ದೇಶದ ಮೊದಲ ಅಂಚೆಯಣ್ಣ ಪ್ರತಿಮೆ ಇಂದು ಬೆಳಗಾವಿಯಲ್ಲಿ ಉದ್ಘಾಟನೆ.

ಬೆಳಗಾವಿ[ಜ.12]: ದೇಶದಲ್ಲೇ ಮೊದಲ ಬಾರಿಗೆ ಪೋಸ್ಟ್‌ಮನ್‌ನ ಪ್ರತಿಮೆಯನ್ನು ನಗರದಲ್ಲಿ ನಿರ್ಮಿಸಲಾಗಿದ್ದು, ಶನಿವಾರ ಅನಾವರಣಗೊಳ್ಳಲಿದೆ.

ಕ್ಯಾಂಪ್‌ ಪ್ರದೇಶದ ಕೇಂದ್ರ ಅಂಚೆ ಕಚೇರಿ ಬಳಿ ನಿರ್ಮಿಸಲಾಗಿರುವ 350 ಕೆಜಿ ತೂಕದ ಹಾಗೂ 8 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಬೆಳಗ್ಗೆ 11 ಗಂಟೆಗೆ ಸಂಸದ ಸುರೇಶ ಅಂಗಡಿ ಅನಾವರಣಗೊಳಿಸುವರು. ಇದೇ ಸಂದರ್ಭದಲ್ಲಿ ಅಲ್ಲಿರುವ ರಸ್ತೆಗೆ ಕೇಂದ್ರ ಅಂಚೆ ಕಚೇರಿ ರಸ್ತೆ ಎಂದು ಮರುನಾಮಕರಣ ಮಾಡಲಾಗುವುದು.

ಅರಣ್ಯ ಸಚಿವ ಸತೀಶ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಲಕ್ಷ್ಮಿ ಹೆಬ್ಬಾಳಕರ್‌, ಅಂಚೆ ಇಲಾಖೆ ಉತ್ತರ ಕರ್ನಾಟಕ ವಲಯ ಅಂಚೆ ಸೇವೆಗಳ ನಿರ್ದೇಶಕ ಸಣ್ಣನಾಯ್ಕ ಭಾಗವಹಿಸುವರು. ಅಂಚೆ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಹಣ ಒಟ್ಟುಗೂಡಿಸಿ ಈ ಪ್ರತಿಮೆ ನಿರ್ಮಿಸಿದ್ದಾರೆ.