ಸೋಮಶೇಖರ ರೆಡ್ಡಿ ಮನೆ ಮುಂದೆ ಧರಣಿ: ಬಳ್ಳಾರಿ ಎಸ್‌ಪಿಗೆ ಜಮೀರ್ ಪತ್ರ!
ಸೋಮಶೇಖರ ರೆಡ್ಡಿ ಮನೆ ಮುಂದೆ| ಧರಣಿ ಕೂಡಲು ಜಮೀರ್ ನಿರ್ಧಾರ| ಎಸ್ಪಿಗೆ ಸಿ.ಕೆ. ಬಾಬಾರಿಗೆ ಪತ್ರ ಬರೆದ ಶಾಸಕ ಜಮೀರ್, ಬಳ್ಳಾರಿಯಲ್ಲಿ ಮತ್ತೊಂದು ಸುತ್ತಿನ ಆತಂಕ ಶುರು
ಬಳ್ಳಾರಿ[ಜ.12]: ನಿರ್ದಿಷ್ಟಸಮುದಾಯದ ವಿರುದ್ಧ ಪ್ರಚೋದನಕಾರಿಯಾಗಿ ಭಾಷಣ ಮಾಡಿರುವ ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮನೆಯ ಮುಂದೆ ಧರಣಿ ನಡೆಸಲು ಶಾಸಕ ಜಮೀರ್ ಅಹ್ಮದ್ ನಿರ್ಧರಿಸಿದ್ದಾರೆ.
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದಿರುವ ಅವರು, ತಾವು ಈ ಹಿಂದೆ ಹೇಳಿದಂತೆಯೇ ಶಾಸಕ ರೆಡ್ಡಿ ನಿವಾಸದ ಎದುರು ಧರಣಿ ಕೂಡುವುದಾಗಿ ತಿಳಿಸಿದ್ದಾರೆ.
ಈ ವಿಷಯವನ್ನು ತಮ್ಮ ಗಮನಕ್ಕೆ ತರುತ್ತಿದ್ದು, ಸೂಕ್ತ ಭದ್ರತೆ ನೀಡುವಂತೆ ಎಸ್ಪಿ ಸಿ.ಕೆ. ಬಾಬಾ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಬಳ್ಳಾರಿಯ ಹವಂಬಾವಿ ಪ್ರದೇಶದಲ್ಲಿ ಸೋಮಶೇಖರ ರೆಡ್ಡಿ ಅವರ ಮನೆ ಇದೆ.
ಸೋಮಶೇಖರ ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಶುಕ್ರವಾರವಷ್ಟೇ ವಜಾಗೊಂಡಿದ್ದು, ಬಂಧನ ಭೀತಿ ಎದುರಿಸುತ್ತಿದ್ದಾರೆ.
ಜಮೀರ್ ಅಹ್ಮದ್‌ಗೆ ಆಹ್ವಾನ ನೀಡಿದ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ
ಒಂದು ಸಮುದಾಯದ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿದ್ದಾಗ್ಯೂ ಶಾಸಕ ರೆಡ್ಡಿ ಅವರನ್ನು ಈವರೆಗೆ ಬಂಧಿಸಿಲ್ಲ. ಒಂದು ವಾರದೊಳಗೆ ಬಂಧಿಸಿದ್ದರೆ ಶಾಸಕ ರೆಡ್ಡಿ ನಿವಾಸದ ಎದುರು ಧರಣಿ ಕೂಡುವುದಾಗಿ ಶಾಸಕ ಜಮೀರ್ ಹೇಳಿಕೆ ನೀಡಿದ್ದರು. ರೆಡ್ಡಿ ಬಂಧನವಾಗದ ಹಿನ್ನೆಲೆಯಲ್ಲಿ ಬಳ್ಳಾರಿಗೆ ಬರುವ ನಿರ್ಧಾರ ಕೈಗೊಂಡಿರುವ ಜಮೀರ್, ಪ್ರತಿಭಟನೆಯ ಮೂಲಕ ರೆಡ್ಡಿ ವಿರುದ್ಧದ ಹೇಳಿಕೆಗೆ ತಮ್ಮ ಅಸಮಾಧಾನ ಹೊರ ಹಾಕಲು ನಿರ್ಧರಿಸಿದ್ದಾರೆ.
