ಬೆಂಗಳೂರು :  ಯುವಜನರು, ಪ್ರೇಮಿಗಳು ಕಾತರದಿಂದ ಕಾಯುವ ಪ್ರೇಮಿಗಳ ದಿನಕ್ಕೆ ಮಾರುಕಟ್ಟೆಗಳಲ್ಲಿ ಹೂವುಗಳ ರಾಣಿ ಗುಲಾಬಿಗೆ ಭಾರೀ ಬೇಡಿಕೆ ಕುದುರಿದೆ. ಪ್ರೇಮಿಗಳ ಸುಪ್ತ ಭಾವನೆಗಳಿಗೆ ಪ್ರೀತಿಯ ಕೊಂಡಿಯಾಗಿರುವ ಕೆಂಪು ಗುಲಾಬಿ ಬೆಲೆ 20 ರಿಂದ 40 ವರೆಗೆ ಏರಿಕೆಯಾಗಿದೆ. ಫೆ.14 ಪ್ರೇಮಿಗಳ ದಿನ. ಹೀಗಾಗಿ ಮಾರುಕಟ್ಟೆಗಳಲ್ಲಿ ತರಹೇವಾರಿ ಹೂವುಗಳು ಲಭ್ಯವಿದ್ದರೂ ‘ರೆಡ್ ರೋಸ್’ ಎಲ್ಲರ ಕೇಂದ್ರಬಿಂದು. 

ಎಷ್ಟೇ ದುಬಾರಿ ಗಿಫ್ಟ್ ನೀಡಿದರೂ ಗುಲಾಬಿ ಹೂ ಕೊಟ್ಟು ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳುವ ಪ್ರೇಮಿಗಳೇ ಹೆಚ್ಚು. ಮಾರುಕಟ್ಟೆಯಲ್ಲಿ ಗುಲಾಬಿ ಬೆಲೆ ಜಾಸ್ತಿಯಾದರೂ ವ್ಯಾಪಾರಕ್ಕೆ ಯಾವುದೇ ಪೆಟ್ಟು ಬಿದ್ದಿಲ್ಲ. ಪ್ರೇಮಿಗಳು ಅಧಿಕ ಹಣ ತೆತ್ತು ಗುಲಾಬಿ ಖರೀದಿಸಿ ತಮ್ಮ ಪ್ರೇಮ ನಿವೇದನೆಗೆ ಸಜ್ಜಾಗಿದ್ದಾರೆ. ಸಾಮಾನ್ಯ ದಿನಗಳಲ್ಲಿ 50 ರಿಂದ 250 ಇದ್ದ ಕೆಂಪು ಗುಲಾಬಿ ಬೊಕ್ಕೆ ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ಸ್ವಲ್ಪಮಟ್ಟಿಗೆ ದುಬಾರಿಯಾಗಿದೆ. ಫೆ.೧14ಕ್ಕೆ 300 ರಿಂದ 500 ವರೆಗೆ ತಲುಪಿದೆ. 

ವರ್ಷಪೂರ್ತಿ 7, 8, 10 - 15 ರು.ಗೆ ದೊರೆಯುತ್ತಿದ್ದ ಒಂದು ಗುಲಾಬಿ ಬೆಲೆ ಮಾರುಕಟ್ಟೆಯಲ್ಲಿ 20 ರಿಂದ 40 ರು.ಗೆ ಏರಿಕೆಯಾಗಿದೆ. ಕೆ.ಆರ್.ಮಾರುಕಟ್ಟೆಯಲ್ಲಿ ಸಗಟು ದರವೂ ಹೆಚ್ಚಳವಾಗಿದೆ. ಒಂದು ವಾರದ ಹಿಂದೆ ಗುಲಾಬಿ ಬಾಕ್ಸ್ 100 ರಿಂದ 120 ಒಳಗೆ ಸಿಗುತ್ತಿತ್ತು. ಆದರೆ, ಪ್ರೇಮಿಗಳ ದಿನದ ಪ್ರಯುಕ್ತ 20 ಪೀಸ್ ರೋಸ್‌ವುಳ್ಳ ಬಾಕ್ಸ್‌ಗೆ 250 -300 ರವರೆಗೆ ಹೆಚ್ಚಳಗೊಂಡಿದೆ. 

