ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಸ್ವಾತಂತ್ರ್ಯ, ಸಂವಿಧಾನ ನೀಡಿದ್ದು ಕಾಂಗ್ರೆಸ್‌, ಬಿಜೆಪಿಗೆ ಮರ್ಯಾದೆ ಇದ್ದರೆ ದೇಶಕ್ಕಾಗಿ ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳಲ್ಲ. ಗಾಂಧೀಜಿ ಕೊಂದವರು ನಮಗೆ ಪ್ರಶ್ನೆ ಕೇಳುತ್ತಾರೆಯೇ? ಎಂದು ಕಿಡಿ ಕಾರಿದ್ದಾರೆ.

ಬೆಂಗಳೂರು[ಡಿ.01]: ದೇಶಕ್ಕೆ ಸ್ವಾತಂತ್ರ್ಯ ಹಾಗೂ ಸಂವಿಧಾನವನ್ನು ಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಮಹಾತ್ಮಾ ಗಾಂಧಿಯವರನ್ನು ಕೊಂದವರ ವಂಶಸ್ಥರು ಈ ಬಿಜೆಪಿಯವರು. ಇಂದು ಕಾಂಗ್ರೆಸ್‌ ಕೊಡುಗೆ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆಯಿಂದ ಶುಕ್ರವಾರ ಕಾಂಗ್ರೆಸ್‌ ಕಾರ್ಯಕರ್ತರಿಗಾಗಿ ಏರ್ಪಡಿಸಿದ್ದ ಸಂವಿಧಾನ ಕುರಿತ ಕಾರ್ಯಗಾರದಲ್ಲಿ ಮಾತನಾಡಿದರು. ಬಿಜೆಪಿಯವರಿಗೆ ಮಾನ ಮರ್ಯಾದೆ ಎಂಬುದು ಇಲ್ಲ. ಸುಳ್ಳು ಹೇಳಿಕೊಂಡು ದೇಶವನ್ನು ದಾರಿ ತಪ್ಪಿಸುವುದು, ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರಿಗೆ ಮೋಸ ಮಾಡುವುದೇ ಅವರ ಕೆಲಸ. ಕಾಂಗ್ರೆಸ್‌ ತುಂಬಾ ವರ್ಷ ಅಧಿಕಾರದಲ್ಲಿತ್ತು, ಆದರೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡುತ್ತಾರೆ. ದೇಶಕ್ಕೆ ಸಂವಿಧಾನ, ಸ್ವಾತಂತ್ರ್ಯ ತಂದುಕೊಟ್ಟಿರುವುದು ಕಾಂಗ್ರೆಸ್‌ ಪಕ್ಷ. ಸ್ವಾತಂತ್ರ್ಯ ಬಂದ ಬಳಿಕ ದೇಶದ ಸಾಕ್ಷರತೆ ಶೇ.16ರಷ್ಟುಮಾತ್ರ ಇತ್ತು, ಇಂದು ಶೇ.74ರಷ್ಟುಆಗಿದೆ. ದೇಶವು ಸ್ವಾತಂತ್ರ್ಯ ಪಡೆದಾಗ ಊಟಕ್ಕೂ ಬೇರೆ ದೇಶಗಳ ಮುಂದೆ ಕೈಚಾಚುವ ಪರಿಸ್ಥಿತಿ ಇತ್ತು. ಈಗ ಬೇರೆ ದೇಶಗಳಿಗೆ ಅನ್ನ ಹಾಕುವಷ್ಟುಪ್ರಗತಿ ಸಾಧಿಸಿದ್ದೇವೆ. ಈ ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ದರೆ ಕಾಂಗ್ರೆಸ್‌ ಏನು ಮಾಡಿದೆ ಎಂದು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.

ಸಂವಿಧಾನದ ಮೂಲಕ ಸಮಾನತೆ ತರಲು ಪ್ರಯತ್ನಿಸುತ್ತಿರುವುದು ಕಾಂಗ್ರೆಸ್‌ ಸಾಧನೆ. ಆದರೆ, ಆರ್‌ಎಸ್‌ಎಸ್‌, ಬಿಜೆಪಿಗೆ ಸಮಾಜದಲ್ಲಿ ಸಮಾನತೆ ಬರಬಾರದು. ಸಮಾಜದಲ್ಲಿ ಸಮಾನತೆ ಬಂದರೆ ಶೋಷಣೆ ಮಾಡುವ ಅವಕಾಶ ತಪ್ಪಿ ಹೋಗುತ್ತದೆ. ಹೀಗಾಗಿ ಅವರು ಭಾವನಾತ್ಮಕ ವಿಷಯಗಳನ್ನು ಇಟ್ಟುಕೊಂಡು ಜನರ ತಲೆ ಕೆಡಿಸುತ್ತಿದ್ದಾರೆ ಎಂದು ಆರೋಪಿಸಿದರು.

