ಬೆಂಂಗಳೂರು(ಮಾ.22): ಎರಡು ವಾರಗಳ ಅವಧಿಯಲ್ಲಿ ರಾಜ್ಯಕ್ಕೆ ವಿದೇಶದಿಂದ ಸುಮಾರು 40 ರಿಂದ 50 ಸಾವಿರ ಜನರು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ತಿಳಿಸಿದರು.

ಈ ವಿದೇಶದಿಂದ ಮರಳಿದವರ ಪೈಕಿ ಬೆಂಗಳೂರಿಗೆ ಬಂದಿರುವವರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಆರೋಗ್ಯ ತಪಾಸಣೆಗೆ ಸರ್ಕಾರ ಕ್ರಮ ತೆಗೆದುಕೊಂಡಿದ್ದು, ಬಹುತೇಕರನ್ನು ಮನೆಯಲ್ಲೇ ಕ್ವಾರಂಟೈನ್‌ಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಬಿಬಿಎಂಪಿ, ಆರೋಗ್ಯ ಹಾಗೂ ಪೊಲೀಸ್‌ ಇಲಾಖೆಗಳನ್ನು ಸೇರಿಸಿ ತಂಡ ರಚಿಸಲಾಗಿದ್ದು, ಡಿಸಿಪಿ ಇಶಾ ಪಂತ್‌ ಅವರನ್ನು ನೋಡಲ್‌ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಕೊರೋನಾ ವೈರಸ್ ಸಂಬಂಧಿತ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪೊಲೀಸರಿಗೆ ಮಾಸ್ಕ್‌, ಸಾನಿಟೈಸರ್‌ ವಿತರಣೆ

ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಪ್ರತಿ ಠಾಣೆಗಳಲ್ಲಿ ಪೊಲೀಸರಿಗೆ ಮಾಸ್ಕ್‌ ಹಾಗೂ ಸ್ಯಾನಿಟೈಸರ್‌ ವಿತರಿಸುವಂತೆ ಡಿಸಿಪಿ ಹಾಗೂ ಎಸಿಪಿ ಅವರಿಗೆ ಸೂಚಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.

ಪ್ರತಿ ದಿನ ಸಿಬ್ಬಂದಿಗೆ ಮೂರು ಮಾಸ್ಕ್‌ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ವಿತರಿಸಲಾಗುತ್ತಿದೆ. ಸುರಕ್ಷತೆಗೆ ಪೊಲೀಸರು ಹೆಚ್ಚಿನ ಆದ್ಯತೆ ಕೊಡಬೇಕು. ಕರ್ತವ್ಯದ ವೇಳೆ ಜನರಿಂದ ಅಂತರ ಕಾಯ್ದುಕೊಳ್ಳಬೇಕು. ವಿದೇಶದಿಂದ ಮರಳಿದ ಜನರ ಮನೆಗೆ ಭೇಟಿಗೆ ತೆರಳುವ ಪೊಲೀಸರು ಕಡ್ಡಾಯವಾಗಿ ಕೈಗವಸು, ಮುಖಗವಸು, ಶೂ ಹಾಗೂ ಕನ್ನಡಕ ಧರಿಸುವಂತೆ ನಿರ್ದೇಶಲಾಗಿದೆ ಎಂದು ಭಾಸ್ಕರ್‌ ರಾವ್‌ ಹೇಳಿದರು.