ನವದೆಹಲಿ[ಜ.23]: ‘ಗ್ರೀನ್‌ಪೀಸ್‌ ಇಂಡಿಯಾ’ ಬಿಡುಗಡೆ ಮಾಡಿರುವ ಭಾರತದ ಅತ್ಯಂತ ಮಲಿನ ನಗರಗಳ ಪೈಕಿ ಕರ್ನಾಟಕದ 8 ನಗರಗಳು ಸ್ಥಾನ ಸೇರಿವೆ. ಬೆಂಗಳೂರು, ರಾಯಚೂರು, ಬೆಳಗಾವಿ, ತುಮಕೂರು, ಕೋಲಾರ, ವಿಜಯಪುರ, ಹುಬ್ಬಳ್ಳಿ-ಧಾರವಾಡ ಹಾಗೂ ಬಾಗಲಕೋಟೆ ನಗರಗಳು ಅತಿಯಾಗಿ ವಾಯುಮಾಲಿನ್ಯದಿಂದ ಬಳಲುತ್ತಿವೆ. ಈ ನಗರಗಳಲ್ಲಿ ರಾಷ್ಟ್ರೀಯ ವಾಯುಗುಣಮಟ್ಟ ಸುರಕ್ಷತಾ ಮಾನದಂಡಕ್ಕಿಂತ ವಾಯುಮಾಲಿನ್ಯ ಜಾಸ್ತಿ ಇದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ ಎಂದು ವರದಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ವಾಯುಗುಣಮಟ್ಟವನ್ನು ‘ಪರ್ಟಿಕ್ಯುಲೇಟ್‌ ಮ್ಯಾಟರ್‌-10’ (ಪಿಎಂ10) ಎಂಬ ಮಾನದಂಡದಲ್ಲಿ ಅಳೆಯಲಾಗುತ್ತಿದೆ. 60 ಮೈಕ್ರೋಗ್ರಾಂ ಪಿಎಂ10 ಇದ್ದರೆ ವಾಯುಮಾಲಿನ್ಯ ಸಾಮಾನ್ಯ ಮಟ್ಟದಲ್ಲಿದೆ ಎಂದರ್ಥ. ಆದರೆ ಈ ನಗರಗಳಲ್ಲಿ 60 ಮೈಕ್ರೋಗ್ರಾಂ ಅನ್ನು ಮಾಲಿನ್ಯ ಮೀರಿದೆ ಎಂದು ಗ್ರೀನ್‌ಪೀಸ್‌ ಹೇಳಿದೆ.

ಮನೆಗಳಿಗೆ ಕಲುಷಿತ ನೀರು ಬಿಟ್ಟ ಜಲಮಂಡಳಿಗೆ ದಂಡ!

‘ಈ 8 ನಗರಗಳ ಪೈಕಿ ಬೆಂಗಳೂರು ಹಾಗೂ ರಾಯಚೂರು ಅತಿಯಾದ ವಾಯುಮಾಲಿನ್ಯ ಹೊಂದಿವೆ. ಇಲ್ಲಿ ‘ಪಿಎಂ10’, ವಾರ್ಷಿಕ 90 ಮೈಕ್ರೋಗ್ರಾಂ ಇದೆ. ಕರ್ನಾಟಕದಲ್ಲಿ ಪ್ರತಿ ನಗರವೂ ಸುರಕ್ಷತಾ ಮಟ್ಟಮೀರಿ ಮಾಲಿನ್ಯ ಅನುಭವಿಸುತ್ತಿವೆ. ಆದರೂ ಕರ್ನಾಟಕದ ಈ 8 ನಗರಗಳನ್ನು ಮಾತ್ರ ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಗೆ ಸೇರಿಸಲಾಗಿದೆ’ ಎಂದು ಸಂಸ್ಥೆ ತಿಳಿಸಿದೆ.

ಜಾರ್ಖಂಡ್‌ನ ಝಾರಿಯಾ ಭಾರತದ ಅತ್ಯಂತ ಮಲಿನ ನಗರಿ

ನವದೆಹಲಿ: ಜಾರ್ಖಂಡ್‌ನ ಝಾರಿಯಾ ಹಾಗೂ ಧನಬಾದ್‌ ನಗರಗಳು ದೇಶದ ಅತ್ಯಂತ ಹೆಚ್ಚು ವಾಯುಮಾಲಿನ್ಯ ಪೀಡಿತ ನಗರಗಳು ಎಂಬ ಅಪಖ್ಯಾತಿಗೆ ಪಾತ್ರವಾಗಿವೆ. ‘ಗ್ರೀನ್‌ಪೀಸ್‌ ಇಂಡಿಯಾ’ ಭಾರತದ 287 ನಗರಗಳಲ್ಲಿ ವಾಯುಮಾಲಿನ್ಯ ಸಮೀಕ್ಷೆ ನಡೆಸಿದ್ದು, ಈ ಪೈಕಿ 286 ನಗರಗಳು ಸುರಕ್ಷತಾ ಮಾನದಂಡ ಮೀರಿವೆ.

ರಾಜ್ಯದ 15 ನದಿಗಳ ನೀರು ವಿಷಕಾರಿ

ಇದರಲ್ಲಿ ಝಾರಿಯಾ ನಗರದ ‘ಪಿಎಂ10’ ಗುಣಮಟ್ಟವು 322 ಮೈಕ್ರೋಗ್ರಾಂ ಹಾಗೂ ಧನಬಾದ್‌ನ ‘ಪಿಎಂ10’ ಗುಣಮಟ್ಟವು 264 ಮೈಕ್ರೋಗ್ರಾಂ ಎಂದು ದಾಖಲಾಗಿದೆ. ಇನ್ನು ರಾಜ್ಯಗಳಿಗೆ ಹೋಲಿಸಿದರೆ ಉತ್ತರಪ್ರರದೇಶ ಅತಿ ಮಲಿನ ರಾಜ್ಯ. ಅತಿ ಮಲಿನ 50 ಸ್ಥಳಗಳಲ್ಲಿ 17 ಸ್ಥಳಗಳು ಉತ್ತರಪ್ರದೇಶದಲ್ಲಿವೆ. ಇನ್ನು ತಮಿಳುನಾಡಿನ ತಿರುಚ್ಚಿ ಮಾತ್ರ ಟಾಪ್‌ 100ರಲ್ಲಿ ಸ್ಥಾನ ಪಡೆದ ಏಕೈಕ ನಗರವಾಗಿದೆ.