ಬೆಂಗಳೂರು(ಏ. 26): ರಾಜಧಾನಿಗೆ ಹೊಸ ಆತಂಕ ಸೃಷ್ಟಿಸಿರುವ ಹೊಂಗಸಂದ್ರದ ಬಿಹಾರ ಮೂಲದ ಸೋಂಕಿತನಿಂದ ಬರೋಬ್ಬರಿಗೆ 29 ಮಂದಿಗೆ ಸೋಂಕು ಖಚಿತಪಟ್ಟಿದ್ದು, 185 ಮಂದಿ ಜೊತೆ ವ್ಯಕ್ತಿ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ತೀವ್ರ ಆತಂಕ ಶುರುವಾಗಿದೆ.

ಹೊಂಗಸಂದ್ರದಲ್ಲಿ ಈಗಾಗಲೇ ಈ ವ್ಯಕ್ತಿಯಿಂದ 29 ಮಂದಿಗೆ ಸೋಂಕು ಹರಡಿದ್ದು ಒಂದೇ ಪ್ರಕರಣದಿಂದ ಹೊಂಗಸಂದ್ರದಲ್ಲಿ 30 ಮಂದಿಗೆ ಸೋಂಕು ತಗುಲಿದಂತಾಗಿದೆ. ಈಗಾಗಲೇ ಈ ವ್ಯಕ್ತಿಯ 185 ಮಂದಿ ಪ್ರಾಥಮಿಕ ಹಾಗೂ 60 ಮಂದಿ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್‌ ಮಾಡಲಾಗಿದೆ.

ಬಿಹಾರ ಕಾರ್ಮಿಕನಿಂದ ಸಮುದಾಯಕ್ಕೆ ಸೋಂಕು?

ತೀವ್ರ ಸೋಂಕಿನಿಂದ ಬಳಲುತ್ತಿರುವ ವ್ಯಕ್ತಿಯು ತನಿಖೆಗೆ ಸೂಕ್ತವಾಗಿ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಈ ವ್ಯಕ್ತಿಯು ಸೂಕ್ತ ಮಾಹಿತಿ ನೀಡಿದರೆ ಮತ್ತಷ್ಟುಮಂದಿ ಪ್ರಾಥಮಿಕ ಸಂಪರ್ಕಿತರು ಪತ್ತೆಯಾಗಬಹುದು. ಇದರಿಂದ ಸೋಂಕಿತರ ಸಂಖ್ಯೆ ಮತ್ತಷ್ಟುವೇಗವಾಗಿ ಹೆಚ್ಚಾಗಬಹುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ನಿಶ್ಯಕ್ತಿಯಿಂದ ತೀವ್ರ ನಿದ್ದೆ:

ಈಗಾಗಲೇ ಸೋಂಕಿತನಿಂದ 28 ಮಂದಿಗೆ ಸೋಂಕು ಹರಡಿದೆ. ವ್ಯಕ್ತಿಯಿಂದ ಸೋಂಕಿನ ಮೂಲದ ಮಾಹಿತಿ ಪಡೆದು ಮತ್ತಷ್ಟುಸಂಪರ್ಕಿತರನ್ನು ಪತ್ತೆ ಹಚ್ಚಿ ಕ್ವಾರಂಟೈನ್‌ ಮಾಡಬೇಕಿದೆ. ಇಲ್ಲದಿದ್ದರೆ ಸೋಂಕು ತೀವ್ರವಾಗಿ ಹರಡಬಹುದು. ಹೀಗಾಗಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ವೈದ್ಯರ ಮೂಲಕ ವಿಚಾರಣೆಗೆ ಮುಂದಾದರೂ ವ್ಯಕ್ತಿಯು ಪ್ರತಿಕ್ರಿಯಿಸುವ ಹಂತದಲ್ಲಿಲ್ಲ. ನಿಶ್ಯಕ್ತಿ ಹಾಗೂ ಔಷಧಗಳಿಂದಾಗಿ ಹೆಚ್ಚು ನಿದ್ದೆ ಮಾಡುತ್ತಿದ್ದಾರೆ. ಸಂವಹನದ ಸಮಸ್ಯೆಯೂ ಇರುವುದರಿಂದ ತಲೆನೋವಾಗಿ ಪರಿಣಮಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು

ಕಟ್ಟಡ ನಿರ್ಮಾಣ ಸಾಮಗ್ರಿ ಬೆಲೆ ಗಗನಕ್ಕೆ!

ಗಾಯತ್ರಿನಗರ ನಂಟು?

ಬಿಹಾರ ಮೂಲದ ವ್ಯಕ್ತಿಯು ಇತ್ತೀಚೆಗೆ ನಗರದ ಗಾಯತ್ರಿನಗರಕ್ಕೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದ್ದು, ಅಲ್ಲಿನ ನಾಗರೀಕರು ಆತಂಕಕ್ಕೆ ಗುರಿಯಾಗಿದ್ದಾರೆ. ಆದರೆ ವ್ಯಕ್ತಿಯು ಗಾಯತ್ರಿನಗರಕ್ಕೆ ಹೋಗಿದ್ದರು ಎಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲ. ಬಹುಶಃ ಬಿಹಾರ ಮೂಲದ ಬೇರೊಬ್ಬ ಶಂಕಿತ ಗಾಯತ್ರಿನಗರದಲ್ಲಿ ಸಿಕ್ಕಿ ಹಾಕಿಕೊಂಡು ಸ್ಥಳೀಯರಲ್ಲಿ ಆತಂಕ ಉಂಟಾಗಿರಬಹುದು ಎಂದು ಅಧಿಕಾರಿಗಳು ತಿಳಿಸಿದರು.