ಬೆಂಗಳೂರು[ಫೆ.07]: ಫೆಬ್ರವರಿ 8 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದ್ದು, ಬುಧವರದಂದು ಕರ್ನಾಟಕ ಬಜೆಟ್ ಅಧಿವೇಶನ ಆರಂಭವಾಗಿದೆ. ಅಧಿವೇಶನದ ವೇಳೆ ಭಾರೀ ಹೈಡ್ರಾಮಾ ನಡೆದಿದ್ದು, ಮೈತ್ರಿ ಸರ್ಕಾರಕ್ಕೆ ತಲೆನೋವು ನೀಡಿದೆ. ಸದ್ಯ ಈ ಕುರಿತಾಗಿ ಪ್ರತಿಕ್ರಿಯಿಸಿರುವ ಸ್ಪೀಕರ್ ರಮೆಶ್ ಕುಮಾರ್ ನಲ್ವತ್ತು ಜನ ರಾಜೀನಾಮೆ ಕೊಟ್ಟರು ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ . 

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಜನ್ನಪ್ಪನಹಳ್ಳಿ ಗ್ರಾಮದಲ್ಲಿ ಗಣೇಶ ಮೂರ್ತಿ ಹಾಗೂ ಪುಷ್ಕರಣಿ ಉದ್ಘಾಟಸಿ ಮಾತನಾಡಿದ ಸ್ಪೀಕರ್ ಕೆ.ಆರ್ ರಮೇಶ್ ಕುಮಾರ್ 'ಗೈರಾದ ಶಾಸಕರು ನನ್ನನ್ನು ಯಾರು ಸಂಪರ್ಕ ಮಾಡಿಲ್ಲ. ಶಾಸಕರು ರಾಜಿನಾಮೆ ನೀಡುವ ವಿಚಾರ ನನಗೇನು ಗೊತ್ತಿಲ್ಲ. ಗೈರಾದ ಶಾಸಕರ ಮೇಲೆ ಕ್ರಮಕೈಗೊಳ್ಳಲು ನಾನು ಯಾರು? ನಾಲ್ಕು ಅಲ್ಲ ನಲವತ್ತು ಜನ ಶಾಸಕರು ರಾಜೀನಾಮೆ ನೀಡಿದರೂ ತೆಗೆದುಕೊಳ್ಳತ್ತೇನೆ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕಂಪ್ಲಿ ಗಣೇಶ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು 'ಕಾಂಗ್ರೆಸ್ ಶಾಸಕ ಕಂಪ್ಲಿ ಗಣೇಶ್ ಬಂಧಿಸುವಂತೆ ಸೂಚನೆ ನೀಡಲು ನಾನೇನು ಪೋಲಿಸ್ ಇಲಾಖೆ ಅಧಿಕಾರಿನಾ?' ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 'ಬೆಳೆ, ಮಳೆ ಚೆನ್ನಾಗಿ ಆಗಲಿ ನೀರು ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದೆ' ಎನ್ನುವ ಮೂಲಕ ರಾಜಕೀಯ ಬೆಳವಣಿಗೆ ಕುರಿತು ವ್ಯಂಗ್ಯವಾಡಿದ್ದಾರೆ.