Asianet Suvarna News

ದೇಶದಲ್ಲೇ ಮೊದಲು: ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ದೇಶದಲ್ಲೇ ಮೊದಲ ಬಾರಿಗೆ ರಾಜ್ಯದಲ್ಲಿ ಡ್ರೋನ್‌ನಲ್ಲಿ ಔಷಧ ಸಾಗಣೆ ಪ್ರಯೋಗ!

* ಜೂ.18ರಿಂದ ಗೌರಿಬಿದನೂರಿನಲ್ಲಿ ಆರಂಭ

* ಅಪಘಾತವಿಲ್ಲದೆ 100 ತಾಸು ಹಾರಿಸುವ ಸಾಹಸ

* ಡಾ| ದೇವಿಶೆಟ್ಟಿ ಆಸ್ಪತ್ರೆಗಾಗಿ ಪ್ರಯೋಗ

* ಯಶಸ್ವಿಯಾದರೆ 2 ವರ್ಷದಲ್ಲಿ ಡ್ರೋನ್‌ನಲ್ಲಿ ಬರುತ್ತೆ ಔಷಧ

India first medical drone delivery trials from June 18 in Karnataka pod
Author
Bangalore, First Published Jun 14, 2021, 10:28 AM IST
  • Facebook
  • Twitter
  • Whatsapp

ಬೆಂಗಳೂರು(ಜೂ.14): ದೇಶದಲ್ಲೇ ಮೊದಲ ಬಾರಿಗೆ ಡ್ರೋನ್‌ ಮೂಲಕ ಔಷಧ ರವಾನೆಯ ಪ್ರಯೋಗಕ್ಕೆ ರಾಜ್ಯ ಸಾಕ್ಷಿಯಾಗಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಜೂನ್‌ 18ರಿಂದ ಪೂರ್ವಭಾವಿ ಪ್ರಯೋಗ ಮತ್ತು ಜೂನ್‌ 21ರಿಂದ 45 ದಿನಗಳ ಕಾಲ ಅಧಿಕೃತ ಪ್ರಯೋಗ ನಡೆಯಲಿದೆ. ಈ ಪ್ರಯತ್ನ ಯಶಸ್ವಿಯಾದರೆ ಅಮೆರಿಕ, ಚೀನಾದಂತೆ ಭಾರತದಲ್ಲೂ ಔಷಧ ಹೊತ್ತ ಡ್ರೋನ್‌ಗಳು ಹಾರಾಡುತ್ತಿರುವುದನ್ನು ಎರಡು ವರ್ಷದಲ್ಲಿ ಕಾಣಬಹುದು.

ಬೆಂಗಳೂರು ಮೂಲದ ಡ್ರೋನ್‌ ಉತ್ಪಾದಕ ಕಂಪನಿ ಥ್ರೊಟಲ್‌ ಏರೋಸ್ಪೇಸ್‌ ಸಿಸ್ಟಮ್‌ (ಟಿಎಎಸ್‌), ಇತರೆ ಸಂಸ್ಥೆಗಳ ಸಹಯೋಗದೊಂದಿಗೆ ಖ್ಯಾತ ವೈದ್ಯ ಡಾ. ದೇವಿ ಶೆಟ್ಟಿಅವರ ನಾರಾಯಣ ಹೆಲ್ತ್‌ ಕೇರ್‌ಗಾಗಿ ಔಷಧ ಸಾಗಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದೆ. ನಾರಾಯಣ ಆರೋಗ್ಯ ಸಂಸ್ಥೆಯು ಸಾಗಾಣಿಕೆಗೆ ಬಳಸುವ ಔಷಧಗಳನ್ನು ಟಿಎಎಸ್‌ಗೆ ನೀಡಲಿದೆ. ಯಾವ ರೀತಿಯ ಔಷಧಗಳನ್ನು ಡ್ರೋನ್‌ ಮೂಲಕ ಸಾಗಾಟ ನಡೆಸಬಹುದು, ಸಾಗಾಣಿಕೆಗೆ ಇರುವ ಸವಾಲುಗಳೇನು ಎಂಬುದು ಕೂಡ ಈ ಪ್ರಯೋಗದ ಭಾಗವಾಗಿರಲಿದೆ.

ಕಾರ್ಯಾಚರಣೆ ಹೇಗೆ?:

ಔಷಧ ಅಗತ್ಯ ಇರುವ ಮಾಹಿತಿಯನ್ನು ರೋಗಿಯು ಟಿಎಎಸ್‌ನ ಸಾಫ್ಟ್‌ವೇರ್‌ಗೆ ಸಲ್ಲಿಸುತ್ತಾರೆ. ಇದನ್ನು ಪರಿಶೀಲಿಸಿ ಔಷಧವನ್ನು ಡ್ರೋನ್‌ಗೆ ತುಂಬಲಾಗುತ್ತದೆ. ರೋಗಿಯು ಹಂಚಿಕೊಂಡಿರುವ ಲೊಕೇಶನ್‌ಗೆ 4ಜಿ ತಂತ್ರಜ್ಞಾನವನ್ನು ಬಳಸಿಕೊಂಡು ಡ್ರೋನ್‌ ತಲುಪಲಿದೆ. ಬೇರೆ ಬೇರೆ ಕಡೆ ಔಷಧ ನೀಡುವುದಿದ್ದರೂ ಡ್ರೋನ್‌ ಅದನ್ನು ನಿರ್ವಹಿಸಲಿದೆ.