ದಿನೇಶ್‌ ಗುಂಡೂರಾವ್‌ ಸಗಣಿ ಎತ್ತಿದ್ದಾರಾ:

ಬಿಜೆಪಿಯವರು ಮಾತೆತ್ತಿದರೆ ಗೋಮಾತೆ ಎನ್ನುತ್ತಾರೆ. ಮೇಲ್ವರ್ಗದವರು ಯಾವತ್ತಾದರೂ ಸಗಣಿ ಎತ್ತಿದ್ದಾರಾ? ನಾನು ದನ, ಕುರಿ ಮೇಯಿಸಿದ್ದೇನೆ. ಹೊಲ ಉಳುಮೆ ಮಾಡಿದ್ದೇನೆ. ಆದರೆ, ಇದನ್ನು ಏನೂ ಮಾಡದ ಮೇಲ್ವರ್ಗದವರು ನೀವು ಮಾಂಸ ತಿನ್ನಬೇಡಿ, ದನ ತಿನ್ನಬೇಡಿ ಎಂದು ಬೇರೆಯವರಿಗೆ ಹೇಳುತ್ತಾರೆ. ನಾಗರಿಕತೆ ಶುರುವಾಗಿದ್ದೇ ಮಾಂಸಾಹಾರದಿಂದ ಎಂಬುದನ್ನು ಅರಿಯಬೇಕು ಎಂದು ಹೇಳಿದರು.

ಇದೇ ವೇಳೆ ಮೇಲ್ವರ್ಗದವರು ಯಾರೂ ಹಸು ಸಗಣಿ ಎತ್ತಿಲ್ಲ, ಮೇವು ಹಾಕಿರುವುದಿಲ್ಲ ಎಂದ ಅವರು, ಪಕ್ಕದಲ್ಲೇ ಕುಳಿದಿದ್ದ ದಿನೇಶ್‌ ಗುಂಡೂರಾವ್‌ ಅವರನ್ನು ನೀವು ಸಗಣಿ ಬಾಚಿದ್ದೀರಾ ಎಂದು ಪ್ರಶ್ನಿಸಿದರು. ಇದಕ್ಕೆ ದಿನೇಶ್‌ ಗುಂಡೂರಾವ್‌ ತಲೆ ಅಲ್ಲಾಡಿಸಿದರು. ಬಿ.ಎಲ್‌.ಶಂಕರ್‌ ಅವರೂ ಸಹ ಸಗಣಿ ಬಾಚಿಲ್ಲ ಎಂದು ಹೇಳಿದರು. ಈ ವೇಳೆ ಸಭೆಯಲ್ಲಿ ಎಲ್ಲರೂ ನಗೆಗಡಲಲ್ಲಿ ತೇಲಿದರು.

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಗೋಮಾಂಸದ ವಿರುದ್ಧ ಮಾತನಾಡುತ್ತಾರೆ. ಆದರೆ, ಗೋಮಾಂಸ ರಫ್ತಿನಲ್ಲಿ ಉತ್ತರ ಪ್ರದೇಶವೇ ಮೊದಲ ಸ್ಥಾನದಲ್ಲಿದೆ. ಗೋವಾದಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಆದರೆ, ಅವರೂ ಸಹ ಗೋಮಾಂಸ ರಫ್ತು ನಿಷೇಧ ಮಾಡುವುದಿಲ್ಲ. ಆದರೆ ಇಲ್ಲಿ ರಾಜಕೀಯಕ್ಕೆ ಗೋಮಾಂಸದ ಬಗ್ಗೆ ಮಾತನಾಡುತ್ತಾರೆ ಎಂದು ಹರಿಹಾಯ್ದರು.

ಮೇಷ್ಟ್ರಾದ ಸಿದ್ದು:

ತಮ್ಮ ಕಾನೂನು ವ್ಯಾಸಂಗದ ದಿನಗಳನ್ನು ನೆನೆಸಿಕೊಂಡು ಕಾನೂನು ಮೇಷ್ಟಾ್ರದ ಸಿದ್ದು, ಒಂದು ಕಡೆಯಿಂದ ಕಾನೂನಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಾ ಬಂದರು. ಸಂವಿಧಾನ, ರಚನೆ, ಮೀಸಲಾತಿ, ಮೀಸಲಾತಿ ಆಯೋಗಗಳ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಪ್ರಶ್ನೆಗೆ ಉತ್ತರ ಬಾರದೆ ಇದ್ದಾಗ ಸ್ವತಃ ತಾವೇ ಉತ್ತರ ನೀಡಿದರು. ಈ ಮೂಲಕ ಎಲ್ಲರನ್ನೂ ಅಚ್ಚರಿಗೆ ಗುರಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ರಾಜೀವ್‌ ಗಾಂಧಿ ಪಂಚಾಯತ್‌ ರಾಜ್‌ ಸಂಘಟನೆ ಅಧ್ಯಕ್ಷೆ ಮೀನಾಕ್ಷಿ ನಟರಾಜನ್‌, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಸೇರಿ ಹಲವರು ಹಾಜರಿದ್ದರು.