ತುಮಕೂರು[ಜ.19]: ಕಳೆದ ಒಂದೂವರೆ ತಿಂಗಳಿನಿಂದ ಅನಾರೋಗ್ಯಕ್ಕೆ ಒಳಗಾಗಿರುವ ನಡೆದಾಡುವ ದೇವರು ಡಾ.ಶಿವಕುಮಾರ ಸ್ವಾಮೀಜಿ ಸಿದ್ಧಗಂಗೆಯಲ್ಲಿ ಪವಾಡ ಮಾಡುತ್ತಿದ್ದಾರಾ?

ಸ್ವತಃ ವೈದ್ಯರು, ಮುಖ್ಯಮಂತ್ರಿಗಳು, ಸಚಿವರು, ವಿವಿಧ ಮಠಾಧೀಶರು, ಭಕ್ತರ ಪ್ರಕಾರ ಹೌದು. ಕಳೆದ ಎರಡು ದಿವಸಗಳ ಹಿಂದಷ್ಟೇ ಶ್ರೀಗಳ ಆರೋಗ್ಯ ಗಂಭೀರವಾಗಿತ್ತು. ಸಂಪೂರ್ಣವಾಗಿ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಆದರೆ ಇದೀಗ ಎರಡೇ ದಿವಸದಲ್ಲಿ ಮತ್ತೆ ಸ್ವತಂತ್ರವಾಗಿ ಶ್ರೀಗಳು ಉಸಿರಾಡುತ್ತಿರುವುದು ವೈದ್ಯಲೋಕಕ್ಕೆ ಅಚ್ಚರಿ ಮೂಡಿಸಿದೆ.

ಶುಕ್ರವಾರ ಬೆಳಿಗ್ಗೆ ಶ್ರೀಗಳ ತಪಾಸಣೆ ನಡೆಸಿದ ಆಪ್ತ ವೈದ್ಯ ಡಾ.ಪರಮೇಶ್‌, ಶ್ರೀಗಳ ಆರೋಗ್ಯದಲ್ಲಿ ಪವಾಡದ ರೀತಿ ಚೇತರಿಕೆಯಾಗುತ್ತಿದೆ ಎಂದು ಸ್ಪಷ್ಟಪಡಿಸಿದರು. ಶ್ರೀಗಳು ಸ್ವತಂತ್ರವಾಗಿ ಉಸಿರಾಟ ನಡೆಸುತ್ತಿದ್ದು ಸೋಂಕಿನ ಅಂಶ ಕಡಿಮೆಯಾಗಿದೆ. ಕಣ್ಣು ಬಿಟ್ಟು ನೋಡುತ್ತಿದ್ದು, ಮಲಗಿಕೊಂಡೇ ಇಷ್ಟಲಿಂಗ ಪೂಜೆ ಮಾಡಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ಇದೇ ರೀತಿ ಚೇತರಿಕೆ ಕಂಡು ಬಂದರೆ ಎರಡು ದಿವಸದಲ್ಲಿ ಹುಷಾರಾಗಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುವುದು ಕಡಿಮೆಯಾಗಿದೆ. ಗಂಟೆಗಳ ಕಾಲ ಶ್ರೀಗಳೇ ಸ್ವಾಭಾವಿಕವಾಗಿ ಉಸಿರಾಡುತ್ತಿದ್ದು ವೆಂಟಿಲೇಟರ್‌ ಅನ್ನು ಸಂಪೂರ್ಣವಾಗಿ ತೆಗೆಯುವ ವಿಶ್ವಾಸ ಬಂದಿದೆ ಎಂದಿದ್ದಾರೆ.

ವರದಿಯಲ್ಲೂ ‘ಪವಾಡ’ ಉಲ್ಲೇಖ:

ತುಮಕೂರಿನ ಸಿದ್ಧಗಂಗಾ ಆಸ್ಪತ್ರೆ ಹಾಗೂ ಬಿಜಿಎಸ್‌ ಆಸ್ಪತ್ರೆ ವೈದ್ಯರ ತಂಡ ಶ್ರೀಗಳು ಪವಾಡ ರೀತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ. ಇಷ್ಟುವಯಸ್ಸಿನಲ್ಲೂ ಎಲ್ಲಾ ರೀತಿಯ ಚಿಕಿತ್ಸೆಗೆ ಸ್ಪಂದಿಸುತ್ತಿರುವುದಕ್ಕೆ ಖುದ್ದು ವೈದ್ಯರೇ ಚಕಿತಗೊಂಡಿದ್ದಾರೆ.

ಶ್ರೀಗಳ ವಿಲ್‌ ಪವರ್‌ ವಿಸ್ಮಯ:

ಇನ್ನು ಸಿದ್ಧಗಂಗಾ ಮಠದಲ್ಲಿ ಕಿರಿಯ ಶ್ರೀಗಳ ಪ್ರಕಾರ ಪೂಜ್ಯರ ವಿಲ್‌ ಪವರ್‌(ಇಚ್ಛಾಶಕ್ತಿ) ಅನ್ನು ವೈದ್ಯರೇ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದೊಂದು ವೈದ್ಯಕೀಯ ವಿಸ್ಮಯವಾಗಿ ಪರಿಣಮಿಸುತ್ತಿದೆ. ಚೆನ್ನೈನ ಡಾ.ರೆಲಾ, ಬಿಜಿಎಸ್‌ ಹಾಗೂ ನಮ್ಮ ವೈದ್ಯರಿಗೂ ವಿಸ್ಮಯ ಎನಿಸಿದೆ ಎಂದಿದ್ದಾರೆ. ಪೂಜ್ಯರು ಕಣ್ಣು ಇಟ್ಟು ನೋಡುತ್ತಿದ್ದಾರೆ. ಕೈ ಸನ್ನೆ ಕೂಡ ಮಾಡುತ್ತಿದ್ದಾರೆ. ನಿತ್ಯವೂ ಶ್ರೀಗಳ ಪಕ್ಕದಲ್ಲಿದ್ದು ಶಿವಪೂಜೆ ಮಾಡುತ್ತಿರುವುದಾಗಿ ತಿಳಿಸಿದರು.

