ಬಾಮೈದನ ಮನೆಯಲ್ಲಿ 42 ಕೋಟಿ ಬಚ್ಚಿಟ್ಟಿದ್ದ ಗುತ್ತಿಗೆದಾರ ಅಂಬಿಕಾಪತಿ, ತೆಲಂಗಾಣಕ್ಕೆ ಹಣ ಸಾಗಿಸಲು ಮಹಾಪ್ಲಾನ್!
ಕಾಂಗ್ರೆಸ್ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಇದನ್ನು ತೆಲಂಗಾಣಕ್ಕೆ ಸಾಗಿಸಲು ಪ್ಲಾನ್ ನಡೆದಿತ್ತು.
ಬೆಂಗಳೂರು (ಅ.13): ಕಾಂಗ್ರೆಸ್ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಮತ್ತು ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ನಡೆದು ಬರೋಬ್ಬರಿ 42 ಕೋಟಿ ಹಣ ಪತ್ತೆಯಾಗಿದೆ. ಫ್ಲಾಟ್ನಲ್ಲಿ ಬರೊಬ್ಬರಿ 23 ಬಾಕ್ಸ್ಗಳಲ್ಲಿ 500 ಮುಖಬೆಲೆಯ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ. ಇದೀಗ ಈ ದಾಳಿ ಬಗ್ಗೆ ಒಂದೊಂದೇ ಮಾಹಿತಿ ಹೊರಬೀಳುತ್ತಿದೆ.
ಐಟಿ ದಾಳಿ ಒಂದು ಕ್ಷಣ ಲೇಟ್ ಆಗಿದ್ದರೂ ಈ ಹಣ ಸಿಗುತ್ತಿರಲಿಲ್ಲ. ಈ ಬೃಹತ್ ಮೊತ್ತದ ಹಣವನ್ನು ತೆಲಂಗಾಣಕ್ಕೆ ಸಾಗಿಸಲು ಸಿದ್ಧತೆ ನಡೆದಿತ್ತು ಎಂದು ತಿಳಿದುಬಂದಿದೆ. ಒಂದು ಗಂಟೆ ಕಳೆದಿದ್ರೆ ಹಣದ ಸಮೇತ ಎಸ್ಕೇಪ್ ಆಗುತ್ತಿದ್ದರು. ಅದಕ್ಕೂ ಮುನ್ನವೇ ಐಟಿ ಶಾಕ್ ನೀಡಿತ್ತು.
ಗುತ್ತಿಗೆದಾರ ಅಂಬಿಕಾಪತಿ ಅವರ ಪತ್ನಿಯಾಗಿರುವ ಮಾಜಿ ಕಾರ್ಪರೇಟರ್ ಅಶ್ವಥಮ್ಮ ಅವರು ಮಾಜಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ಎನ್ನಲಾಗುತ್ತಿದೆ. ಅಶ್ವತಮ್ಮ 2001ರ ಕಾವಲ್ ಬೈರಸಂದ್ರ ವಾರ್ಡ್ ನ ಕಾರ್ಪೊರೇಟರ್ ಆಗಿದ್ದರು. Ward no95ರಲ್ಲಿ ಅಶ್ವಥಮ್ಮ ಅವರಿಗೆ ಸೇರಿದ ಫ್ಲಾಟ್ ಇದ್ದು, ಅಲ್ಲೂ ಕೂಡ ದಾಳಿ ನಡೆದಿದೆ.
