Belagavi: ಸುವರ್ಣಸೌಧ ಬಳಿ ಸಾರಿಗೆ ನೌಕರರ ಅಹೋರಾತ್ರಿ ಧರಣಿ: ನಿರ್ವಾಹಕಿ ಜಯಶ್ರೀ ಅಸ್ವಸ್ಥ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬೆಂಗಳೂರು ಸಾರಿಗೆ ಘಟಕ-20ರ ನಿರ್ವಾಹಕಿ ಜಯಶ್ರೀ ಎಂಬ ಮಹಿಳೆ ಕಳೆದ ಎರಡು ದಿನಗಳಿಂದ ಉಪವಾಸ ಕೈಗೊಂಡಿದ್ದ ಹಿನ್ನೆಲೆಯಲ್ಲಿ ಅಸ್ವಸ್ಥರಾಗಿದ್ದಾರೆ.
ಬೆಳಗಾವಿ (ಡಿ.21): ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸುವರ್ಣಸೌಧದ ಬಸ್ತವಾಡ ಬಳಿ ಸಾರಿಗೆ ನೌಕರರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಬೆಂಗಳೂರು ಸಾರಿಗೆ ಘಟಕ-20ರ ನಿರ್ವಾಹಕಿ ಜಯಶ್ರೀ ಎಂಬ ಮಹಿಳೆ ಕಳೆದ ಎರಡು ದಿನಗಳಿಂದ ಉಪವಾಸ ಕೈಗೊಂಡಿದ್ದ ಹಿನ್ನೆಲೆ ಆರೋಗ್ಯದಲ್ಲಿ ಏರು-ಪೇರು ಕಂಡು ಬಂದಿದ್ದು, ಆಂಬ್ಯುಲೆನ್ಸ್ ಮೂಲಕ ಬೆಳಗಾವಿ ಬಿಮ್ಸ್ ಆಸ್ಪತ್ರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 6 ಸಾರಿಗೆ ಸಿಬ್ಬಂದಿಗಳು ಮೊನ್ನೆಯಿಂದ (ಸೋಮವಾರ) ಉಪವಾಸ ಸತ್ಯಾಗ್ರಹ ಆರಂಭ ಮಾಡಿದ್ದು, ನಿನ್ನೆ (ಮಂಗಳವಾರ) ಸಾರಿಗೆ ಸಚಿವ ಶ್ರೀರಾಮುಲು ಸಂಧಾನ ಸಭೆ ವಿಫಲವಾಗಿ ಪ್ರತಿಭಟನೆಯನ್ನು ಮುಂದುವರೆಸಿದ್ದರು.
ಮತ್ತೆ ಅಹೋರಾತ್ರಿ ಪ್ರತಿಭಟನೆ ಮುಂದುವರೆಸಿದ ಸಾರಿಗೆ ನೌಕರರು: ಸಚಿವ ಶ್ರೀರಾಮುಲು ಮೌಖಿಕ ಭರವಸೆಗೆ ಒಪ್ಪದ ಸಾರಿಗೆ ನೌಕರರು, ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಮೂರನೇಯ ದಿನವೂ ಮುಂದುವರೆಸಲು ತೀರ್ಮಾನಿಸಿದ್ದಾರೆ. ಬೆಳಗಾವಿಯ ಬಸ್ತವಾಡ ಬಳಿಯ ಟೆಂಟ್‌ನಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಉಪವಾಸ ಸತ್ಯಾಗ್ರಹ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಸಚಿವ ಶ್ರೀರಾಮುಲು ಅಹವಾಲು ಆಲಿಸಿದ್ದರು. ಈ ವೇಳೆ ಸಚಿವ ಶ್ರೀರಾಮುಲು ಮುಂದೆ ನೌಕರಿಯಿಂದ ವಜಾಗೊಂಡ 584 ನೌಕರರು, ಇನ್ನುಳಿದ ಮೂರು ನಿಗಮಗಳಲ್ಲಿ ವಜಾಗೊಂಡ ನೂರು ನೌಕರರ ಮರು ನೇಮಕ ಮಾಡಿಕೊಳ್ಳಬೇಕು ಎಂದು ಸಾರಿಗೆ ಇಲಾಖೆ ನೌಕರರ ಪಟ್ಟು ಹಿಡಿದಿದ್ದು, ಒಂದು ತಿಂಗಳು ಕಾಲಾವಕಾಶ ಕೊಡಿ ಎಂದು ಶ್ರೀರಾಮುಲು ಮನವಿ ಮಾಡಿದ್ದರು.
