‘ಹೌ ಈಸ್‌ ಮೈ ಫ್ರೆಂಡ್‌? ಹೌ ಈಸ್‌ ಹಿಸ್‌ ಹೆಲ್ತ್‌’

- ಇದು ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ಬಗ್ಗೆ ಸಚಿವ ಬಂಡೆಪ್ಪ ಖಾಶೆಂಪೂರ್‌ ಅವರ ಬಳಿ ವಿಚಾರಿಸಿದ ಪರಿ. ಬುಧವಾರ ಮಹಾರಾಷ್ಟ್ರದ ಸೊಲ್ಲಾಪೂರಕ್ಕೆ ತೆರಳುವ ಮಾರ್ಗ ಮಧ್ಯೆ ವಾಯುಮಾರ್ಗ ಬದಲಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 9ರ ಸುಮಾರಿಗೆ ಬೀದರ್‌ ವಾಯುಸೇನಾ ತರಬೇತಿ ಕೇಂದ್ರಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಖಾಶೆಂಪೂರ್‌ ಸರ್ಕಾರದ ಪರವಾಗಿ ಸ್ವಾಗತಿಸಿದರು.

"

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಖಾಶೆಂಪೂರ್‌, ತಾವು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ಪಕ್ಷದಿಂದ ಆಯ್ಕೆಯಾಗಿರುವ ಶಾಸಕ, ರಾಜ್ಯದ ಸಹಕಾರ ಸಚಿವ ಎಂದು ಪರಿಚಯಿಸಿಕೊಂಡಾಗ ಪ್ರಧಾನಿ ಮೋದಿ ನಗು ಮುಖದಿಂದ ‘ಹೇಗಿದ್ದಾರೆ ಲೀಡರ್‌?’ ಎಂದು ಮಾಜಿ ಪ್ರಧಾನಿ ದೇವೇಗೌಡರನ್ನು ವಿಚಾರಿಸಿದರು. ‘ಅದೇ ರೀತಿ ಹೇಗಿದ್ದಾರೆ ನನ್ನ ಗೆಳೆಯ? ಅವರ ಆರೋಗ್ಯ ಹೇಗಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆಯೂ ವಿಚಾರಿಸಿದರು. ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಖಾಶೆಂಪುರ್‌ ಅವರು, ಪ್ರಧಾನಿಯವರು ಮಾನವೀಯತೆಯ ದೃಷ್ಟಿಯಿಂದ ಕುಶಲೋಪಚಾರ ಕೇಳಿದರೇ ಹೊರತು ಅದಕ್ಕೆ ಬೇರೇನೂ ಅರ್ಥ ಕಲ್ಪಿಸಬೇಕಿಲ್ಲ ಎಂದು ತಿಳಿಸಿದರು.

ಬೀದರ್‌ನಿಂದ ಸೊಲ್ಲಾಪೂರಕ್ಕೆ ವಿಶೇಷ ಹೆಲಿಕಾಪ್ಟರ್‌ ಮೂಲಕ ತೆರಳಿ ಮತ್ತೆ ಮಧ್ಯಾಹ್ನ 1.30ರ ಸುಮಾರಿಗೆ ವಾಪಸಾದ ಪ್ರಧಾನಿ ನಂತರ ವಿಶೇಷ ವಿಮಾನದಲ್ಲಿ ನವದೆಹಲಿಗೆ ತೆರಳಿದರು.

ಗುಣಮುಖರಾಗಿ:

ಪ್ರಧಾನಿಯವರನ್ನು ವಾಯುನೆಲೆಯಲ್ಲಿ ಸ್ವಾಗತಿಸುವ ಸಂದರ್ಭ ಜಿಪಂ ಸದಸ್ಯೆ ಶಕುಂತಲಾ ಬೆಲ್ದಾಳೆ ಇದ್ದರು. ಅವರು ಹೂಗುಚ್ಛ ನೀಡಿ ಸ್ವಾಗತಿಸಲು ಮುಂದಾದಾಗ ಅವರ ಕೈಗೆ ಪೆಟ್ಟಾಗಿ ಪ್ಲಾಸ್ಟರ್‌ ಹಾಕಿದ್ದನ್ನು ಪ್ರಧಾನಿ ಗಮನಿಸಿದರು. ಆಗ ಕೈಗೆ ಹೇಗೆ ಪೆಟ್ಟು ಬಿತ್ತು ಎಂದು ವಿಚಾರಿಸಿದ ಪ್ರಧಾನಿ ಆರೋಗ್ಯದ ಕಡೆ ಕಾಳಜಿ ಇರಲಿ, ಶೀಘ್ರ ಗುಣಮುಖರಾಗಿ ಎಂದು ಶುಭ ಹಾರೈಸಿದರು.