ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಏ.18): ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕೊರೋನಾ ಸೋಂಕಿತರು ಮತ್ತು ಸೋಂಕಿತರೊಂದಿಗೆ ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕಿತರು ಇರುವ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕೊರೋನಾ ಸೋಂಕು ಮೂರನೇ ಹಂತ ಸಮುದಾಯಕ್ಕೆ ಹರಡಿಲ್ಲ ಎಂಬುದನ್ನು ‘ಫೀವರ್‌ ಕ್ಲಿನಿಕ್‌’ನಲ್ಲಿ ತಪಾಸಣೆಗೊಂಡವರ ಅಂಕಿ ಅಂಶಗಳು ದೃಢಪಡಿಸಿವೆ.

ನಗರದಲ್ಲಿ 19 ದಿನಗಳಿಂದ 31 ಕೇಂದ್ರದಲ್ಲಿ ಕಾರ‍್ಯನಿರ್ವಹಿಸುತ್ತಿರುವ ಫೀವರ್‌ ಕ್ಲಿನಿಕ್‌ಗಳಲ್ಲಿ ತಪಾಸಣೆ ಮಾಡಿಕೊಂಡ ಸುಮಾರು 4 ಸಾವಿರ ಮಂದಿಯಲ್ಲಿ ಯಾರೊಬ್ಬರಲ್ಲಿಯೂ ಸೋಂಕು ಕಾಣಿಸಿಕೊಂಡಿಲ್ಲ.

ಸೋಂಕು ಮತ್ತೆಗಾಗಿ ಬಿಬಿಎಂಪಿ ನಗರದ 31 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾ.29ರಿಂದ ಏ.16ರವರೆಗೆ (19 ದಿನ) ಒಟ್ಟು 4,057 ಮಂದಿಯ ಆರೋಗ್ಯ ಪರೀಕ್ಷಿಸಲಾಗಿದೆ. ಅವರಲ್ಲಿ ಈವರೆಗೆ ಕರೋನಾ ಸೋಂಕಿನ ಲಕ್ಷಣಗಳಾದ ಶ್ವಾಸಕೋಶ, ಉಸಿರಾಟದ ಸಮಸ್ಯೆ, ವಿಪರೀತ ಜ್ವರ, ಒಣ ಕೆಮ್ಮು, ಶೀತ ಸೇರಿದಂತೆ ಇನ್ನಿತರ ಸಮಸ್ಯೆ ಕಾಣಿಸಿಕೊಂಡ 56 ಮಂದಿಯನ್ನು ವೈದ್ಯರು ರಾಜೀವ್‌ಗಾಂಧಿ, ವಿಕ್ಟೋರಿಯಾ ಆಸ್ಪತ್ರೆ, ಬೌರಿಂಗ್‌ ಆಸ್ಪತ್ರೆ ಸೇರಿದಂತೆ ಐಸೋಲೆಶನ್‌ ಆಸ್ಪತ್ರೆಗೆ ಶಿಫಾರಸು ಮಾಡಿದ್ದಾರೆ.

ರೋಹಿಂಗ್ಯಾಗಳಿಗೂ ಸೋಂಕು?: ತಪಾಸಣೆಗೆ ಕೇಂದ್ರ ಸಜ್ಜು

56 ಮಂದಿಯಲ್ಲಿ 15 ಮಂದಿಯ ರಕ್ತ ಹಾಗೂ ಗಂಟಲ ದ್ರವದ ಮಾದರಿಯನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆದರೆ, ಈವರೆಗೂ ಯಾರೊಬ್ಬರಿಗೂ ಕೊರೋನಾ ಸೋಂಕು ಧೃಢಪಟ್ಟಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫೀವರ್‌ ಕ್ಲಿನಿಕ್‌ ಮಾರ್ಗ ಬದಲಾವಣೆ

