ಬೆಂಗಳೂರು(ಜೂ.24): ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಲಂಚ ಸ್ವೀಕರಿಸಿದ ಆರೋಪಕ್ಕೆ ಗುರಿಯಾಗಿದ್ದ ಬೆಂಗಳೂರು ಮಾಜಿ ಜಿಲ್ಲಾಧಿಕಾರಿ ಹಿರಿಯ ಐಎಎಸ್‌ ಅಧಿಕಾರಿ ಬಿ.ಎಂ. ವಿಜಯಶಂಕರ್‌ (57) ತಮ್ಮ ನಿವಾಸದಲ್ಲೇ ಮಂಗಳವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜಯನಗರದ ‘ಟಿ’ ಬ್ಲಾಕ್‌ನಲ್ಲಿ ನೆಲೆಸಿದ್ದ ಅವರು, ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆಲ ಹೊತ್ತಿನ ಬಳಿಕ ಕೊಠಡಿಗೆ ಮೃತರ ಕುಟುಂಬದ ಸದಸ್ಯರು ತೆರಳಿದ್ದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಐ ಮಾನಿಟರಿ ಅಡ್ವೈಸರಿ (ಐಎಂಎ) ಮಾಲೀಕ ಮಹಮ್ಮದ್‌ ಮನ್ಸೂರ್‌ ಖಾನ್‌ ಪರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು .1.5 ಕೋಟಿ ಲಂಚ ಪಡೆದ ಆರೋಪಕ್ಕೆ ವಿಜಯಶಂಕರ್‌ ತುತ್ತಾಗಿದ್ದರು. ಇದೇ ಪ್ರಕರಣದಲ್ಲಿ ಅವರನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿತ್ತು. ಬಳಿಕ ಜಾಮೀನು ಪಡೆದ ಹೊರ ಬಂದ ವಿಜಯಶಂಕರ್‌, ತಮ್ಮ ಮೇಲಿನ ಆರೋಪದಿಂದ ತೀವ್ರ ನೊಂದಿದ್ದರು. ಈ ಖಿನ್ನತೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಐಎಂಎ ಪ್ರಕರಣದಲ್ಲಿ ಇಬ್ಬರು ಐಪಿಎಸ್ ಅಧಿಕಾರಿಗಳ ಹೆಸರು?

ಆರೋಪದಿಂದ ನೊಂದು ಆತ್ಮಹತ್ಯೆ:

1992ರ ಬ್ಯಾಚ್‌ ಕೆಎಎಸ್‌ ಅಧಿಕಾರಿಯಾಗಿ ಸರ್ಕಾರಿ ಸೇವೆ ಆರಂಭಿಸಿದ ವಿಜಯಶಂಕರ್‌ ಅವರು, ಸೇವಾ ಹಿರಿತನ ಆಧಾರದಡಿ ಐಎಎಸ್‌ ಹುದ್ದೆಗೆ ಮುಂಬಡ್ತಿ ಪಡೆದಿದ್ದರು. ತಮ್ಮ ಪತ್ನಿ ಮತ್ತು ಮಕ್ಕಳ ಜತೆ ಜಯನಗರದ ಟಿ ಬ್ಲಾಕ್‌ನಲ್ಲಿ ಅವರು ನೆಲೆಸಿದ್ದರು. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವಿಜಯಶಂಕರ್‌, ಐಎಂಎ ಬಹುಕೋಟಿ ವಂಚನೆ ಪ್ರಕರಣದ ಸುಳಿಗೆ ಸಿಲುಕಿ ಅಮಾನತುಗೊಂಡಿದ್ದರು. ಇದೇ ಪ್ರಕರಣದಲ್ಲಿ ಎಸ್‌ಐಟಿಯಿಂದ ಬಂಧಿತರಾಗಿ ಜೈಲು ಶಿಕ್ಷೆ ಅನುಭವಿಸಿದ್ದ ಅವರು, ಸಿಬಿಐ ತನಿಖೆಗೆ ತುತ್ತಾಗಿದ್ದರು.