ಡ್ರೋನ್‌ ಹಾರುವಾಗ ಮರ, ಕಟ್ಟಡ ಅಡ್ಡ ಬಂದರೆ ಅದು ಒಮ್ಮೆ ಇಡೀ ಜಾಗವನ್ನು ಪರಿಶೀಲಿಸಿ ತಾನೇ ದಾರಿ ಹುಡುಕಿಕೊಂಡು ಮುಂದುವರಿಯಲಿದೆ. ಧೂಳು, ಸಣ್ಣ ಮಳೆ, ಇರುಳು ಅದರ ಕಾರ್ಯನಿರ್ವಹಣೆಗೆ ಅಡ್ಡಿಯಾಗದು. ಔಷಧ ನೀಡುವ ಸಂದರ್ಭದಲ್ಲಿ ನೆಲಕ್ಕಿಳಿದು ಔಷಧ ನೀಡುವ ಮತ್ತು ನೆಲ ಮಟ್ಟದಿಂದ 5 ಮೀಟರ್‌ ಮೇಲೆ ಇದ್ದು ಹಗ್ಗದ ಮೂಲಕ ಔಷಧ ಇಳಿಸುವ ಎರಡೂ ಪ್ರಯೋಗವನ್ನು ನಡೆಸಲಿದ್ದೇವೆ ಎಂದು ಟಿಎಎಸ್‌ನ ಪ್ರಾಡಕ್ಟ್ ಟೆಕ್ನಿಕಲ್‌ ಎಂಜಿನಿಯರ್‌ ರಿಷಬ್‌ ಮಾಹಿತಿ ನೀಡುತ್ತಾರೆ.

ಯಾವ ಡ್ರೋನ್‌ ಬಳಕೆ?:

ಟಿಎಎಸ್‌ ಈ ಪ್ರಯೋಗದಲ್ಲಿ ತನ್ನ ಎರಡು ವಿಧದ ಡ್ರೋನ್‌ಗಳನ್ನು ಬಳಸಲಿದೆ. ಮೆಡ್‌ಕಾಪ್ಟರ್‌ ಎಂಬ ಸಣ್ಣ ಡ್ರೋನ್‌ 1 ಕೆಜಿಯಷ್ಟುಭಾರವನ್ನು 15 ಕಿ.ಮೀ. ತನಕ ಕೊಂಡೊಯ್ಯಬಲ್ಲದು. ಪ್ಲಸ್‌ಕಾಪ್ಟರ್‌ ಎಂಬ ಇನ್ನೊಂದು ಡ್ರೋನ್‌ 2 ಕೆಜಿಯಷ್ಟುಭಾರವನ್ನು 12 ಕಿ.ಮೀ. ತನಕ ಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ.

ಸರ್ಕಾರದಿಂದ ಅಗತ್ಯವಾದ ಎಲ್ಲ ಅನುಮತಿಗಳು ನಮಗೆ ಸಿಕ್ಕಿದೆ. ಕೇಂದ್ರ ಸರ್ಕಾರದ ಪ್ರಯೋಗ ಮೇಲ್ವಿಚಾರಣಾ ಸಮಿತಿ ನಮ್ಮ ಪ್ರಯೋಗದ ಮೇಲೆ ನಿಗಾ ವಹಿಸಲಿದೆ. 100 ಗಂಟೆಗಳ ಕಾಲ ಯಾವುದೇ ಅಪಘಾತ ನಡೆಯದೆ ಡ್ರೋನ್‌ ಹಾರಾಟ ನಡೆಸಬೇಕು. ನಾವು ಪ್ರತಿದಿನ 7 ರಿಂದ 8 ಗಂಟೆಗಳ ಕಾಲ ಡ್ರೋನ್‌ ಹಾರಿಸುವ ಯೋಜನೆ ಹೊಂದಿದ್ದೇವೆ ಎಂದು ರಿಷಬ್‌ ಹೇಳುತ್ತಾರೆ.