ಫೀವರ್‌ ಕ್ಲಿನಿಕ್‌ ಆರಂಭದಲ್ಲಿ ತಪಾಸಣೆಗೆ ಬರುವವರಲ್ಲಿ ಪ್ರಯಾಣದ ಇತಿಹಾಸ ಹೊಂದಿರುವವರು ಮತ್ತು ಅವರೊಂದಿಗೆ ಸಂಪರ್ಕ ಹೊಂದಿದವರು. ಜ್ವರ, ಕೆಮ್ಮು, ಶೀತ, ಉಸಿರಾಟದ ಸಮಸ್ಯೆ ಉಂಟಾದವರನ್ನು ಹೆಚ್ಚಿನ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿತ್ತು. ತದನಂತರ ಮಾರ್ಗಸೂಚಿ ಬದಲಾಗಿದ್ದು, ಸಕ್ಕರೆ ಕಾಯಿಲೆ, ರಕ್ತದೊತ್ತಡ, ಉಸಿರಾಟದ ಸಮಸ್ಯೆ, ಹಿರಿಯ ನಾಗರಿಕರಾಗಿದ್ದರೆ ಅವರನ್ನು ಹೆಚ್ಚಿನ ಪರೀಕ್ಷೆಗೆ ಶಿಫಾರಸು ಮಾಡಲಾಗುತ್ತಿದೆ. ಇದೀಗ ಆರೋಗ್ಯ ಕಾರ್ಯಕರ್ತರಾಗಿ ಕಾರ‍್ಯನಿರ್ವಹಿಸುವವರಾಗಿದ್ದರೂ ಹೆಚ್ಚಿನ ಪರೀಕ್ಷೆಗೆ ಕಳುಹಿಸುವಂತೆ ಸೂಚಿಲಾಗಿದೆ.

ಈ ಕುರಿತು ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಬಿಎಂಪಿಯ ಮುಖ್ಯ ಆರೋಗ್ಯಾಧಿಕಾರಿ (ಕ್ಲಿನಿಕ್‌) ಡಾ| ನಿರ್ಮಲಾ ಬುಗ್ಗಿ, ಶೀಘ್ರ ಫೀವರ್‌ ಕ್ಲಿನಿಕ್‌ ಅಂಕಿ ಅಂಶಗಳನ್ನು ಪ್ರತಿದಿನ ಅವಲೋಕನ ಮಾಡುತ್ತಿದ್ದೇವೆ, ಸೋಂಕು ಸಮುದಾಯಕ್ಕೆ ಹರಡಿಲ್ಲ. ಹಾಗಾಗಿ, ಫೀವರ್‌ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಕೊಂಡವರಲ್ಲಿ ಸೋಂಕು ಕಾಣಿಸಿಕೊಂಡಿಲ್ಲ ಎಂಬುದು ಆಶಾದಾಯಕ ಎಂದು ಹೇಳಿದರು.

ಕೊರೋನಾಗೆ ಚೀನಾದಲ್ಲಿ 2 ಕೋಟಿ ಜನ ಸಾವು?: ಸುಳಿವು ಕೊಟ್ಟ ಸಿಮ್!

ನಿಗಾ ವಹಿಸುವಲ್ಲಿ ವಿಫಲ?

ಫೀವರ್‌ ಕ್ಲಿನಿಕ್‌ನಲ್ಲಿ ತಪಾಸಣೆ ಮಾಡಿಸಿಕೊಂಡು ಮನೆಗೆ ಹೋದವರ ಬಗ್ಗೆ ಮತ್ತೆ ಆರೋಗ್ಯ ಸಿಬ್ಬಂದಿ ನಿಗಾ ವಹಿಸುತ್ತಿಲ್ಲ. ಇನ್ನು ಫೀವರ್‌ ಕ್ಲಿನಿಕ್‌ಗಳಿಗೆ ವಿದ್ಯಾವಂತರು ಮಾತ್ರ ಆಗಮಿಸಿ ಪರೀಕ್ಷೆ ಮಾಡಿಕೊಳ್ಳುತ್ತಿದ್ದಾರೆ. ಬಡವರು, ಕೂಲಿಕಾರ್ಮಿಕರು ಹಾಗೂ ನಿರ್ಗತಿಕರಿಗೆ ಈ ಬಗ್ಗೆ ಯಾವ ಅರಿವು ಇಲ್ಲ.