ಐಎಂಎ ಕಂಪನಿ ಹಣಕಾಸು ಅವ್ಯವಹಾರದ ಬಗ್ಗೆ ಅನುಮಾನಿಸಿದ್ದ ಆರ್‌ಬಿಐ, 2018ರಲ್ಲಿ ರಾಜ್ಯ ಸರ್ಕಾರಕ್ಕೆ ಆ ಕಂಪನಿ ಕುರಿತು ವಿಚಾರಣೆ ನಡೆಸುವಂತೆ ಸೂಚಿಸಿತ್ತು. ಆಗ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದ ವಿಜಯಶಂಕರ್‌ ಅವರಿಗೆ ವಂಚನೆ ಪ್ರಕರಣದ ತನಿಖೆಗೆ ಸಕ್ಷಮ ಪ್ರಾಧಿಕಾರದ ಅಧಿಕಾರದ ಹೊಂದಿದ್ದರು. ಹೀಗಾಗಿ ಐಎಂಎ ಕಂಪನಿ ವಿರುದ್ಧ ಕೇಳಿ ಬಂದಿರುವ ವಿಚಾರಣೆ ನಡೆಸಿ ವರದಿ ನೀಡುವಂತೆ ಅವರಿಗೆ ಸರ್ಕಾರ ಸೂಚಿಸಿತ್ತು. ಆಗ ವಿಜಯಶಂಕರ್‌ ಅವರು, ಐಎಂಎ ಕಂಪನಿ ಮಾಲೀಕ ಮನ್ಸೂರ್‌ ಜತೆ ವ್ಯವಹಾರ ನಡೆಸಿದ್ದರು. ಖಾನ್‌ ಪರವಾಗಿ ವರದಿ ಸಲ್ಲಿಸಲು .5 ಕೋಟಿ ನೀಡುವಂತೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿತ್ತು. ಕೊನೆಗೆ .1.5 ಕೋಟಿ ಲಂಚ ಪಡೆದ ವಿಜಯಶಂಕರ್‌, ಐಎಂಎ ಕಂಪನಿಯ ಹಣಕಾಸು ವ್ಯವಹಾರದಲ್ಲಿ ಯಾವುದೇ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಕ್ಲಿನ್‌ಚಿಟ್‌ ನೀಡಿ ವರದಿ ಸಲ್ಲಿಸಿದ್ದರು ಎಂಬ ಆರೋಪ ಬಂದಿತ್ತು.

ನೋಟ್ ಬ್ಯಾನ್ ಸಂದರ್ಭ ಒಂದೇ ವಾರದಲ್ಲಿ IMA 600 ಕೋಟಿ ವ್ಯವಹಾರ !

ಈ ಪ್ರಕರಣದ ಆರಂಭದಲ್ಲಿ ತನಿಖೆ ನಡೆಸಿದ್ದ ಎಸ್‌ಐಟಿ ಅಧಿಕಾರಿಗಳು, ಜು.8 ರಂದು ವಿಜಯಶಂಕರ್‌ ಅವರನ್ನು ಬಂಧಿಸಿದ್ದರು. ಪ್ರಕರಣ ಸಿಬಿಐಗೆ ವರ್ಗಾವಣೆಗೊಂಡಿತ್ತು. ಸಿಬಿಐ ಕೂಡಾ, ವಿಜಯಶಂಕರ್‌ ವಿರುದ್ಧ ನ್ಯಾಯಾಲಯಕ್ಕೆ ಆರೋಪ ಪಟ್ಟಿಸಲ್ಲಿಸಲು ಅನುಮತಿ ನೀಡುವಂತೆ ಸರ್ಕಾರವನ್ನು ಕೋರಿದ್ದರು. ಈ ಹಿನ್ನೆಲೆಯಲ್ಲಿ ಅವರು ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಈ ಸಂಬಂಧ ತಿಲಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಂಚದ ಹಣದಲ್ಲಿ ಆಸ್ತಿ ಖರೀದಿ

ಐಎಂಎ ಕಂಪನಿ ಮಾಲೀಕನಿಂದ ಪಡೆದ ಲಂಚದ ಹಣದಲ್ಲಿ ವಿಜಯಶಂಕರ್‌ ಅವರು, ಜಯನಗರದ ಶಾಂಪಿಂಗ್‌ ಕಾಂಪ್ಲೆಕ್ಸ್‌ ಹಾಗೂ ನಂದಿಬೆಟ್ಟದ ಸಮೀಪ ಜಮೀನು ಖರೀದಿಗೆ ಹಣ ವಿನಿಯೋಗಿಸಿದ್ದರು. ಈ ವ್ಯವಹಾರಕ್ಕೆ ರಿಯಲ್‌ ಎಸ್ಟೇಟ್‌ ಉದ್ಯಮಿ ಕೃಷ್ಣಮೂರ್ತಿ ಎಂಬಾತ ಮಧ್ಯವರ್ತಿ ಆಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಆತ್ಮಹತ್ಯೆಗೆ ಕಾರಣ ಇದು?

ತಮ್ಮ ವಿರುದ್ಧ ಸಿಬಿಐ ಅಭಿಯೋಜನೆಗೆ ಅನುಮತಿ ನೀಡದಂತೆ ವಿಜಯಶಂಕರ್‌ ಮಂಗಳವಾರ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದರು. ಆದರೆ ಇದಕ್ಕೆ ಪೂರಕವಾದ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.