ಡ್ರೋನ್‌ನ ಸಂಚಾರ ವ್ಯವಸ್ಥೆಯನ್ನು ನಿರ್ವಹಿಸುವ ಇನ್ವೊಲಿ-ಸ್ವಿಸ್‌ ಸಂಸ್ಥೆಯು ಪ್ರಯೋಗಕ್ಕೆ ತಾಂತ್ರಿಕ ನೆರವು ನೀಡಲಿದೆ. ಹನಿವೆಲ್‌ ಕಂಪನಿಯು ಏರೋಸ್ಪೇಸ್‌ ಸುರಕ್ಷತೆಗೆ ಸಂಬಂಧಿಸಿ ಸಹಾಯ ಮಾಡಲಿದೆ. ರಾಂಡಿಂಟ್‌ ಎಂಬ ಸಾಫ್ಟ್‌ವೇರ್‌ ಅನ್ನು ಔಷಧ ರವಾನೆಗೆ ಬಳಸಲಾಗುತ್ತದೆ. ಗಂಟೆಗೆ ಗರಿಷ್ಠ 40 ಕಿ.ಮೀ. ವೇಗದಲ್ಲಿ ಡ್ರೋನ್‌ ಹಾರಾಟ ನಡೆಸಲಿದೆ. ಡ್ರೋನ್‌ ಮೂಲಕ ವಿವಿಧ ಉತ್ಪನ್ನಗಳನ್ನು ಸಾಗಿಸುವ ಬಗ್ಗೆ ದೇಶದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಪ್ರಯತ್ನ ನಡೆಯುತ್ತಿದೆ. ಆದರೆ ವೈದ್ಯಕೀಯ ಕ್ಷೇತ್ರದಲ್ಲಿ ನಾವೇ ಮೊದಲು ಇಂತಹ ಪ್ರಯೋಗಕ್ಕೆ ಇಳಿದಿದ್ದೇವೆ ಎಂದು ರಿಷಬ್‌ ತಿಳಿಸುತ್ತಾರೆ.

ಈ ಪ್ರಯೋಗ ಯಶಸ್ವಿಯಾದರೆ ಇನ್ನೆರಡು ವರ್ಷದಲ್ಲಿ ಡ್ರೋನ್‌ ಮೂಲಕ ಔಷಧ ಸಾಗಿಸುವ ವ್ಯವಸ್ಥೆ ಭಾರತಕ್ಕೂ ಬರಬಹುದು. ಆದರೆ ಇಲ್ಲಿನ ಕಟ್ಟಡ ರಚನೆ, ಬೇಕಾಬಿಟ್ಟಿಎಳೆದಿರುವ ವಿದ್ಯುತ್‌ ಲೈನ್‌ಗಳು ನಮಗೆ ಸವಾಲೊಡ್ಡಲಿದೆ. ಆದರೆ ಡ್ರೋನ್‌ ಕೇಂದ್ರಗಳು ಸ್ಥಾಪನೆಯಾದರೆ ಔಷಧ ಸಾಗಿಸುವ ಯೋಜನೆ ಆದಷ್ಟುಬೇಗವೇ ಜಾರಿಗೆ ಬರಬಹುದು ಎಂದು ರಿಷಬ್‌ ಹೇಳುತ್ತಾರೆ.

ಏನಿದು ಪ್ರಯೋಗ?

- ಅಮೆರಿಕ, ಚೀನಾದಲ್ಲಿ ಡ್ರೋನ್‌ ಮೂಲಕ ಔಷಧ ಸಾಗಣೆ

- ಇಂಥದ್ದೇ ಪ್ರಯತ್ನ ಭಾರತದಲ್ಲೂ ಆರಂಭ. ಇದಕ್ಕಾಗಿ ಪ್ರಯೋಗ

- ಜೂ.18ರಿಂದ ಪೂರ್ವಭಾವಿ, ಜೂ.21ರಿಂದ 45 ದಿನ ಅಧಿಕೃತ ಟೆಸ್ಟ್‌

- ಡಾ| ದೇವಿಶೆಟ್ಟಿಅವರ ಆಸ್ಪತ್ರೆಗಾಗಿ ಔಷಧ ಸಾಗಿಸುವ ಯೋಜನೆ

- ಔಷಧ ಅಗತ್ಯ ಇರುವ ರೋಗಿ ಸಾಫ್ಟ್‌ವೇರಲ್ಲಿ ಕೋರಿಕೆ ಇಡಬೇಕು

- ಅದನ್ನು ಆಧರಿಸಿ ಡ್ರೋನ್‌ಗೆ ಔಷಧ ತುಂಬಿ ಸಾಗಿಸುವ ಸಿಬ್ಬಂದಿ

- 4ಜಿ ತಂತ್ರಜ್ಞಾನ, ಲೊಕೇಶನ್‌ ಬಳಸಿ ಹಾರುವ ಡ್ರೋನ್‌

- ಮರ, ಕಟ್ಟಡ ಅಡ್ಡಬಂದರೂ ಯಾವುದೇ ತೊಂದರೆ ಇಲ್ಲ

Follow Us:
Download App:
  • android
  • ios