Asianet Suvarna News Asianet Suvarna News

ಮಂತ್ರಿಯಾದಾಗ ಖುಷಿ ಆಗಿತ್ತು, ಈಗ ಕಿರಿಕಿರಿಯಾಗುತ್ತಿದೆ: ಆರಗ!

  • ನಾನೀಗ ದೊಡ್ಡ ಮನುಷ್ಯನಾಗಿದ್ದೇನೆ. ನನಗೆ ನಿಮ್ಮ ಜೊತೆ ಮಾತನಾಡಲೂ ವ್ಯವಸ್ಥೆ ಬಿಡುತ್ತಿಲ್ಲ
  •  ಒಂದೆರಡು ದಿನ ಏನೋ ಒಂಥರಾ ಖುಷಿಯಾಗಿತ್ತು. ಈಗ ಕಿರಿಕಿರಿಯಾಗುತ್ತಿದೆ.
  • ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಅನುಭವನ್ನು ಹಂಚಿಕೊಂಡರು.
home minister Post handling is very tough says Minister araga jnanendra snr
Author
Bengaluru, First Published Aug 17, 2021, 7:36 AM IST

 ಶಿವಮೊಗ್ಗ (ಆ.17):  ನಾನೀಗ ದೊಡ್ಡ ಮನುಷ್ಯನಾಗಿದ್ದೇನೆ. ನನಗೆ ನಿಮ್ಮ ಜೊತೆ ಮಾತನಾಡಲೂ ವ್ಯವಸ್ಥೆ ಬಿಡುತ್ತಿಲ್ಲ. ಆರಂಭದ ಒಂದೆರಡು ದಿನ ಏನೋ ಒಂಥರಾ ಖುಷಿಯಾಗಿತ್ತು. ಈಗ ಕಿರಿಕಿರಿಯಾಗುತ್ತಿದೆ. ಹಾರಾಡ್ಕೊಂಡು, ಓಡಾಡ್ಕೊಂಡು ಇದ್ದ ನನಗೀಗ ಕಬ್ಬಿಣದ ಕೋಟೆ ಕಟ್ಟಲಾಗಿದೆ ಎಂಬ ಭಾವ ಬರುತ್ತಿದೆ. ದಯವಿಟ್ಟು ಯಾರೂ ಅನ್ಯಥಾ ಭಾವಿಸಬಾರದು ಎಂದು ನೂತನ ಗೃಹ ಸಚಿವ ಆರಗ ಜ್ಞಾನೇಂದ್ರ ತಮ್ಮ ಅನುಭವನ್ನು ಹಂಚಿಕೊಂಡರು.

ಕರ್ನಾಟಕ ಅಡಕೆ ಸಹಕಾರ ಸಂಘಗಳ ಮಹಾಮಂಡಳಿ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಗೃಹಸಚಿವ ಹುದ್ದೆ ದೊಡ್ಡ ಸ್ಥಾನ ಎಂದುಕೊಂಡಿದ್ದೀರಿ. ನನ್ನ ಕಷ್ಟನನಗೇ ಗೊತ್ತು. ಹಾಯಾಗಿ ಇದ್ದವನಿಗೆ ಕಿರಿಕಿರಿ ಶುರುವಾಗಿದೆ. ನನ್ನ ಕಾರು ಎಷ್ಟುವೇಗವಾಗಿ ಓಡಬೇಕು ಎಂದು ನಿರ್ಧರಿಸೋದು ಕೂಡ ಪೊಲೀಸ್‌. ಮನೆ ಎದುರು ಅಗ್ನಿಶಾಮಕ ದಳ, ಪೊಲೀಸ್‌ ಪಹರೆ ಇದೆ. ಯಾರಾದ್ರೂ ಗುಂಡು ಹೊಡೆದ್ರೆ ಸಾಯೋ ಮುನ್ನವೇ ಆಸ್ಪತ್ರೆಗೆ ಕರೆದೊಯ್ಯಬೇಕೆಂಬ ಕಾರಣಕ್ಕೇನೋ ಒಂದು ಆ್ಯಂಬುಲೆನ್ಸ್‌ ಸಹ ಇದೆ ಎಂದು ತಮಾಷೆಯಾಗಿ ಹೇಳಿದರು.

ಖಾತೆ ಕ್ಯಾತೆ ಮಧ್ಯೆ ಮೊದಲ ಸಲ ಸಚಿವರಾದವರಿಗೆ ಪ್ರಮುಖ ಖಾತೆ ಹುಡುಕಿಕೊಂಡು ಬಂದವು

ರಾತ್ರಿ ಸರಿಯಾಗಿ ನಿದ್ರೆ ಮಾಡೋಕೂ ಬಿಡೋದಿಲ್ಲ. ಕೆಲ ದಿನದ ಹಿಂದೆ ಬೆಳಗಿನ ಜಾವ ಸುಖದ ನಿದ್ದೆಯಲ್ಲಿ ಇದ್ದೆ. ಹಿರಿಯ ಪೊಲೀಸ್‌ ಅಧಿಕಾರಿ ಕರೆ ಮಾಡಿ ಗಣ್ಯ ವ್ಯಕ್ತಿಯೊಬ್ಬರ ಮನೆಯಲ್ಲಿ ನಿಂತ ಕಾರಿಗೆ ಬೆಂಕಿ ಬಿದ್ದಿದೆ. ಇದು ನಿಮ್ಮ ಮಾಹಿತಿಗಾಗಿ ಎಂದರು.

ಕೆಲ ದಿನಗಳ ಹಿಂದೆ ಶೃಂಗೇರಿ ದೇವಸ್ಥಾನಕ್ಕೆ ಹೋಗಿ ದೇವರೆದುರು ನಿಂತಾಗ ಇಷ್ಟುದೊಡ್ಡ ಖಾತೆ ಬೇಕಾ? ಬಿಟ್ಟು ಬಿಡಲಾ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದೆ. ಆದರೆ ಹೋರಾಟದಿಂದ ಬಂದವನು. ಬಡತನದ ಬೆಂಕಿಯಿಂದ ಎದ್ದವನು. ಹಾಗಾಗಿ ಸವಾಲುಗಳನ್ನು ಎದುರಿಸಿ ಕೆಲಸ ಮಾಡದಿದ್ದರೆ ಜನ ಏನಂದಾರು ಎಂದು ಕೊಂಡು ಮುಂದಡಿಯಿಟ್ಟಿದ್ದೇನೆ. ಸಮರ್ಥವಾಗಿ ನಿಭಾಯಿಸಿ, ಜನರ ಸಂಕಷ್ಟವನ್ನು ದೂರ ಮಾಡುವ ಕೆಲಸ ಮಾಡುತ್ತೇನೆ ಎಂದರು.

ಆರಗ ಜ್ಞಾನೇಂದ್ರ, ಗೃಹ ಸಚಿವ

Follow Us:
Download App:
  • android
  • ios