ನವದೆಹಲಿ/ಬೆಂಗಳೂರು(ಅ.14): ಕೊರೋನಾ ಹೆಮ್ಮಾರಿಯಿಂದ ಎಂದು ಮುಕ್ತಿ ದೊರಕಬಹುದು ಎಂಬ ನಿರೀಕ್ಷೆಯಲ್ಲಿರುವ ದೇಶವಾಸಿಗಳಿಗೆ ಕೊನೆಗೂ ಆಶಾದಾಯಕ ಬೆಳವಣಿಗೆಗಳು ಗೋಚರವಾಗತೊಡಗಿವೆ. ಮಂಗಳವಾರ ಬೆಳಗ್ಗೆ 8ರವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 55,342 ಕೊರೋನಾ ಸೋಂಕಿತರು ಪತ್ತೆಯಾಗಿದ್ದರೆ, 706 ಮಂದಿ ಬಲಿಯಾಗಿದ್ದಾರೆ. ಇದು ಕಳೆದ 2 ತಿಂಗಳಲ್ಲೇ ದೈನಂದಿನ ಕೇಸುಗಳಲ್ಲಿ ಅತ್ಯಂತ ಕನಿಷ್ಠ ಪ್ರಮಾಣವಾಗಿದೆ.

ಆದರೆ ಕಳೆದ 15-20 ದಿನಗಳಲ್ಲಿ ದೇಶದ ಬಹುತೇಕ ರಾಜ್ಯಗಳಲ್ಲಿ ಹೊಸ ಸೋಂಕು ಇಳಿಕೆಯಾಗುತ್ತಿದೆಯಾದರೂ, ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಮತ್ತೆ ಹೊಸ ಪ್ರಕರಣಗಳಲ್ಲಿ ಭಾರೀ ಹೆಚ್ಚಳ ಕಂಡುಬಂದಿದೆ. ಇನ್ನು ಕೆಲ ರಾಜ್ಯಗಳಲ್ಲಿ ಅನಿಯಂತ್ರಿತ ಏರಿಳಿಕೆ ದಾಖಲಾಗುತ್ತಿದೆ. ಇದು ಸಹಜವಾಗಿಯೇ ಕರ್ನಾಟಕದಲ್ಲಿ ಆರೋಗ್ಯ ಖಾತೆಯ ನೂತನ ಸಚಿವರಾಗಿ ನಿಯುಕ್ತಿಗೊಂಡಿರುವ ಕೆ. ಸುಧಾಕರ್‌ ಅವರಿಗೆ ಹೊಸ ಸವಾಲಾಗಿದೆ. ಕೋವಿಡ್‌ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸಾಕಷ್ಟುಕ್ರಮಗಳನ್ನು ಕೈಗೊಳ್ಳುತ್ತಿದೆಯಾದರೂ, ಸರ್ಕಾರವೊಂದರಿಂದಲೇ ಸೋಂಕು ನಿಯಂತ್ರಣ ಸಾಧ್ಯವಿಲ್ಲ. ಇದರಲ್ಲಿ ಸಾರ್ವಜನಿಕರ ಸಕ್ರಿಯ ಪಾಲುದಾರಿಕೆಯೂ ಅಗತ್ಯ.

"

ಸತತ 5ನೇ ದಿನ ಇಳಿಕೆ:

ದೇಶದಲ್ಲಿ ಸೆಪ್ಟೆಂಬರ್‌ ಅಂತ್ಯದಲ್ಲಿ ನಿತ್ಯವೂ ಲಕ್ಷದ ಸಮೀಪ ಹೊಸ ಕೇಸು ಪತ್ತೆಯಾಗುವ ಮೂಲಕ ಮೂಡಿದ್ದ ಆತಂಕ ಹಂತಹಂತವಾಗಿ ಇಳಿಕೆಯಾಗುವ ಸೂಚನೆ ಕಂಡುಬಂದಿದೆ. ಮಂಗಳವಾರ 60 ಸಾವಿರಕ್ಕಿಂತ ಕಡಿಮೆ ಸೋಂಕಿತರು ಪತ್ತೆಯಾಗಿದ್ದಾರೆ. ಸತತ ಐದು ದಿನಗಳಿಂದ ಹೊಸ ಸೋಂಕಿನ ಪ್ರಮಾಣ 75 ಸಾವಿರಕ್ಕಿಂತಲೂ ಕೆಳಗಿಳಿದಿದೆ. ಮತ್ತೊಂದೆಡೆ, ನಿತ್ಯ ಸರಾಸರಿ ಒಂದು ಸಾವಿರ ಸಾವು ಸಂಭವಿಸುತ್ತಿದ್ದ ದೇಶದಲ್ಲಿ ಸತತ 10 ದಿನಗಳಿಂದ ಮೃತರ ಸಂಖ್ಯೆ 1000ದ ಒಳಗೇ ಇದೆ. ಇನ್ನೊಂದೆಡೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಸತತ 5ನೇ ದಿನವೂ 9 ಲಕ್ಷದ ಒಳಗೇ ಇದೆ.

55,342 ಹೊಸ ಸೋಂಕಿತರೊಂದಿಗೆ ದೇಶದಲ್ಲಿ ಒಟ್ಟಾರೆ ಕೊರೋನಾಪೀಡಿತರ ಸಂಖ್ಯೆ 71,75,880ಕ್ಕೆ ಹೆಚ್ಚಳವಾಗಿದೆ. 706 ಸಾವಿನೊಂದಿಗೆ ಮೃತರ ಸಂಖ್ಯೆ 1,09,856ಕ್ಕೆ ಏರಿಕೆ ಕಂಡಿದೆ. ಸದ್ಯ ದೇಶದಲ್ಲಿ 8,38,729 ಮಂದಿ ಸಕ್ರಿಯ ಸೋಂಕಿತರು ಇದ್ದಾರೆ.

ಟಾಪ್‌-3ರಲ್ಲಿ ಕರ್ನಾಟಕ

ವಿವಿಧ ಕೋವಿಡ್‌ ನಿಯಂತ್ರಣ ಕ್ರಮಗಳ ಮೂಲಕ ದೇಶಕ್ಕೇ ಮಾದರಿಯಾಗಿದ್ದ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಸೋಂಕಿನಲ್ಲಿ ಭಾರೀ ಏರಿಕೆಯಾಗುತ್ತಿದೆ. ಮಾತ್ರವಲ್ಲ ಅತಿ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ನಂ.2, ಅತಿ ಹೆಚ್ಚು ಸಕ್ರಿಯ ಕೇಸಲ್ಲಿ ನಂ.2, ಅತಿ ಹೆಚ್ಚು ಸಾವಲ್ಲಿ ನಂ.3 ಸ್ಥಾನದಲ್ಲಿದೆ. ಪ್ರಸಕ್ತ ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 7.71 ಲಕ್ಷ ದಾಟಿದ್ದರೆ, 6.07 ಲಕ್ಷ ಜನರು ಗುಣಮುಖರಾಗಿದ್ದಾರೆ. 1.15 ಲಕ್ಷ ಜನ ಸಕ್ರಿಯ ಸೋಂಕಿತರಿದ್ದು, 10000ಕ್ಕೂ ಹೆಚ್ಚು ಸಾವು ದಾಖಲಾಗಿದೆ.