Hunagund mass wedding ceremony: ಹುನಗುಂದ ತಾಲೂಕಿನ ವೀರಾಪೂರ ಗ್ರಾಮದ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ಸಾಮೂಹಿಕ ವಿವಾಹದಲ್ಲಿ, ನವ ದಂಪತಿಗಳು ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು ಎಂದು ಗಚ್ಚಿನಮಠದ ಅಮರೇಶ್ವರ ದೇವರು ಸಲಹೆ ನೀಡಿದರು.
ಹುನಗುಂದ (ನ.8): ನವ ದಂಪತಿಗಳು ಬದುಕಿನಲ್ಲಿ ಬರುವ ಕಷ್ಟ-ಸುಖಗಳನ್ನು ಸಮನಾಗಿ ಸ್ವೀಕರಿಸಿ ಮುನ್ನೆಡೆದಾಗ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು ಹೇಳಿದರು.
ಪ್ರತಿಯೊಬ್ಬರೂ ಸಂಸ್ಕಾರವಂತರಾಗಬೇಕು:
ತಾಲೂಕಿನ ವೀರಾಪೂರ ಗ್ರಾಮದ ಲಕ್ಕಮ್ಮದೇವಿ ಜಾತ್ರಾ ಮಹೋತ್ಸವ ನಿಮಿತ್ತ ಬುಧವಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಲಕ್ಕಮ್ಮದೇವಿ, ಪೂಜ್ಯರು ಹಾಗೂ ಗುರುಹಿರಿಯರ ಆಶೀರ್ವಾದದೊಂದಿಗೆ ವಿವಾಹ ಆಗುತ್ತಿರುವ ವಧು-ವರರು ಪುಣ್ಯವಂತರು. ಪ್ರತಿಯೊಬ್ಬರು ಉತ್ತಮ ಸಂಸ್ಕಾರವಂತರಾಗಬೇಕು ಎಂದರು.
ಗುರಗುಂಟಾದ ಚರಮೂರ್ತೆಶ್ವರ ಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿರುವ ಗ್ರಾಮಸ್ಥರು ಕಾರ್ಯ ಶ್ಲಾಘನೀಯ. ನವ ವಧು ಅತ್ತೆ- ಮಾವಂದಿರನ್ನು ತಮ್ಮ ತಂದೆ-ತಾಯಿಯಂತೆ ಪ್ರೀತಿಯಿಂದ ಕಾಣಬೇಕು ಎಂದು ಹೇಳಿದರು. ಬನ್ನಿಹಟ್ಟಿಯ ಅಯ್ಯಪ್ಪಯ್ಯ ಸಾರಂಗಮಠ ಮಾತನಾಡಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗಳು
ಬಾದ್ಮಿನಾಳ ಕನಕಗುರುಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಸರೂರಿನ ಸಿದ್ದಯ್ಯ ಗುರುವಿನ,ರಾಯಪ್ಪ ಹಾದಿಮನಿ, ಪ್ರವಚನಕಾರ ವೀರಯ್ಯಶಾಸ್ತ್ರಿ ಹಿರೇಮಠ, ರಾಮಣ್ಣ ಹಿರೇಮನಿ, ಬಸವರಾಜ ವಾಲಿಕಾರ, ಸಂಗಯ್ಯ ಜಂಗಮದ, ಫಕೀರಪ್ಪ ರಾಮವಾಡಗಿ, ಮಹಾಂತೇಶ ವಡಗೇರಿ, ಸೋಮಶೇಖರ ವನಂಜಕರ ಇದ್ದರು.
