ಹೊಸನಗರ[ಜ.08]: ದೇಸಿ ಗೋವು ಸಾಕಣೆಗೆ ಹೆಸರಾಗಿರುವ ಶಿವಮೊಗ್ಗ ಜಿಲ್ಲೆ ಹೊಸನಗರದ ರಾಮಚಂದ್ರಾಪುರ ಮಠದ ಗೋಶಾಲೆಯಲ್ಲಿ ಭಾನುವಾರ ರಾತ್ರಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೊಟ್ಟಿಗೆ ಭಸ್ಮವಾಗಿ ಎರಡು ಹಸುಗಳು ಬೆಂಕಿಗಾಹುತಿಯಾಗಿವೆ.

ಕಾಮದುಘಾ ಹೆಸರಿನ ಗೋಶಾಲೆಯ ಅಟ್ಟ(ಮಾಳಿಗೆ)ದಲ್ಲಿ ಹುಲ್ಲು ಸಂಗ್ರಹಿಸಲಾಗಿತ್ತು. ಭಾನುವಾರ ಸಂಜೆ ಈ ಹುಲ್ಲಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ನೋಡುನೋಡುತ್ತಿದ್ದಂತೆ ಬೆಂಕಿ ಇಡೀ ಕೊಟ್ಟಿಗೆ ಆವರಿಸಿದೆ. ಅಲ್ಲಿದ್ದ ಕೆಲಸಗಾರರು ತಕ್ಷಣವೇ ಕೊಟ್ಟಿಗೆಯಲ್ಲಿದ್ದ ಹಸುಗಳ ಹಗ್ಗವನ್ನು ಕಳಚಿದರು. ಆದರೂ ಎರಡು ಹಸುಗಳನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ತಕ್ಷಣವೇ ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದ್ದರಿಂದ ಅದೃಷ್ಟವಶಾತ್‌ ಇತರೆಡೆ ಬೆಂಕಿ ಹರಡಲಿಲ್ಲ.

ಈ ಅಗ್ನಿ ಅವಘಡದಿಂದ ಸುಮಾರು 5 ಲಕ್ಷ ರು. ನಷ್ಟಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೇಗೆ ಬೆಂಕಿ ತಗುಲಿದೆ ಎಂದು ಇನ್ನೂ ಗೊತ್ತಾಗಿಲ್ಲ. ಆದರೆ ಕೊಟ್ಟಿಗೆಯಲ್ಲಿ ಹುಲ್ಲು ಇದ್ದುದರಿಂದ ಕ್ಷಿಪ್ರವಾಗಿ ಅಗ್ನಿ ಆವರಿಸಿಕೊಂಡಿದೆ.