ಬೆಂಗಳೂರು[ಫೆ.05]: ‘ಪ್ರಧಾನಿ ನರೇಂದ್ರ ಮೋದಿ ರೀತಿ ಢೋಂಗಿ ಬಜೆಟ್‌ ಮಂಡಿಸುವುದಿಲ್ಲ. ನಾನು ಉತ್ತಮ ಬಜೆಟ್‌ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಸೋಮವಾರ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ಪದ್ಮನಾಭನಗರ ನಿವಾಸಕ್ಕೆ ಸೋಮವಾರ ಭೇಟಿ ನೀಡಿ ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ಬಜೆಟ್‌ ಸಿದ್ಧತೆ ಹಾಗೂ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ರಾಜ್ಯದ ಜನರ ಪರವಾದ ಬಜೆಟ್‌ ಮಂಡನೆ ಮಾಡಲಾಗುವುದು. ಉತ್ತಮ ಬಜೆಟ್‌ ಮಂಡಿಸುತ್ತೇನೆಯೇ ಹೊರತು ಪ್ರಧಾನಿ ಮೋದಿ ತರಹ ಢೋಂಗಿ ಬಜೆಟ್‌ ಮಂಡಿಸುವುದಿಲ್ಲ ಎಂದು ವ್ಯಂಗ್ಯವಾಡಿದರು.

ಜನಗಳಿಗೆ ಏನು ಕೊಡಬೇಕು ಎನ್ನುವುದರ ಬಗ್ಗೆ ಗಮನ ಹರಿಸುತ್ತಿದ್ದೇನೆ. ಬಜೆಟ್‌ ಸಿದ್ಧತೆ 15 ದಿನಗಳಿಂದ ನಡೆಯುತ್ತಿದ್ದು, ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ ಎಂದು ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರತಿನಿತ್ಯ, ಪ್ರತಿ ಗಂಟೆಗೂ ಸಹ ಆಪರೇಷನ್‌ ಕಮಲ ನಡೆಯುತ್ತಿದೆ. ಯಾರು ಯಾರನ್ನು ಸಂಪರ್ಕ ಮಾಡಿದ್ದಾರೆ, ಏನು ಬೇಡಿಕೆ ಇಟ್ಟಿದ್ದಾರೆ ಎಂಬುದೆಲ್ಲಾ ಗೊತ್ತಿದೆ. ಅವರಿಗೆ ಎಲ್ಲಿಂದ ಬರುತ್ತದೆ ಅಷ್ಟೊಂದು ಹಣ. ಅವರು ಕೊಟ್ಟಿರುವ ಆಫರ್‌ಗಳನ್ನು ಕೇಳಿದರೆ ಶಾಕ್‌ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರ, ಕಪ್ಪು ಹಣ ನಿಯಂತ್ರಣ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ, ರಾಜ್ಯದಲ್ಲಿ ನೋಡಿದರೆ ಬಿಜೆಪಿಯವರು ಆಫರ್‌ ಮಾಡುತ್ತಿದ್ದಾರೆ ಎಂದು ಟೀಕಿಸಿದರು.