*   ಕೊರೋನಾ ಸಂತ್ರಸ್ತರಿಗೆ ಸಹಾಯ ನೀಡದ ಸರ್ಕಾರ*   ಮುಂದಿನ ಬಾರಿ ಕಾಂಗ್ರೆಸ್‌ಗೇ ಜಯ*   ಕೊರೋನಾ ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿರುವ ರಾಜ್ಯ ಸರ್ಕಾರ 

ಬೆಂಗಳೂರು(ಅ.11): ರಾಜ್ಯ ಸರ್ಕಾರ(Government) ಕೊರೋನಾ(Coronavirus) ನಿಯಂತ್ರಣ ಹಾಗೂ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಸಹಕಾರ ನೀಡಲು ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಮುಂದಿನ ಬಾರಿ ಜನರು ಕಾಂಗ್ರೆಸ್‌ನ್ನು ಗೆಲ್ಲಿಸಲಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ(Siddaramaiah) ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಬಸವೇಶ್ವರ ನಗರದಲ್ಲಿ ಮಹದೇವಪ್ಪ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊರೋನಾದಿಂದ ಮೃತಪಟ್ಟ(Death) ಕುಟುಂಬಗಳ ವಿದ್ಯಾರ್ಥಿಗಳಿಗೆ(Students) ಪ್ರೋತ್ಸಾಹ ಧನದ ಚೆಕ್‌, ಟ್ಯಾಬ್‌, ಸಮವಸ್ತ್ರ, ಮಹಿಳೆಯರಿಗೆ ಟೈಲರಿಂಗ್‌ ಯಂತ್ರ ಹಾಗೂ ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಸಹಾಯ ಧನದ ಚೆಕ್‌ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕೊರೋನಾ ನಿಯಂತ್ರಿಸುವ ಹಾಗೂ ಪರಿಣಾಮಕಾರಿಯಾಗಿ ಎದುರಿಸುವ ನಿಟ್ಟಿನಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೋನಾ ರೋಗಿಗಳಿಗೆ ಸೂಕ್ತ ಚಿಕಿತ್ಸೆ(Treatment) ನೀಡುವ ಕೆಲಸವನ್ನೂ ಮಾಡಿಲ್ಲ. ಚಿಕಿತ್ಸೆ ನೀಡುವಲ್ಲಿಯೂ ವ್ಯಾಪಕ ಅವ್ಯವಹಾರ ನಡೆಸಿ ಸಾವಿರಾರು ಮಂದಿ ಸಾವಿಗೆ ಕಾರಣವಾಗಿದ್ದಾರೆ. ಸರ್ಕಾರದ ನಿರ್ಲಕ್ಷ್ಯದಿಂದ ಮೃತಪಟ್ಟವರಿಗೆ ಸೂಕ್ತ ಪರಿಹಾರ(Compensation) ನೀಡುವ ಕೆಲಸವನ್ನೂ ಸರ್ಕಾರ ಮಾಡಿಲ್ಲ ಎಂದು ಕಿಡಿಕಾರಿದರು.

'ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯಗೆ 3 ಕಾಸಿನ ಬೆಲೆ ಇಲ್ಲ'

ರಾಜ್ಯ ಸರ್ಕಾರ ಕೊರೋನಾ ಸಾವಿನ ಸಂಖ್ಯೆಯನ್ನೂ ಮುಚ್ಚಿಡುತ್ತಿದೆ. ಆದರೆ, ಕಾಂಗ್ರೆಸ್‌(Congress) ಪಕ್ಷವು ಕೊರೋನಾ ಸಂಕಷ್ಟ ಹಾಗೂ ಕೊರೋನಾ ಸೋಂಕಿತರ ಚಿಕಿತ್ಸೆ, ಮೃತರ ಅಂತ್ಯಸಂಸ್ಕಾರದವರೆಗೆ ಎಲ್ಲಾ ರೀತಿಯಲ್ಲೂ ಶಕ್ತಿ ಮೀರಿ ಜನ ಸೇವೆ ಮಾಡಿದೆ. ಹೀಗಾಗಿ ಜನರಿಗೂ ಸಹ ಕಾಂಗ್ರೆಸ್‌ನ್ನು ಬಿಟ್ಟರೆ ಬೇರೆ ಯಾರೂ ಉತ್ತಮ ಆಡಳಿತ ನೀಡಲಾಗದು ಎಂಬುದು ಮನವರಿಕೆಯಾಗಿದೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ(Election) ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಪಿ.ಜಿ.ಆರ್‌.ಸಿಂಧ್ಯಾ, ಡಾ. ಎಚ್‌.ಸಿ.ಮಹದೇವಪ್ಪ, ಎಚ್‌.ಎಂ. ರೇವಣ್ಣ, ಚಲನಚಿತ್ರ ನಟ, ನಿರ್ದೇಶಕ ಎಸ್‌. ನಾರಾಯಣ್‌, ಪ್ರತಿಷ್ಠಾನದ ಮುಖ್ಯಸ್ಥರು ಹಾಗೂ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎಂ. ಶಿವರಾಜು ಹಾಜರಿದ್ದರು.