ಹಲವಾರು ಕಾರಣಗಳಿಗೆ ಕಾಂಗ್ರೆಸ್ ಪಕ್ಷದಲ್ಲಿ ನೋವು, ಅವಮಾನ ಎದುರಿಸಿರುವ ಚಿಕ್ಕಬಳ್ಳಾಪುರ ಶಾಸಕ ಡಾ| ಸುಧಾಕರ್ ಸದ್ಯದಲ್ಲೇ ಕಮಲ ಪಾಳೆಯ ಸೇರಲಿದ್ದಾರೆ ಎಂಬ ವದಂತಿಗಳು ದೋಸ್ತಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಹರಿದಾಡುತ್ತಿವೆ. ಕಾಂಗ್ರೆಸ್ ಪಕ್ಷವು ಸುಧಾಕರ್ ಅವರಿಗೆ ನೀಡಿದ್ದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯನ್ನು ಜೆಡಿಎಸ್ ನಾಯಕರು ತಡೆಹಿಡಿದ ಬಳಿಕವಂತೂ ಡಾ| ಸುಧಾಕರ್ ಹಾಗೂ ಬೆಂಬಲಿಗ ಶಾಸಕರು ಪಕ್ಷ ತೊರೆಯಲಿದ್ದಾರೆ, ಈ ಮೂಲಕ ಸಮ್ಮಿಶ್ರ ಸರ್ಕಾರ ಉರುಳಿಸಲಿದ್ದಾರೆ ಎಂಬ ಮಾತು ಜೋರಾಗಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ ಪ್ರಶ್ನೆಗಳಿಗೆ ಅವರು ನೇರಾನೇರ ಉತ್ತರಿಸಿದ್ದಾರೆ. ‘ನನಗೆ ಎಷ್ಟೇ ನೋವು ಉಂಟಾದರೂ ಸಮ್ಮಿಶ್ರ ಸರ್ಕಾರಕ್ಕೆ ನಾನು ಧಕ್ಕೆ ತರುವುದಿಲ್ಲ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಕೈ ಜೋಡಿಸುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ನಿರ್ಧಾರವಾದ ಸಮ್ಮಿಶ್ರ ಸರ್ಕಾರವನ್ನು ಅಲುಗಾಡಲೂ ಬಿಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಅತೃಪ್ತಿಗೊಂಡಿರುವ ತಮ್ಮನ್ನು ಬಿಜೆಪಿ ನಾಯಕರು ಸಂಪರ್ಕಿಸಿದ್ದಾರಂತೆ ಹೌದಾ?

ನನಗೆ ನೋವಾಗಿದೆಯೇ ಹೊರತು ನಾನು ಅತೃಪ್ತನಲ್ಲ. ಪಕ್ಷದ ಹೈಕಮಾಂಡ್ ನನಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆ ಕೊಟ್ಟಿದೆ. ನಾನು ಕೇಳದಿದ್ದರೂ ಈ ಹುದ್ದೆ ಕೊಟ್ಟಿತ್ತು. ಆದರೆ, ಅನಗತ್ಯವಾಗಿ ಹುದ್ದೆಯ ನೇಮಕ ತಡೆ ಹಿಡಿದಿರುವುದರಿಂದ ನನಗೆ ನೋವಾಗಿರುವುದು ಸತ್ಯ. ಆದರೆ, ನಾನು ಅತೃಪ್ತನಲ್ಲ ಹಾಗೂ ಬಿಜೆಪಿ ನಾಯಕರು ಅಥವಾ ಅತೃಪ್ತ ಕಾಂಗ್ರೆಸ್ ಶಾಸಕರಾರೂ ನನ್ನನ್ನು ಸಂಪರ್ಕಿಸಿಲ್ಲ.

ಒಂದು ವೇಳೆ ಬಿಜೆಪಿ ನಾಯಕರು ಸಂಪರ್ಕಿಸಿದರೆ ನಿಮ್ಮ ಉತ್ತರ ಏನು?