ಶಾಸಕ ಜಮೀರ್ ನಿರ್ಧಾರ ನಗರದಲ್ಲಿ ಮತ್ತೊಂದು ಸುತ್ತಿನ ಆತಂಕಕ್ಕೆ ಕಾರಣವಾಗಿದೆ. ಪ್ರಚೋದನಕಾರಿಯಾಗಿ ಮಾತನಾಡಿದ್ದ ಶಾಸಕ ಸೋಮಶೇಖರ ರೆಡ್ಡಿ ನಡೆಯನ್ನು ಟೀಕಿಸಿದ ಜಮೀರ್ ಹೇಳಿಕೆಗೆ ತಿರುಗೇಟು ನೀಡಿದ್ದ ಶಾಸಕ ರೆಡ್ಡಿ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ರೀತಿಯಲ್ಲಿ ಧರಣಿ ಕುಳಿತುಕೊಳ್ಳಲು ಜಮೀರ್ ಬಳ್ಳಾರಿಗೆ ಬಂದರೆ ಮುಂದಿನ ನಡೆಯನ್ನು ನಮ್ಮ ಕಾರ್ಯಕರ್ತರೇ ನೋಡಿಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದರು. ಅದಲ್ಲದೇ ಜಮೀರ್ ಬಂದರೆ ತಮ್ಮ ಮನೆಯಲ್ಲಿಯೇ ಟಿಫಿನ್ ಮಾಡಿಕೊಂಡು ಹೋಗಲಿ ಎಂದಿದ್ದರು. ರೆಡ್ಡಿ ಹೇಳಿಕೆಯ ಬಳಿಕ ಕಾಂಗ್ರೆಸ್ ಪ್ರಮುಖರು ಹಾಗೂ ಸಾವಿರಾರು ಕಾರ್ಯಕರ್ತರು ಬಳ್ಳಾರಿ ನಗರದಲ್ಲಿ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದರು.
ಏತನ್ಮಧ್ಯೆ, ಜಮೀರ್ ಬಳ್ಳಾರಿಗೆ ಬರುವ ನಿರ್ಧಾರಕ್ಕೆ ಕೆಲವು ಬಿಜೆಪಿ ಹಾಗೂ ಶಾಸಕ ರೆಡ್ಡಿ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ‘ಗೋಬ್ಯಾಕ್ ಜಮೀರ್’ ಎಂದು ಪೋಸ್ಟರ್‌ಗಳನ್ನು ಹಾಕಿ ಖಂಡಿಸಿದ್ದರು. ಆದರೆ, ಇದು ಹೆಚ್ಚು ವೈರಲ್ ಆಗದಿದ್ದರೂ ಬಿಜೆಪಿ ಕಾರ್ಯಕರ್ತರ ನಡುವೆ ಆಂತಂರಿಕ ಚರ್ಚೆ ಬಿರುಸಾಗಿಯೇ ನಡೆದಿದೆ. ಒಂದು ವೇಳೆ ತಾನು ಘೋಷಣೆ ಮಾಡಿದಂತೆ ಶಾಸಕ ಜಮೀರ್ ಅಹ್ಮದ್ ಅವರು ಶಾಸಕ ರೆಡ್ಡಿ ನಿವಾಸದ ಎದುರು ಧರಣಿ ಕುಳಿತರೆ ಯಾವ ನಿರ್ಧಾರ ಕೈಗೊಳ್ಳಬೇಕು? ಮುಂದಿನ ಹಂತದ ಹೋರಾಟ ರೂಪಿಸಬೇಕೇ ? ಎಂಬಿತ್ಯಾದಿ ಚರ್ಚೆಗಳು ಕಮಲ ಪಕ್ಷದಲ್ಲಿ ನಡೆಯುತ್ತಿವೆ ಎಂದು ತಿಳಿದು ಬಂದಿದೆ.
ಒಟ್ಟಾರೆ ಜಮೀರ್ ಬಳ್ಳಾರಿಗೆ ಬರುವ ನಿರ್ಧಾರ, ಶಾಂತಿಪ್ರಿಯರ ನಗರಿ ಎಂದೇ ಎನಿಸಿಕೊಂಡಿದ್ದ ಬಳ್ಳಾರಿಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಬಹುದೇ ಎಂಬ ಆತಂಕವಂತು ಇದ್ದೇ ಇದೆ.