ಸಿದ್ಧಗಂಗೆಗೆ ಗಣ್ಯರ ದಂಡು:

ಸಿದ್ಧಗಂಗಾಶ್ರೀಗಳ ಆರೋಗ್ಯ ವಿಚಾರಿಸುವ ಸಲುವಾಗಿ ಶುಕ್ರವಾರದಂದು ಸಹ ಮುಖ್ಯಮಂತ್ರಿಯಾಗಿ ಅನೇಕ ಗಣ್ಯರು ಶ್ರೀಮಠಕ್ಕೆ ಭೇಟಿ ನೀಡಿದರು. ಮಾಜಿ ಸಚಿವ ವಿ. ಸೋಮಣ್ಣ, ವಿ.ಪ. ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಸಚಿವ ಎನ್‌. ಮಹೇಶ್‌, ನಿಡುಮಾಮಿಡಿ ಶ್ರೀಗಳೂ ಭೇಟಿ ನೀಡಿದ್ದು ಎಲ್ಲರೂ ಇದೊಂದು ಪವಾಡ ಎಂದೇ ಬಣ್ಣಿಸಿದ್ದಾರೆ. ಈ ಮಧ್ಯೆ ಹಳೆಮಠದ ಹಿಂಬದಿಯ ಕಿಟಕಿಯಿಂದ ಭಕ್ತರಿಗೆ ಶ್ರೀಗಳ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇಂತಹ ಪವಾಡ ಇನ್ನೆಲ್ಲೂ ನೋಡಿಲ್ಲ: ಸಿಎಂ

ಸಿದ್ಧಗಂಗಾಶ್ರೀಗಳ ಆರೋಗ್ಯದಲ್ಲಿ ಕಾಣುತ್ತಿರುವ ಚೇತರಿಕೆ ನಿಜಕ್ಕೂ ಪವಾಡವೇ ಸರಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಅವರು ಶುಕ್ರವಾರ ತುಮಕೂರಿನ ಸಿದ್ಧಗಂಗೆಗೆ ಆಗಮಿಸಿ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಈ ರೀತಿಯ ಪವಾಡವನ್ನು ಎಲ್ಲೂ ನೋಡಿಲ್ಲ. ದೈವಿ ಶಕ್ತಿಯಿಂದ ದೈಹಿಕವಾಗಿ ಕ್ಷೀಣಿಸಿದರೂ ಆರೋಗ್ಯದಲ್ಲಿ ಪ್ರತಿ ಕ್ಷಣದಲ್ಲೂ ಚೇತರಿಕೆ ಕಾಣುತ್ತಿದೆ. ವೈದ್ಯರಿಗೂ ಅಚ್ಚರಿಯಾಗಿದೆ. ಶ್ರೀಗಳನ್ನು ಹೆಚ್ಚಿನ ಚಿಕಿತ್ಸೆಗೆ ಎಲ್ಲಿಗೂ ರವಾನೆ ಮಾಡುವುದಿಲ್ಲ ಎಂದು ತಿಳಿಸಿದರು.

ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ. ವೈದ್ಯರು ಅಂತಿಮ ತೀರ್ಮಾನ ತೆಗೆದುಕೊಂಡು ಶ್ರೀಗಳನ್ನು ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರಿಸಿದ ನಂತರ ಆರೋಗ್ಯದಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿರುವುದು ಸಮಾಧಾನ ತಂದಿದೆ ಎಂದರು. ತಜ್ಞ ವೈದ್ಯರ ನೇತೃತ್ವದಲ್ಲಿ ಡಾ. ಪರಮೇಶ ಅವರು ಶ್ರೀಗಳಿಗೆ ಮಠದಲ್ಲಿಯೇ ಚಿಕಿತ್ಸೆ ಮುಂದುವರೆಸಿದ್ದಾರೆ. ವಿದೇಶದಲ್ಲಿ ದೊರೆಯುವಂತಹ ಚಿಕಿತ್ಸಾ ವಿಧಾನವನ್ನು ಶ್ರೀಗಳಿಗೆ ನೀಡಲಾಗುತ್ತಿದ್ದು, ಭಕ್ತರು ಆತಂಕಪಡುವಂತಿಲ್ಲ ಎಂದರು.

ಶ್ರೀಗಳ ಉಸಿರಾಟಕ್ಕಾಗಿ ಕಳೆದ 12-13 ದಿನಗಳಿಂದ ವೆಂಟಿಲೇಟರ್‌ ಅಳವಡಿಸಲಾಗಿತ್ತು. ಅವರನ್ನು ಪುಣ್ಯಕ್ಷೇತ್ರವಾದ ಸಿದ್ದಗಂಗಾ ಮಠಕ್ಕೆ ಸ್ಥಳಾಂತರಿಸಿದ ನಂತರ ವೆಂಟಿಲೇಟರ್‌ ಸಹಾಯವಿಲ್ಲದೇ ವೈದ್ಯರಿಗೆ ಅಚ್ಚರಿಯಾಗುವ ರೀತಿಯಲ್ಲಿ ಸ್ವಾಭಾವಿಕವಾಗಿ ಉಸಿರಾಡುತ್ತಿರುವುದು ನಮಗೆಲ್ಲಾ ಸಂತಸ ತಂದಿದೆ.