ವೀಕೆಂಡ್‌ ರಜೆಯ ಮಜ ಅನುಭವಿಸಲು, ಜಲಧಾರೆಗಳ ವೈಭೋಗ ಕಣ್ತುಂಬಿಕೊಳ್ಳಲು ಜನರ ದಂಡೆ ಪ್ರವಾಸಿತಾಣಗಳಿಗೆ ಹರಿದು ಬರುತ್ತಿದೆ.

ಬೆಂಗಳೂರು (ಜೂ.16): ರಾಜ್ಯದೆಲ್ಲೆಡೆ, ಅದರಲ್ಲೂ ವಿಶೇಷವಾಗಿ ಕೊಡಗು, ಕರಾವಳಿ, ಮಲೆನಾಡು ಭಾಗದಲ್ಲಿ ಮೃಗಶಿರಾ ಮಳೆ ಅಬ್ಬರಿಸುತ್ತಿದ್ದು, ಈ ಭಾಗದ ಪ್ರಮುಖ ಜಲಪಾತಗಳು, ಜಲಧಾರೆಗಳು ಮೈದಳೆದು ನಳನಳಿಸುತ್ತಿವೆ. ಹೀಗಾಗಿ, ವೀಕೆಂಡ್‌ ರಜೆಯ ಮಜ ಅನುಭವಿಸಲು, ಜಲಧಾರೆಗಳ ವೈಭೋಗ ಕಣ್ತುಂಬಿಕೊಳ್ಳಲು ಜನರ ದಂಡೆ ಪ್ರವಾಸಿತಾಣಗಳಿಗೆ ಹರಿದು ಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿನ ಝರಿಗಳಲ್ಲಿ ಮತ್ತೆ ಜಲಪಾತಗಳು ಮೈದುಂಬಿ ಧುಮುಕುತ್ತಿವೆ. ಜಿಲ್ಲೆಯ ಪ್ರಸಿದ್ಧ ಪ್ರವಾಸಿತಾಣ ಮುಳ್ಳಯ್ಯನಗಿರಿ ಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಭಾನುವಾರ 1,300ಕ್ಕೂ ಹೆಚ್ಚು ವಾಹನಗಳ ಜಮಾವಣೆಯಾಗಿ ಟ್ರಾಫಿಕ್‌ ಜಾಮ್‌ ಕಂಡು ಬಂತು. ಟ್ರಾಫಿಕ್‌ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದೇ ವೇಳೆ, ಶೃಂಗೇರಿ ತಾಲೂಕಿನ ಕಿಗ್ಗಾ ತಪ್ಪಲಿನಲ್ಲಿರುವ ಸಿರಿಮನೆ ಜಲಪಾತ ಸುಮಾರು 100 ಅಡಿ ಎತ್ತರದಿಂದ ಧುಮ್ಮುಕ್ಕುತ್ತಿದ್ದು, ಹಾಲ್ನೊರೆಯಂತೆ ಧುಮ್ಮಿಕ್ಕುವ ಇಲ್ಲಿನ ಜಲಪಾತವನ್ನು ನೋಡಿ ಪ್ರವಾಸಿಗರು ಖುಷಿ ಪಟ್ಟಿದ್ದಾರೆ. ಸ್ಥಳೀಯರ ಎಚ್ಚರಿಕೆಯ ನಡುವೆಯೂ ಬಂಡೆಗಳ ಮೇಲೆ ಹತ್ತಿ ಪ್ರವಾಸಿಗರ ಮೋಜು-ಮಸ್ತಿ ಜೋರಾಗಿತ್ತು. ಇದೇ ವೇಳೆ, ಶೃಂಗೇರಿಗೂ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಮಳೆಯ ನಡುವೆಯೂ ಚಾಮರಾಜನಗರ ಜಿಲ್ಲೆ ಬಂಡೀಪುರದಲ್ಲಿ ಪ್ರವಾಸಿಗರು ಭಾನುವಾರ ಸಫಾರಿಯ ಮೋಜು ಅನುಭವಿಸಿದರು. ಮಂಡ್ಯ-ಚಾಮರಾಜನಗರ ಜಿಲ್ಲೆಗಳ ಗಡಿಭಾಗದ ಗಗನಚುಕ್ಕಿ, ಭರಚುಕ್ಕಿ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರ ಕಣ್ಮನ ಸೆಳೆಯುತ್ತಿವೆ. ನಿರಂತರ ಮಳೆಗೆ ಕೃಷ್ಣೆಯ ಒಡಲು ಮೈದುಂಬಿ ಹರಿಯುತ್ತಿದೆ. ಹೀಗಾಗಿ, ಬೆಳಗಾವಿ ಜಿಲ್ಲೆಯ ಗೋಕಾಕ್‌, ಅಂಬುಲಿ ಫಾಲ್ಸ್‌ಗಳ ವೀಕ್ಷಣೆಗೂ ಜನರು ದಂಡಾಗಿ ಬರುತ್ತಿದ್ದಾರೆ.

ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಮಳೆ ಅಬ್ಬರಿಸುತ್ತಿದ್ದು, ವಿಶ್ವವಿಖ್ಯಾತ ಜೋಗ ಫಾಲ್ಸ್‌, ಉಂಚಳ್ಳಿ, ಸಾತೋಡಿ, ಮಾಗೋಡು ಜಲಪಾತಗಳ ಒಡಲಲ್ಲೂ ಪ್ರವಾಸಿಗರ ದಂಡು ಕಂಡು ಬರುತ್ತಿದೆ. ಇದೇ ವೇಳೆ, ಭೂಕುಸಿತದ ಎಚ್ಚರಿಕೆಯ ನಡುವೆಯೂ ಕೊಡಗಿನ ಅಬ್ಬೆ, ಇರುಪು ಫಾಲ್ಸ್‌ಗಳಲ್ಲಿ ಜನಸಂದಣಿ ಇತ್ತು. ಮಳೆ ನಡುವೆಯೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣಗಳಾದ ಕೊಲ್ಲೂರು, ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳಲ್ಲಿ ಜನಸಂದಣಿ ಕಂಡು ಬಂತು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೂಡ ಕೊಲ್ಲೂರಿಗೆ ಭೇಟಿ ನೀಡಿ, ಮೂಕಾಂಬಿಕೆಯ ದರ್ಶನ ಪಡೆದು, ವಿಶೇಷ ಪೂಜೆಯಲ್ಲಿ ಭಾಗಿಯಾದರು.