Asianet Suvarna News Asianet Suvarna News

ರೂಪಾ ವಿರುದ್ಧ ಸಿಂಧೂರಿ 1 ಕೋಟಿ ರು. ಮಾನನಷ್ಟ ಕೇಸು

ಡಿ.ರೂಪಾ ಮೌದ್ಗಿಲ್‌ ಫೇಸ್‌ಬುಕ್‌, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಆದ್ದರಿಂದ, ಒಂದು ಕೋಟಿ ಹಣವನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಕೋರಿ  ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ ರೋಹಿಣಿ ಸಿಂಧೂರಿ. 

IAS Officer Rohini Sindhuri Register 1 Crore Defamation Case against IPS Officer D Roopa grg
Author
First Published Mar 1, 2023, 6:58 AM IST

ಬೆಂಗಳೂರು(ಮಾ.01):  ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್‌ ವಿರುದ್ಧ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ನಗರದ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಡಿ.ರೂಪಾ ಮೌದ್ಗಿಲ್‌ ಅವರು ಫೇಸ್‌ಬುಕ್‌, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಆದ್ದರಿಂದ, ಒಂದು ಕೋಟಿ ಹಣವನ್ನು ಪರಿಹಾರವಾಗಿ ಕೊಡಿಸಿಕೊಡಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಕೋರಿ ರೋಹಿಣಿ ಸಿಂಧೂರಿ ನಗರದ 24ನೇ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

ರೋಹಿಣಿ ಸಿಂಧೂರಿ ಪರ ಹಾಜರಾದ ಹಿರಿಯ ವಕೀಲ ಸಿ.ವಿ.ನಾಗೇಶ್‌ ಅವರು, ದೂರುದಾರರು ಚಾಮರಾಜನಗರ ಹಾಗೂ ಮೈಸೂರಿನ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಆದರೆ, ಆರೋಪಿ ಡಿ.ರೂಪಾ, ದೂರುದಾರರ ವಿರುದ್ಧ ಕಪೋಲಕಲ್ಪಿತ ಆರೋಪ ಮಾಡಿದ್ದಾರೆ. ಆದ್ದರಿಂದ ದೂರನ್ನು ವಿಚಾರಣೆಗೆ ಅಂಗೀಕರಿಸಬೇಕು. ಆರೋಪಿ ರೂಪಾ ಮೌದ್ಗಿಲ್‌ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅವರು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿದರು.

ರೋಹಿಣಿ ವಿರುದ್ಧ ಮತ್ತೆ ರೂಪಾ ಫೇಸ್ಬುಕ್‌ ಪೋಸ್ಟ್‌: ಪತ್ರಿಕೆಯಲ್ಲಿ ಪ್ರಕಟವಾದ ವರದಿ ಲಗತ್ತಿಸಿ ಗರಂ

ರೂಪಾ ಅವರು ಇದೇ ಫೆ.18 ಮತ್ತು 19ರಂದು ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ನನ್ನ ವಿರುದ್ಧ ಕೀಳು ಅಭಿರುಚಿಯಿಂದ ಕೂಡಿದ ಆರೋಪ ಮಾಡಿದ್ದಾರೆ. ವಿದ್ಯುನ್ಮಾನ ಮಾಧ್ಯಮದಲ್ಲೂ ಹೇಳಿಕೆ ನೀಡಿದ್ದಾರೆ. ಆ ಆರೋಪಗಳು ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ಉಂಟು ಮಾಡುವಂತಿವೆ. ನನ್ನ ತೇಜೋವಧೆ ಮಾಡುವ ದುರುದ್ದೇಶದಿಂದಲೇ ರೂಪ ಈ ಕೃತ್ಯ ಎಸಗಿದ್ದಾರೆ. ಅದು ನನ್ನ ಖಾಸಗಿ, ಸಾಮಾಜಿಕ ಮತ್ತು ವೃತ್ತಿ ಬದುಕಿನ ಮೇಲೆ ಗಂಭೀರ ಪರಿಣಾಮ ಬೀರಿ, ಮಾನಸಿಕ ಯಾತನೆ ಉಂಟು ಮಾಡಿವೆ ಎಂದು ದೂರಿನಲ್ಲಿ ರೋಹಿಣಿ ವಿವರಿಸಿದ್ದಾರೆ.

ಅಲ್ಲದೆ, ಐಎಎಸ್‌ ನಿಯಮಗಳಿಗೆ ವಿರುದ್ಧವಾಗಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ನನ್ನನ್ನು ಟೀಕೆ ಮಾಡಿದಾರೆ. ಇದು ನನಗೆ ಮಾತ್ರವಲ್ಲದೆ ಸರ್ಕಾರಕ್ಕೂ ಮುಜುಗುರ ಉಂಟು ಮಾಡಿದೆ. ಆದ್ದರಿಂದ, ನನಗಾಗಿರುವ ಮಾನನಷ್ಟಕ್ಕೆ ಒಂದು ಕೋಟಿ ರು. ಪರಿಹಾರವಾಗಿ ಕೊಡಿಸಿಕೊಡಬೇಕು. ರೂಪಾ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ರೋಹಿಣಿ ಕೋರಿದ್ದಾರೆ.

ಪದೇ ಪದೇ ಪೋಸ್ಟ್‌: ರೋಹಿಣಿ ಆರೋಪ

ರೋಹಿಣಿ ಸಿಂಧೂರಿ ತಮ್ಮ ವಕೀಲರೊಂದಿಗೆ ಕೋರ್ಟ್‌ಗೆ ಹಾಜರಾಗಿದ್ದರು. ಈ ವೇಳೆ ಅರ್ಜಿ ಬಗ್ಗೆ ಏನಾದರೂ ಹೇಳುವುದು ಇದೆಯಾ ಎಂದು ರೋಹಿಣಿ ಸಿಂಧೂರಿ ಅವರಿಗೆ ನ್ಯಾಯಾಧೀಶರ ಪ್ರಶ್ನೆ ಮಾಡಿದರು. ರೋಹಿಣಿ ಉತ್ತರಿಸಿ, ನನ್ನ ವಿರುದ್ಧ ರೂಪಾ ಪದೇ ಪದೇ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡುತ್ತಿದ್ದಾರೆ. ನನ್ನ ವಿರುದ್ಧ ಮಾನಹಾನಿಕಾರಿ ಹೇಳಿಕೆ ನೀಡದಂತೆ ನ್ಯಾಯಾಲಯ ನಿರ್ಬಂಧ ವಿಧಿಸಿದ್ದರೂ ರೂಪಾ ಮಾತ್ರ ಆರೋಪ ಮಾಡುವುದನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದರು.

Follow Us:
Download App:
  • android
  • ios