್ನಲ್ಲಿತ್ತು. ಹೀಗಾಗಿ ರಜೆಗೆಂದು ಬಂದಾಗ ಹೊಲದಲ್ಲಿ ಕೆಲಸ ಮಾಡುತ್ತೇನೆ. ಇದರಿಂದ ಉತ್ತಮ ಬೆಳೆ ಬರುತ್ತಿದೆ ಇದ್ರಿಂದ ಖುಷಿಯಾಗಿದೆ ಅಂತಾರೆ ಯೋಧ ಲಕ್ಷ್ಮಣ.

ಇನ್ನು ರಜೆ ಮೇಲೆ ಬಂದಾಗಲಂತೂ ಹೊಲದಲ್ಲಿಯೇ ಇದ್ದು ಕೆಲಸ ಮಾಡಿ ಬೆಳೆ ತೆಗೆಯುವದರಲ್ಲಿ ಲಕ್ಷ್ಮಣ ನಿಸ್ಸೀಮರು. ಒಟ್ಟು 4 ಎಕರೆ ಪ್ರದೇಶದಲ್ಲಿ ಅಂದಾಜು 20 ಲಕ್ಷ ರೂ. ಆದಾಯ ತರಬಹುದಾದ ಬಾಳೆ ಬೆಳೆಯನ್ನ ಬೆಳೆದಿದ್ದಾರೆ. ಇದನ್ನ ಕಂಡ ಸುತ್ತಮುತ್ತಲಿನ ಗ್ರಾಮಗಳ ರೈತರು, ವಿವಿಧ ಕೃಷಿ ಅಧಿಕಾರಿಗಳು, ಸಂಯೋಜಕರು ಹೊಲಕ್ಕೆ ಭೇಟಿ ನೀಡಿ ಯೋಧ ಲಕ್ಷ್ಮಣ ಅವರ ಕೃಷಿ ಪ್ರೇಮ ಕೊಂಡಾಡುತ್ತಿದ್ದಾರೆ.

ಒಟ್ಟಿನಲ್ಲಿ ದೇಶ ಕಾಯುವ ಯೋಧನೊಬ್ಬ ತನ್ನ ಕಾಯಕದ ಮಧ್ಯೆಯೂ ಕೃಷಿ ಪ್ರೇಮ ಮೆರೆಯುತ್ತಿದ್ದು, ಅವರಿಗೆ ನಮ್ಮದೊಂದು ಸಲಾಂ ಇರಲಿ.