ವೈಯಕ್ತಿಕ ಆಸೆ, ಆಕಾಂಕ್ಷೆಗಳಿಗಾಗಿ ನಾನು ನಂಬಿರುವ ಆಶಯ, ಸಿದ್ಧಾಂತಗಳನ್ನು ಬಿಡಲು ಸಿದ್ಧನಿಲ್ಲ. ಅವಮಾನವನ್ನು ಸಹಿಸಿಕೊಂಡಾ ದರೂ ಪಕ್ಷದಲ್ಲೇ ಉಳಿಯುತ್ತೇನೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ಧಕ್ಕೆ ತರುವುದಿಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೆಳಗಿಳಿಸುವ ಪ್ರಯತ್ನಕ್ಕೆ ಕೈ ಜೋಡಿಸುವುದಿಲ್ಲ. ಜತೆಗೆ, ಕ್ಷೇತ್ರ ದಲ್ಲಿ ನನ್ನನ್ನು ನಂಬಿ ಬೆಂಬಲಿಸಿರುವ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗದವರ ನಂಬಿಕೆಗೆ ಎಂದೂ ಧಕ್ಕೆ ತರುವುದಿಲ್ಲ. ವೈಯಕ್ತಿಕವಾಗಿ ನಾನು ಸಾಕಷ್ಟು ನೋವು ತಿಂದಿದ್ದೇನೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹುದ್ದೆಯ ವಿಷಯ ದಲ್ಲಂತೂ ದೊಡ್ಡ ಅವಮಾನವೇ ಆಗಿದೆ. ಸಿಎಂ ಏಕೆ ತಡೆ ಹಿಡಿದಿದ್ದಾರೋ ಗೊತ್ತಿಲ್ಲ. ನನಗೆ ಕುಮಾರಸ್ವಾಮಿ ಹಾಗೂ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡರ ಬಗ್ಗೆ ಅಪಾರ ಗೌರವ ಇದೆ.

ನಿಮ್ಮ ಈ ಪರಿಸ್ಥಿತಿ ನೋಡಿ ಕ್ಷೇತ್ರದಲ್ಲಿ ಮುಖಂಡರ ಪ್ರತಿಕ್ರಿಯೆ ಹೇಗಿದೆ?

ನನಗೆ ಆಗುತ್ತಿರುವ ಅವಮಾನ ಹಾಗೂ ನೋವು ನೋಡಿ ಕ್ಷೇತ್ರದ ಮುಖಂಡರು ನನಗಿಂತಲೂ ತೀವ್ರವಾಗಿ ನೊಂದಿದ್ದಾರೆ. ಅವರು ಕಠಿಣ ನಿಲುವು ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಿದ್ದಾರೆ. ನನ್ನ ಪರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಗೆ ಮನವಿ ಪತ್ರ ನೀಡಲು ಹೋದಾಗ ನಡೆದ ಸಣ್ಣ ಪ್ರಮಾದದಿಂದಾಗಿ ಕ್ಷೇತ್ರದ ೩೦೦ಕ್ಕೂ ಹೆಚ್ಚು ಮಂದಿ ಮುಖಂಡರನ್ನು ಸಾಮೂಹಿಕವಾಗಿ ಅಮಾನತು ಗೊಳಿಸಿದ್ದಾರೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಸಂಪರ್ಕಿಸಿದರೆ ಮರುದಿನವೇ ಅಮಾನತು ವಾಪಸು ಪಡೆಯುವುದಾಗಿ ಹೇಳಿದ್ದರು. ಆದರೆ ಈವರೆಗೂ ಯಾವ ನಿರ್ಧಾರವನ್ನೂ ತೆಗೆದುಕೊಂಡಿಲ್ಲ. ಹೀಗಾಗಿ ಕಠಿಣ ನಿಲವು ತೆಗೆದುಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಯನ್ನು ಇಳಿಸಲು ಎಷ್ಟೇ ಅವಕಾಶವಿದ್ದರೂ ನಾನು ಬಳಸಿಕೊಳ್ಳುವುದಿಲ್ಲ. ಜತೆಗೆ ನನ್ನ ಜತೆಗಿರುವ ಮೂವರು ಶಾಸಕರೂ ಸಹ ಇದೇ ನಿರ್ಧಾರ ತೆಗೆದುಕೊಂಡಿದ್ದೇವೆ.