ಬೆಂಗಳೂರು[ಜ.14]: ಬಿಜೆಪಿಯವರು ಕಾಂಗ್ರೆಸ್‌ನ ಅತೃಪ್ತ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆಂದು ಸ್ವತಃ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಕೂಡ ಸ್ಪಷ್ಟಪಡಿಸಿದ್ದು, ಮೂರು ಮಂದಿ ಕಾಂಗ್ರೆಸ್ ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ ಶಾಸಕರು ಯಾರು ಮತ್ತು ಯಾವ ಹೋಟೆಲ್‌ನಲ್ಲಿ ಇದ್ದಾರೆ ಎಂಬುದು ಗೊತ್ತಿದೆ. ಎಲ್ಲಾ ದಾಖಲೆ ಇಟ್ಟುಕೊಂಡಿದ್ದೇವೆ. ಆಪರೇಷನ್ ಕಮಲದ ಸಂಪೂರ್ಣ ದಾಖಲೆ ಸದ್ಯದಲ್ಲೇಬಿಡುಗಡೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ನಮ್ಮ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಎಲ್ಲವೂ ಗೊತ್ತಿದೆ. ನಮ್ಮ ಶಾಸಕರು ಏನೇನು ನಡೆಯುತ್ತಿದೆ ಎಂಬುದನ್ನು ಹೇಳಿಕೊಂಡಿದ್ದಾರೆ. ನಾನಾಗಿದ್ದರೆ ೨೪ ಗಂಟೆಯಲ್ಲಿ ಎಲ್ಲವನ್ನೂ ಬಹಿರಂಗ ಗೊಳಿಸುತ್ತಿದ್ದೆ ಎಂದರು. ಬಿಜೆಪಿ ಮುಖಂಡರು ಗೊಂದಲ, ಅಸ್ಥಿರತೆ ಮೂಡಿಸುತ್ತಿದ್ದಾರೆ. ಮುಹೂರ್ತ ನಿಗದಿ ಮಾಡುತ್ತಿದ್ದಾರೆ. ಹಿಂದೆ ನನ್ನನ್ನು ಜೈಲಿಗೆ ಕಳುಹಿಸಿಕೊಡುವುದಾಗಿ ದಿನಾಂಕ ನಿಗದಿ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಈಗಾಗಲೇ ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗೆ ದೂರನ್ನೂ ನೀಡಿದ್ದಾರೆ. ಸಂಕ್ರಾಂತಿ ನಂತರ ಏನೇನಾಗುತ್ತದೆ ಎಂಬುದನ್ನು ನೋಡೋಣ ಎಂದು ಮಾರ್ಮಿಕವಾಗಿ ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಶಿವಕುಮಾರ್, ಆಪರೇಷನ್ ಕಮಲದ ಎಲ್ಲಾ ಚಟುವಟಿಕೆಗಳನ್ನು ಗಮನಿಸುತ್ತಿದ್ದೇವೆ. ಮೂರು ಮಂದಿ ಶಾಸಕರು ಮುಂಬೈನಲ್ಲಿದ್ದಾರೆ. ನಮ್ಮ ಶಾಸಕರಿಗೆ ಏನೆಲ್ಲಾ ಆಮಿಷ ಒಡ್ಡುತ್ತಿದ್ದಾರೆ ಎಂಬುದು ಗೊತ್ತಿದೆ. ಅವರು ಯಾರು ಎನ್ನುವುದನ್ನು ನೀವೇ (ಸುದ್ದಿಗಾರರು) ಪರಿಶೀಲಿಸಿ ತಿಳಿದುಕೊಳ್ಳಿ ಎಂದು ತಿಳಿಸಿದರು.