ಇನ್ನು ಸುಲ್ತಾನ್ ಪಾಳ್ಯದಲ್ಲಿ ಎರಡು ಕಡೆ ದಾಳಿ ನಡೆದಿದೆ. ಅಂಬಿಕಾಪತಿ ಮನೆ ಹಾಗೂ ಅಂಬಿಕಾಪತಿ ತಮ್ಮ ಪ್ರದೀಪ್ ವಾಸವಿರುವ ಮನೆ ಮೇಲೆ ದಾಳಿ ನಡೆದಿದೆ. ಅಂಬಿಕಾಪತಿ ಪತ್ನಿ ಆಶ್ವಥಮ್ಮ ಹೆಸರಲ್ಲಿರುವ ಆತ್ಮಾನಂದ ಕಾಲೋನಿಯಲ್ಲಿರುವ ಫ್ಲಾಟ್ ಮೇಲೆ ದಾಳಿ ನಡೆದಿದ್ದು, ಈ ಫ್ಲಾಟ್ ನಲ್ಲಿ ಅಂಬಿಕಾಪತಿ ಪತ್ನಿಯ ಸಹೋದರ ಪ್ರದೀಪ್ ವಾಸ ಮಾಡುತ್ತಿದ್ದಾರೆ. ಈ ಮನೆಯಲ್ಲೇ 42 ಕೋಟಿ ಹಣ ಪತ್ತೆಯಾಗಿದ್ದು, ತೆಲಂಗಾಣಕ್ಕೆ 42 ಕೋಟಿ ಹಣ ವರ್ಗಾವಣೆಯಾಗಬೇಕಿತ್ತು. ಮಂಚದ ಅಡಿಯಲ್ಲಿ ಕೋಟಿ ಕೋಟಿ ಹಣ ಸಂಗ್ರಹ ಮಾಡಿಟ್ಟಿದ್ದ ಪ್ರದೀಪ್ ಆ ರೂಂ ಅನ್ನು ಬಳಕೆ ಮಾಡುತ್ತಿರಲಿಲ್ಲ
ಬಾಮೈದ ಪ್ರದೀಪ್ ಗೆ ಮನೆ ಕೊಡಿಸಿದ್ದೆ ಅಂಬಿಕಾಪತಿ ಹಾಗೂ ಅಕ್ಕ ಅಶ್ವತ್ಥಮ್ಮ. ಅಂಬಿಕಾಪತಿ ಈ ಮನೆಯಲ್ಲಿ ಅಕ್ರಮ ಹಣ ಸಂಗ್ರಹಿಸಿಟ್ಟಿದ್ದರು. ಹಣ ಸಂಗ್ರಹಣೆಯ ಮಾಹಿತಿ ಪಡೆದು ದಾಳಿ ಮಾಡಿದ ಐಟಿ ಇಡೀ ಕುಟುಂಬಕ್ಕೆ ಶಾಕ್ ನೀಡಿದೆ.
42 ಕೋಟಿ ಹಣ ಸೀಜ್ ಮಾಡಿದ ಐಟಿ ಅಧಿಕಾರಿಗಳು. ಹಣದ ದೃಶ್ಯಾವಳಿಗಳನ್ನು ಚಿತ್ರೀಕರಣ ಮಾಡಿಸಿದ್ದಾರೆ. ಇಡಿ ಅಧಿಕಾರಿಗಳಿಗೆ ಐಟಿ ಮಾಹಿತಿ ನೀಡಲಿದ್ದು, PMLA ಅಡಿಯಲ್ಲಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಹವಾಲ ಆಗಿರುವ ಬಗ್ಗೆಯೂ ಇ.ಡಿ ತನಿಖೆ ನಡೆಸಲಿದೆ. ಇ.ಡಿ ಪ್ರವೇಶವಾದರೆ ಸಂಬಂಧಪಟ್ಟ ವ್ಯಕ್ತಿಗಳ ಬಂಧನ ಸಾಧ್ಯತೆ ಇದೆ. ಹಣದ ಮೂಲ ನೀಡುವಲ್ಲಿ ವಿಫಲವಾದ್ರೆ ಇ.ಡಿಯಿಂದ ಅಂಬಿಕಾಪತಿ ದಂಪತಿಗೆ ಸಂಕಷ್ಟ ಎದುರಾಗಲಿದೆ.
ಇನ್ನು ಕಾವಲ್ ಭೈರಸಂಧ್ರ ಗಣೇಷ ಬ್ಲಾಕ್ ನಲ್ಲಿರುವ ಅಂಬಿಕಾಪತಿ ಮನೆಯಲ್ಲಿ ಕೂಡ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ. ಈ ಮನೆಯಲ್ಲಿ ಸದ್ಯಕ್ಕೆ ಯಾರು ವಾಸವಿಲ್ಲ. ಜನವರಿಯಲ್ಲೇ ಮನೆ ಖಾಲಿ ಮಾಡಿರುವ ಅಂಬಿಕಾಪತಿ ಕುಟುಂಬ, ಕೆಳಗಿನ ಮನೆ ಬಾಡಿಗೆ ಕೊಟ್ಟಿದ್ದಾರೆ. ಮೊದಲ ಮಹಡಿಯನ್ನು ಅಂಬಿಕಾಪತಿ ಆಫೀಸ್ ರೀತಿಯಲ್ಲಿ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. 6 ಜನ ಐಟಿ ಅಧಿಕಾರಿಗಳು ಮನೆಯಲ್ಲಿ ಸಿಕ್ಕಿರುವ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಮೂವರು ಪೊಲೀಸರನ್ನ ಭದ್ರತೆಗೆ ನಿಯೋಜನೆ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.