ಬೆಂಗಳೂರು(ಡಿ.10): ಶಾಪಿಂಗ್‌ ಮಾಲ್‌, ಪಾರ್ಟಿ ಹಾಲ್‌ ಸೇರಿದಂತೆ ವಾಣಿಜ್ಯ ಸ್ಥಳಗಳಲ್ಲಿ ಕೋವಿಡ್‌ ನಿಯಮಾವಳಿ (ಮಾಸ್ಕ್‌ ತೊಡುವುದು, ಸಾಮಾಜಿಕ ಅಂತರ ಪಾಲನೆ ಇತ್ಯಾದಿ) ಉಲ್ಲಂಘನೆಯಾದರೆ ಆ ಸ್ಥಳದ ಮಾಲಿಕರಿಗೆ ದಂಡ ವಿಧಿಸುವ ನೀತಿ ಇದೀಗ ರಾಜ್ಯಾದ್ಯಂತ ವಿಸ್ತರಣೆಯಾಗಿದೆ.

ಇದುವರೆಗೂ ಬೆಂಗಳೂರು ನಗರ ವ್ಯಾಪ್ತಿಯಲ್ಲಿದ್ದ ಈ ದಂಡ ವಿಧಿಸುವ ನಿಯಮಾವಳಿಯನ್ನು ರಾಜ್ಯಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ನಿಯಮಾವಳಿ ಉಲ್ಲಂಘನೆ ಕಂಡುಬಂದರೆ ಹವಾ ನಿಯಂತ್ರಿತವಲ್ಲದ ಪಾರ್ಟಿ ಹಾಲ್‌, ಅಂಗಡಿಗಳ ಮಾಲಿಕರಿಗೆ 5,000 ರು., ಹವಾನಿಯಂತ್ರಿತ ಪಾರ್ಟಿ ಹಾಲ್‌, ಅಂಗಡಿ, ಬ್ರ್ಯಾಂಡೆಡ್‌ ಶಾಪ್‌ಗಳು, ಶಾಪಿಂಗ್‌ ಮಾಲ್‌ಗಳ ಮಾಲಿಕರಿಗೆ 10,000 ರು., ತ್ರಿ-ತಾರಾ ಹಾಗೂ ನಂತರದ ಎಲ್ಲ ತಾರಾ ಹೋಟೆಲ್‌ಗಳು, ಕನಿಷ್ಠ ಪಕ್ಷ 500 ಜನರು ಸೇರುವ ಸಾಮರ್ಥ್ಯದ ಕಲ್ಯಾಣ ಮಂಟಪ ಮತ್ತು ಸಭಾಂಗಣಗಳ ಮಾಲಿಕರಿಗೆ 10,000 ರು. ಮತ್ತು ಸಾರ್ವಜನಿಕ ಕಾರ್ಯಕ್ರಮಗಳು, ರಾರ‍ಯಲಿಗಳು ಮತ್ತು ಆಚರಣೆಗಳ ಆಯೋಜಕರಿಗೆ 10,000 ರು. ದಂಡ ವಿಧಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಆದೇಶಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧಾರಣೆ, ಸಾಮಾಜಿಕ ಅಂತರದ ಪಾಲನೆಯಲ್ಲಿ ಜನರು ನಿರ್ಲಕ್ಷ್ಯ ವಹಿಸುತ್ತಿದ್ದು, ಜನವರಿ, ಫೆಬ್ರವರಿಯಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಏಳುವ ಆತಂಕವನ್ನು ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತಮ್ಮ ತಮ್ಮ ಸ್ಥಳಗಳಲ್ಲಿ ಕೋವಿಡ್‌ ನಿಯಮವನ್ನು ಎಲ್ಲರೂ ಪಾಲಿಸುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆ ಜಾಗಗಳ ಮಾಲಿಕರ ಮೇಲೆ ಹೊರಿಸಿದೆ.

ಯಾರಿಗೆ ಎಷ್ಟು ದಂಡ?

- .5000: ನಾನ್‌ ಎ.ಸಿ. ಪಾರ್ಟಿ ಹಾಲ್‌, ಅಂಗಡಿ ಮಾಲಿಕರಿಗೆ

- .10000: ಎ.ಸಿ. ಪಾರ್ಟಿ ಹಾಲ್‌, ಅಂಗಡಿ, ಶಾಪಿಂಗ್‌ ಮಾಲ್‌ಗೆ

- .10000: ತ್ರೀ ಸ್ಟಾರ್‌ ಮತ್ತು ಮೇಲಿನ ಹೋಟೆಲ್‌, ಸಭಾಂಗಣಕ್ಕೆ

- .10000: ಸಾರ್ವಜನಿಕ ಕಾರ್ಯಕ್ರಮ, ರಾರ‍ಯಲಿ ಆಯೋಜಕರಿಗೆ