ಬೆಂಗಳೂರು(ಮೇ.09): ರಾಜ್ಯದಲ್ಲಿ ಹನ್ನೊಂದು ಮಂದಿ ‘ಸೂಪರ್‌ ಸೆ್ೊ್ರಡರ್ಸ್‌’ನಿಂದ ಬರೋಬ್ಬರಿ 354 ಮಂದಿಗೆ ಸೋಂಕು ಹರಡಿದ್ದು, ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ಮಂದಿಗೆ ಸೋಂಕು ಹರಡುವ ಮೂಲಕ ಇವರು ಆತಂಕ ಸೃಷ್ಟಿಸಿದ್ದಾರೆ.

ದಾವಣಗೆರೆಯಲ್ಲಿ ಶುಕ್ರವಾರ 533ನೇ ಸೋಂಕಿತೆಯಾದ 35 ವರ್ಷದ ಶುಶ್ರೂಷಕಿಯಿಂದ ಶುಕ್ರವಾರ ಹತ್ತು ಮಂದಿಗೆ ನೇರವಾಗಿ ಸೋಂಕು ಹರಡಿದೆ. ಇದಕ್ಕೂ ಮೊದಲು 20 ಮಂದಿಗೆ ಈ ಮಹಿಳೆ ಸೋಂಕು ಹರಡಿದ್ದು, ಈ ಪೈಕಿ 19 ಪ್ರಕರಣಗಳು ಒಂದೇ ದಿನ ವರದಿಯಾಗಿ ಬೆಣ್ಣೆನಗರಿಯನ್ನು ತಲ್ಲಣಗೊಳಿಸಿದ್ದವು. ಬಾಗಲಕೋಟೆಯ ಮದುವೆಗೆ ಹೋಗಿದ್ದ ಶುಶ್ರೂಷಕಿಯಿಂದ 30 ಮಂದಿಗೆ ಸೋಂಕು ಅಂಟಿದ್ದು, ಬಹುತೇಕ ಅವರ ಸಂಬಂಧಿಗಳಿಗೇ ಸೋಂಕು ಹರಡಿದೆ.

ಉಳಿದಂತೆ, ನಂಜನಗೂಡು ಔಷಧ ಕಾರ್ಖಾನೆಯ ಮೊದಲ ಸೋಂಕಿತ (52ನೇ ಸೋಂಕಿತ) ಬರೋಬ್ಬರಿ 76 ಮಂದಿಗೆ ಸೋಂಕು ಅಂಟಿಸಿದ್ದರು. ಇದರಲ್ಲಿ 48 ಮಂದಿಗೆ ನೇರವಾಗಿ ಸೋಂಕು ಹತ್ತಿಸಿ ಪ್ರಾಥಮಿಕ ಹಂತದ ಸಂಪರ್ಕಿತರಲ್ಲಿ ಅತಿ ಹೆಚ್ಚು ಮಂದಿಗೆ ಸೋಂಕು ಅಂಟಿಸಿದವರಾಗಿ ಉಳಿದಿದ್ದಾರೆ.

ತಬ್ಲೀಘಿ ಜಮಾತ್‌ ಹಿನ್ನೆಲೆಯ 20 ವರ್ಷದ ಯುವಕನಿಂದ 37 ಮಂದಿಗೆ ಸೋಂಕು ಹರಡಿದ್ದು, ಪ್ರಾಥಮಿಕ ಹಂತದಲ್ಲಿ 16, ದ್ವಿತೀಯ ಹಂತದಲ್ಲಿ 21 ಮಂದಿಗೆ ಸೋಂಕು ಹರಡಿದೆ. 221ನೇ ಸೋಂಕಿತೆ 60 ವರ್ಷದ ವೃದ್ಧೆಯಿಂದ 37 ಮಂದಿಗೆ ಸೋಂಕು ಹರಡಿದ್ದು, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಹೊಂದಿರುವ ಇವರು 28 ಮಂದಿಗೆ ನೇರವಾಗಿ ಸೋಂಕು ಹಂಚಿದ್ದಾರೆ.

419ನೇ ಸೋಂಕಿತನಾದ ಬಿಹಾರ ಮೂಲದ ಬೆಂಗಳೂರಿನ ಹೊಂಗಸಂದ್ರ ನಿವಾಸಿ 29 ಮಂದಿಗೆ ನೇರವಾಗಿ ಸೋಂಕು ಅಂಟಿಸಿ ಇಡೀ ಹೊಂಗಸಂದ್ರ ಸೀಲ್‌ಡೌನ್‌ ಆಗಲು ಕಾರಣರಾಗಿದ್ದರು. ಕಲಬುರಗಿಯ 55 ವರ್ಷದ ವ್ಯಕ್ತಿ (205ನೇ ಸೋಂಕಿತ) 27 ಮಂದಿಗೆ ಸೋಂಕು ಅಂಟಿಸಿದ್ದರೆ 38 ವರ್ಷದ ದೆಹಲಿ ಪ್ರಯಾಣ ಹಿನ್ನೆಲೆಯ 134ನೇ ಸೋಂಕಿತ 19 ಮಂದಿಗೆ, 69 ವರ್ಷದ ಮೃತ ವೃದ್ಧನಿಂದ 19 ಮಂದಿಗೆ ಸೋಂಕು ತಗುಲಿದೆ.

ಉಳಿದಂತೆ 167ನೇ ಸೋಂಕಿತನಿಂದ (ತಬ್ಲೀಘಿ ಜಮಾತ್‌, ಬೆಂಗಳೂರು) 17 ಮಂದಿಗೆ, 607ನೇ ಸೋಂಕಿತಳಿಂದ (3 ವರ್ಷದ ಯುವತಿ, ಬಾಗಲಕೋಟೆ) 15 ಮಂದಿಗೆ, 125ನೇ ಸೋಂಕಿತನಿಂದ (75 ವರ್ಷದ ವೃದ್ಧ, ಬಾಗಲಕೋಟೆ) 14 ಮಂದಿಗೆ, 247ನೇ ಸೋಂಕಿತರಿಂದ (62 ವರ್ಷದ ವೃದ್ಧ, ಬೆಂಗಳೂರು) 11 ಮಂದಿಗೆ, 390ನೇ ಸೋಂಕಿತಳಿಂದ (50 ವರ್ಷದ ಮಹಿಳೆ, ದಕ್ಷಿಣ ಕನ್ನಡ) 11 ಮಂದಿಗೆ ಸೋಂಕು ಹರಡಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.