ವ್ಯಾಪಾರಿಗಳು ಕೂಲಿ, ಸಾಗಾಣೆ ಸೇರಿದಂತೆ ತಮ್ಮ ಖರ್ಚು ವೆಚ್ಚ ಸೇರಿಸಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಒಂದು ರೋಸ್ 10 - 15ಕ್ಕೆ ಖರೀದಿಯಾಗುತ್ತಿತ್ತು. ಈಗ 20 ರಿಂದ 30 ಮಾರಾಟವಾಗುತ್ತಿದೆ ಎನ್ನುತ್ತಾರೆ ಶಿವಾನಂದ ವೃತ್ತದಲ್ಲಿರುವ ಹೂವಿನ ವ್ಯಾಪಾರಿ ರವಿ.

ಕೆಂಪು ಗುಲಾಬಿಗೆ ಬೇಡಿಕೆ ಹೆಚ್ಚು: ಹೆಬ್ಬಾಳದ ಅಂತಾರಾಷ್ಟ್ರೀಯ ಪುಷ್ಪ ಹರಾಜು ಕೇಂದ್ರದ ಮಿಥುನ್ ಈ ಬಗ್ಗೆ ಪ್ರತಿಕ್ರಿಯಿಸಿ, ಬೇಬಿ ಪಿಂಕ್ ರೋಸ್ ಇಳುವರಿ ಕಡಿಮೆ ಇದ್ದು, ಬೇಡಿಕೆ ಹೆಚ್ಚಿದೆ. ಹಾಗಾಗಿ ಪ್ರೇಮಿಗಳ ದಿನಕ್ಕೆ ಬೇಬಿ ಪಿಂಕ್ ಗುಲಾಬಿ ದರ 24 , ಕೆಂಪು ಗುಲಾಬಿ 20 ನಿಗದಿಯಾಗಿದೆ. ಸಾಮಾನ್ಯ ದಿನಗಳಲ್ಲಿ ಕೆಂಪು ಗುಲಾಬಿ (ಡಚ್ ರೋಸ್) ಬೆಲೆ 7ರಿಂದ 8 ರು. ಇರುತ್ತದೆ. 

ಪ್ರೇಮಿಗಳ ದಿನದಂದು ದರ ಹೆಚ್ಚಾಗುತ್ತದೆ. ಅದರಲ್ಲೂ ಈ ವರ್ಷ ಇನ್ನಷ್ಟು ದುಬಾರಿಯಾಗಿದೆ. ಪ್ರತಿ ವರ್ಷ ೪೫ ಲಕ್ಷ ಗುಲಾಬಿ ರಫ್ತಾಗುತ್ತದೆ. ವಿದೇಶಗಳಲ್ಲಿ ನಮ್ಮ ದೇಶದ ಗುಲಾಬಿಗೆ ಬೇಡಿಕೆ ಹೆಚ್ಚಾಗಿದ್ದು, ಸಿಂಗಾಪುರ, ಮಲೇಶಿಯಾ, ಜಪಾನ್ ಹಾಗೂ ಅರಬ್ ದೇಶ ಸೇರಿದಂತೆ ವಿವಿಧ ದೇಶಗಳಿಗೆ ರಫ್ತು ಮಾಡಲಾಗಿದೆ. ಈ ಬಾರಿ ಶೇ.40ರಷ್ಟು ಉತ್ಪಾದನೆ ಕಡಿಮೆ ಇದ್ದಾಗ್ಯೂ50 ಲಕ್ಷ ಗುಲಾಬಿ ರಫ್ತು ಮಾಡಲಾಗಿದೆ. ಬೆಂಗಳೂರಿನ ಮಾರುಕಟ್ಟೆಗೆ 5 ಲಕ್ಷ ಗುಲಾಬಿ ಸರಬರಾಜಾಗುತ್ತದೆ. ವಾರ್ಷಿಕ 8 ರಿಂದ 10 ಕೋಟಿ ಗುಲಾಬಿ ಬೆಳೆಯಲಾಗುತ್ತದೆ. ಫೆಬ್ರವರಿ, ಮಾರ್ಚ್ ತಿಂಗಳಿನಲ್ಲೇ 50  ಲಕ್ಷ ಹೂವುಗಳನ್ನು ಬೆಳೆಯಲಾಗುತ್ತದೆ ಎಂದು ತಿಳಿಸಿದರು.