ಪೊಲೀಸ್ ಬಿಗಿ ಭದ್ರತೆಯಲ್ಲಿ ಬೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆ ಆರಂಭ
ಲಿಖಿತವಾಗಿ ನೀವು ಒಂದು ತಿಂಗಳಲ್ಲಿ ಸಮಸ್ಯೆ ಬಗೆಹರಿಸ್ತಿನಿ ಎಂದು ಬರೆದುಕೊಡಿ, ನೀವು ಲಿಖಿತವಾಗಿ ಬರೆದುಕೊಟ್ಟರೆ ನಾವು ಪ್ರತಿಭಟನೆ ಹಿಂದೆ ಪಡೆಯುತ್ತೆವೆ ಎಂದು ಸಾರಿಗೆ ನೌಕರರು ಹೇಳಿದಾಗ ಲಿಖಿತವಾಗಿ ಬರೆದುಕೊಡಲು ಆಗಲ್ಲ ಎಂದು ಸಚಿವ ಶ್ರೀರಾಮುಲು ಹೊರ ನಡೆದಿದ್ದರು. ಹೀಗಾಗಿ ಮತ್ತೆ ಅಹೋರಾತ್ರಿ ಪ್ರತಿಭಟನೆಯನ್ನು ಸಾರಿಗೆ ನೌಕರರು ಮುಂದುವರೆಸಿದ್ದು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲು ನಿರ್ಧಾರ ಮಾಡಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸಾರಿಗೆ ನೌಕರರು ಅನಾರೋಗ್ಯ ಕಾರಣದಿಂದ ಸ್ವಯಂ ನಿವೃತ್ತಿ ಪಡೆದಿದ್ದಾರೆ. ನಿವೃತ್ತಿ ಬಳಿಕ ಅವರಿಗೆ ನೀಡಬೇಕಾದ ಉಪಧನ, ಗಳಿಗೆ ರಜೆ ಹಾಗೂ ಇತ್ಯಾದಿ ಸೌಲಭ್ಯಗಳನ್ನು ಇಲಾಖೆ ಒದಗಿಸುತ್ತಿಲ್ಲ. ನಾನಾ ಚಿಕಿತ್ಸೆಗಳ ಸಲುವಾಗಿ ಆಸ್ಪತ್ರೆಯಲ್ಲಿ ದಾಖಲಾದ ನೌಕರರು ಚಿಕಿತ್ಸಾ ವೆಚ್ಚದ ಭರಿಸಲು ಹಣವಿಲ್ಲದಿರುವ ಹೀನಾಯ ಪರಿಸ್ಥಿತಿ ತಲುಪಿದ್ದಾರೆ. ಜೊತೆಗೆ ಸೇವೆಯಲ್ಲಿದ್ದಾಗ ಸಾರಿಗೆ ನೌಕರರು ಮನೆ ಕಟ್ಟುವುದಕ್ಕಾಗಿ ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳನ್ನು ಪಡೆದಿದ್ದಾರೆ. ಪ್ರಸ್ತುತ ನೌಕರರು ನಿವೃತ್ತಿ ಹೊಂದಿರುವುದರಿಂದ ಸಂಬಳ ಸ್ಥಗಿತಗೊಂಡಿದೆ. ಪ್ರಸ್ತುತ ನಿವೃತ್ತಿ ನಂತರ ಹಣ ನೀಡದಿದ್ದರೇ ನೌಕರರು ಮನೆ, ಆಸ್ತಿಗಳು ಹರಾಜಿಗೆ ಗುರಿಯಾಗುವ ಪರಿಸ್ಥಿತಿ ಬಂದಿದೆ. ನಿವೃತ್ತಿ ನೌಕರರಿಗೆ ಮಕ್ಕಳ ವಿದ್ಯಾಭ್ಯಾಸ, ಮಕ್ಕಳ ಮದುವೆ ಜೊತೆಗೆ ಮನೆ ನಿರ್ವಹಣೆಯು ಕಷ್ಟಕರವಾಗಿದೆ.
2 ವರ್ಷದಿಂದ ಅಲ್ಪಸಂಖ್ಯಾತರಿಗೆ ಅನುದಾನ ನೀಡಿಲ್ಲ: ಸಿಎಂ ಬೊಮ್ಮಾಯಿ
ಆದ್ದರಿಂದ ನಿವೃತ್ತಿ ನೌಕರರ ಬಾಕಿಯಿರುವ ಎಲ್ಲ ಹಣವನ್ನು ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ಬಿ.ಎಸ್.ಯಡಿಯೂರಪ್ಪ ಅವರು ಸಿಎಂ ಆಗಿರುವಾಗ ಕಲಬರ್ಗಿ ಲಿಂಗಾಯತ ಸಮಾವೇಶದ ವೇಳೆ ನಮ್ಮ ಸಾರಿಗೆ ಸಂಸ್ಥೆ ನೌಕರರಿಗೆ ಮಾಸಿಕ .10 ಸಾವಿರ ಪಿಂಚಣಿ ನೀಡುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಈ ಕುರಿತು ಗಮನ ಹರಿಸಿ ಭರವಸೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಕಳೆದ 5 ವರ್ಷಗಳಿಂದ ಸಾರಿಗೆ ಇಲಾಖೆಯು ನೌಕರರಿಗೆ ಸಮವಸ್ತ್ರ ಮತ್ತು ಹೊಲಿಗೆ ವೆಚ್ಚವನ್ನು ನೀಡಿಲ್ಲ. ಆದಾಗ್ಯೂ ಸಮವಸ್ತ್ರ ಧರಿಸಿಲ್ಲ ಎಂದು ಸಾವಿರಾರು ದಂಡ ವಿಧಿಸುತ್ತಾರೆ. ಇನ್ನೂ ಹೊಲಿಗೆ ವೆಚ್ಚವೆಂದು ಇಲಾಖೆಯು ಕೇವಲ 175 ಮಾತ್ರ ನೀಡಲಾಗುತ್ತದೆ. ಬೆಲೆ ಏರಿಕೆಯ ದಿನಮಾನಗಳಲ್ಲಿ ಹೊಲಿಗೆ ವೆಚ್ಚ ಅವೈಜ್ಞಾನಿಕವಾಗಿದೆ. ಇದನ್ನು ಪರಿಷ್ಕರಿಸಿ ಪ್ರಸ್ತುತ ಮಾರುಕಟ್ಟೆದರ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.